ADVERTISEMENT

ತುಮಕೂರು: ‘ಪೌರತ್ವ’ಕ್ಕೆ ಕಾಂಗ್ರೆಸ್‌ ಮುಖಂಡ ಬೆಂಬಲ

ಕಾಯ್ದೆ ವಿರುದ್ಧ ನಡೆಯುತ್ತಿರುವ ಗಲಾಟೆಗಳೆಲ್ಲವೂ ರಾಜಕೀಯ ಪ್ರೇರಿತ: ಕೆ.ಎನ್‌.ರಾಜಣ್ಣ

​ಪ್ರಜಾವಾಣಿ ವಾರ್ತೆ
Published 7 ಜನವರಿ 2020, 16:09 IST
Last Updated 7 ಜನವರಿ 2020, 16:09 IST
ಕೆ.ಎನ್.ರಾಜಣ್ಣ
ಕೆ.ಎನ್.ರಾಜಣ್ಣ   

ತುಮಕೂರು: ಪೌರತ್ವ(ತಿದ್ದುಪಡಿ) ಕಾಯ್ದೆಯನ್ನು ಕಾಂಗ್ರೆಸ್‌ ಬಲವಾಗಿ ವಿರೋಧಿಸುತ್ತಿರುವ ನಡುವೆಯೇ ಕಾಂಗ್ರೆಸ್‌ ಮುಖಂಡರೇ ಆಗಿರುವ ಅಪೆಕ್ಸ್‌ ಬ್ಯಾಂಕ್‌ ಅಧ್ಯಕ್ಷ ಕೆ.ಎನ್.ರಾಜಣ್ಣ ಅವರು ಕಾಯ್ದೆಯನ್ನು ಬೆಂಬಲಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದ ಅವರು, ‘ಕಾಯ್ದೆಯನ್ನು ಸರಿಯಾಗಿ ಅಧ್ಯಯನ ಮಾಡದೇ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಈ ಕಾಯ್ದೆಯಿಂದ ಯಾವುದೇ ಮುಸಲ್ಮಾನರಿಗೆ ತೊಂದರೆ ಇಲ್ಲ. 2014ರ ನಂತರ ನಮ್ಮ ದೇಶಕ್ಕೆ ವಲಸೆ ಬಂದವರಿಗೆ ತೊಂದರೆ ಇದೆ’ ಎಂದು ಅವರು ಹೇಳಿದರು.

‘ಈ ಕಾಯ್ದೆಗಾಗಿ ಬಿಜೆಪಿಯೇ ಮೊದಲ ಬಾರಿಗೆ ಬೇಡಿಕೆ ಮಂಡಿಸಿಲ್ಲ. ಬೇರೆ ರಾಷ್ಟ್ರಗಳಲ್ಲಿ ಹಿಂದೂಗಳ ಮೇಲೆ ದಬ್ಬಾಳಿಕೆ ಆಗುತ್ತಿದೆ ಎಂಬ ಕಾರಣಕ್ಕೆ, ಅವರಿಗೆ ಭಾರತದಲ್ಲಿ ಆಶ್ರಯ ಕೊಡಬೇಕು ಎಂಬ ಚಿಂತನೆ ಈ ಹಿಂದಿನಿಂದಲೂ ಇತ್ತು’ ಎಂದರು.

ADVERTISEMENT

‘ಕಾಯ್ದೆ ವಿರುದ್ಧ ನಡೆಯುತ್ತಿರುವ ದೊಂಬಿ–ಗಲಾಟೆಗಳೆಲ್ಲವೂ ರಾಜಕೀಯ ಪ್ರೇರಿತ. ಪರ–ವಿರೋಧವೂ ರಾಜಕೀಯ ಪ್ರೇರಿತ ಹೋರಾಟವಾಗಿದೆ’ ಎಂದು ಅವರು ಅಭಿಪ್ರಾಯಪಟ್ಟರು.

‘ಮಹಾತ್ಮ ಗಾಂಧಿ ಸೇರಿದಂತೆ ಕಾಂಗ್ರೆಸ್‌ನ ಜವಾಹರಲಾಲ್‌ ನೆಹರೂ, ಮನ್‌ಮೋಹನ್‌ ಸಿಂಗ್‌ ಕೂಡ ಈ ಕಾಯ್ದೆಗಾಗಿ ಆಗ್ರಹಿಸಿದ್ದರು. ಎಲ್ಲರೂ ಕಾಯ್ದೆಯನ್ನು ಸರಿಯಾಗಿ ಅಧ್ಯಯನ ಮಾಡಿ, ವಿಚಾರ ತಿಳಿದು ಮಾತನಾಡಬೇಕು’ ಎಂದು ಅವರು ಸಲಹೆ ನೀಡಿದರು.

ಪಕ್ಷಾಧ್ಯಕ್ಷನಾಗುವ ಆಸೆ: ‘ಕರ್ನಾಟಕ ಪ್ರದೇಶ ಕಾಂಗ್ರೆಸ್(ಕೆಪಿಸಿಸಿ) ಅಧ್ಯಕ್ಷನಾಗಬೇಕೆಂಬ ಆಸೆ ನನಗೂ ಇದೆ. ಅದಕ್ಕಾಗಿ ಹೈಕಮಾಂಡ್‌ಗೆ ಪತ್ರ ಬರೆದಿದ್ದೇನೆ. ಹಾಗೆಂದು ಲಾಬಿ ಮಾಡಲು ದೆಹಲಿಗೆ ಹೋಗುವುದಿಲ್ಲ. ಬದಲಿಗೆ, ವರಿಷ್ಠರಿಗೆ ಮನವಿ ಮಾಡಲು ಜ.9ರಂದು ದೆಹಲಿಗೆ ಹೋಗುತ್ತೇನೆ. ಯಾರನ್ನು ಆಯ್ಕೆ ಮಾಡ್ತಾರೆ ಅಂತ ಕಾದು ನೋಡೋಣ’ ಎಂದು ಅವರು ಹೇಳಿದರು.

‘ಡಿ.ಕೆ.ಶಿವಕುಮಾರ್‌ ಸೇರಿದಂತೆ ಯಾವುದೇ ಮುಖಂಡನ ರಾಜಕೀಯ ನಿಂತ ನೀರು ಆಗಬಾರದು. ಎಲ್ಲರಿಗೂ ಪಕ್ಷ ಸಂಘಟನೆ ಮುಖ್ಯವಾಗಬೇಕು’ ಎಂದರು.

‘ಯೇಸುಕ್ರಿಸ್ತನ ಪ್ರತಿಮೆ, ಕಾಲಭೈರವನ ಪ್ರತಿಮೆ ಕಟ್ಟುತ್ತೇವೆ ಅನ್ನೋದು ಸಮಾಜದ ಸಾಮರಸ್ಯ ಹಾಳು ಮಾಡುತ್ತದೆ. ಇಂತಹ ನಿರ್ಧಾರಗಳನ್ನು ತಳೆಯುವ ಮುನ್ನ ಮುಖಂಡರು ಸ್ಥಳೀಯರ ಅಭಿಪ್ರಾಯಗಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು’ ಎಂದು ಡಿಕೆಶಿ ಗೆ ಪರೋಕ್ಷವಾಗಿ ಟಾಂಗ್‌ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.