ADVERTISEMENT

‘ಶೋಷಿತರ ಅಭಿವೃದ್ಧಿಗೆ ಬದ್ಧ’

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2020, 11:01 IST
Last Updated 30 ಅಕ್ಟೋಬರ್ 2020, 11:01 IST
ಶಿರಾ ತಾಲ್ಲೂಕಿನ ಕೆಂಚಗಾನಹಳ್ಳಿ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಸಿ.ಎಂ.ರಾಜೇಶ್ ಗೌಡ ಪರ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಮತಯಾಚಿಸಿದರು
ಶಿರಾ ತಾಲ್ಲೂಕಿನ ಕೆಂಚಗಾನಹಳ್ಳಿ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಸಿ.ಎಂ.ರಾಜೇಶ್ ಗೌಡ ಪರ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಮತಯಾಚಿಸಿದರು   

ಶಿರಾ: ‘ಹಿಂದುಳಿದ ಹಾಗೂ ಶೋಷಿತ ಸಮುದಾಯಗಳನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ನಿರ್ಲಕ್ಷಿಸಿವೆ. ಇಂತಹ ಸಮುದಾಯಗಳ ಅಭಿವೃದ್ಧಿ ಬಿಜೆಪಿ‌ಯಿಂದ ಮಾತ್ರ ಸಾಧ್ಯ’ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.

ತಾಲ್ಲೂಕಿನ ಮಲ್ಲಶೆಟ್ಟಿಹಳ್ಳಿ, ಕೆಂಚಗಾನಹಳ್ಳಿ, ಗಾಂಧಿನಗರ, ಕುಂಟೇಗೌಡನಹಳ್ಳಿ, ನಾಗೇನಹಳ್ಳಿ ಗ್ರಾಮಗಳಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಸಿ.ಎಂ.ರಾಜೇಶ್ ಗೌಡ ಪರ ಮತಯಾಚಿಸಿದರು.

ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದು, ಇಲ್ಲೂ ಬಿಜೆಪಿ ‌ಶಾಸಕ ಆಯ್ಕೆಯಾದರೆ ಕ್ಷೇತ್ರದ ಅಭಿವೃದ್ಧಿ ಸಾಧ್ಯ ಎಂದರು.

ADVERTISEMENT

ಯೋಜನಾ ಆಯೋಗದ ಉಪಾಧ್ಯಕ್ಷ ಪುಟ್ಟಸ್ವಾಮಿ, ಕೆ.ಎಸ್. ಕಿರಣ್ ಕುಮಾರ್, ರಂಗನಾಥ್ ಗೌಡ, ಮುಡಿಮಡು ಮಂಜುನಾಥ್ ಇದ್ದರು.

ಮಡಿವಾಳರ ಸಮಾವೇಶ: ನಗರದಲ್ಲಿ ಬಿಜೆಪಿ ಬೆಂಬಲಿತ ಮಡಿವಾಳರ ಸಮಾವೇಶ ನಡೆಯಿತು.

ಕಾಯಕ ಸಮುದಾಯಗಳ ಸಂಘಟಕ ರಘು ಕೌಟಿಲ್ಯ ಮಾತನಾಡಿ, ‘ಮಡಿವಾಳ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ಅಗತ್ಯ ಇದೆ. ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ರಾಜಕೀಯ ಪ್ರಾತಿನಿಧ್ಯ ದೊರಕಿಸಿಕೊಡುತ್ತಾರೆ. ಇಲ್ಲಿರುವ ಸಮುದಾಯದವರಿಗೆ ಸಮಸ್ಯೆ ಪರಿಹರಿಸಿಕೊಡುವ ಜವಾಬ್ದಾರಿ ವಿಜಯೇಂದ್ರ ಅವರು ವಹಿಸಿಕೊಂಡಿದ್ದಾರೆ’ ಎಂದರು.

ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ ಮುಂದಿನ ದಿನಗಳಲ್ಲಿ ಮಡಿವಾಳ ಸಮುದಾಯದ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದರು.

ಮಡಿವಾಳ ಸಂಘದ ಮಹಿಳಾ ಘಟಕದ ಅಧ್ಯಕ್ಷರಾದ ವಿಜಯಲಕ್ಷ್ಮಿ ಅಂಜಿನಪ್ಪ, ಜ್ಞಾನೇಶ್, ಎಸ್.ಕೆ.ಕುಮಾರ್, ಗಂಗಣ್ಣ, ನಾಗರಾಜಪ್ಪ, ದೇವರಾಜಪ್ಪ, ರಾಮು, ಅಶ್ವಥ್, ಮೋಹನ್ ಇದ್ದರು.

‘ಟಿಆರ್‌ಪಿ ಹೆಚ್ಚಿಸಿಕೊಳ್ಳಲು ಆರೋಪ’

ಚಿಕ್ಕಮಗಳೂರು: ‘ಡಿ.ಕೆ. ಶಿವಕುಮಾರ್‌, ಸಿದ್ದರಾಮಯ್ಯ ಅವರು ಟಿಆರ್‌ಪಿ ಹೆಚ್ಚಿಸಿಕೊಳ್ಳಲು ಬಿಜೆಪಿಯನ್ನು ಆರೋಪಿಸುತ್ತಾರೆ’ ಎಂದು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಕುಟುಕಿದರು.

‘ಮುನಿರತ್ನ ಕ್ರಿಮಿನಲ್‌ ಹಿನ್ನೆಲೆ ಇರುವವರು ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಈ ಹಿಂದೆ ಕಾಂಗ್ರೆಸ್‌, ಮುನಿರತ್ನ ಅವರಿಗೆ ಎರಡು ಬಾರಿ ಟಿಕೆಟ್‌ ನೀಡಿ ಶಾಸಕರಾಗಿ ಮಾಡಿರಲಿಲ್ಲವೇ? ಕಾಂಗ್ರೆಸ್‌ನಲ್ಲಿದ್ದರೆ ಸಂಭಾವಿತ, ತ್ಯಜಿಸಿದರೆ ಕ್ರಿಮಿನಲ್‌ ಎಂದರ್ಥವೇ’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.