ADVERTISEMENT

ನೆಹರೂ ಮನೆತನಕ್ಕಾಗಿ ಸಂವಿಧಾನ ತಿದ್ದುಪಡಿ: ಸಂಸದ ಗೋವಿಂದ ಕಾರಜೋಳ

ಸಂಸದ ಗೋವಿಂದ ಕಾರಜೋಳ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 27 ಜನವರಿ 2025, 15:43 IST
Last Updated 27 ಜನವರಿ 2025, 15:43 IST
<div class="paragraphs"><p>ತುಮಕೂರಿನಲ್ಲಿ ಸೋಮವಾರ&nbsp;ಸಿಟಿಜನ್ಸ್‌ ಫಾರ್‌ ಸೋಶಿಯಲ್‌ ಜಸ್ಟಿಸ್‌ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿಕಾಸ್‌ ಪುತ್ತೂರು ಅವರ ‘ಸಂವಿಧಾನ ಬದಲಾಯಿಸಿದ್ದು ಯಾರು?’ ಪುಸ್ತಕವನ್ನು ಸಂಸದ‌ ಗೋವಿಂದ ಕಾರಜೋಳ ಬಿಡುಗಡೆ ಮಾಡಿದರು. </p></div>

ತುಮಕೂರಿನಲ್ಲಿ ಸೋಮವಾರ ಸಿಟಿಜನ್ಸ್‌ ಫಾರ್‌ ಸೋಶಿಯಲ್‌ ಜಸ್ಟಿಸ್‌ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿಕಾಸ್‌ ಪುತ್ತೂರು ಅವರ ‘ಸಂವಿಧಾನ ಬದಲಾಯಿಸಿದ್ದು ಯಾರು?’ ಪುಸ್ತಕವನ್ನು ಸಂಸದ‌ ಗೋವಿಂದ ಕಾರಜೋಳ ಬಿಡುಗಡೆ ಮಾಡಿದರು.

   

ತುಮಕೂರು: ಕಾಂಗ್ರೆಸ್‌ ತನ್ನ ಸ್ವಾರ್ಥಕ್ಕಾಗಿ, ನೆಹರೂ ಮನೆತನದ ಅಧಿಕಾರ ಉಳಿಸಿಕೊಳ್ಳಲು ಸಂವಿಧಾನ ತಿದ್ದುಪಡಿ ಮಾಡಿತ್ತು ಎಂದು ಸಂಸದ‌ ಗೋವಿಂದ ಕಾರಜೋಳ ಟೀಕಿಸಿದರು.

ನಗರದಲ್ಲಿ ಸೋಮವಾರ ಸಿಟಿಜನ್ಸ್‌ ಫಾರ್‌ ಸೋಶಿಯಲ್‌ ಜಸ್ಟಿಸ್‌ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿಕಾಸ್‌ ಪುತ್ತೂರು ರಚನೆಯ ‘ಸಂವಿಧಾನ ಬದಲಾಯಿಸಿದ್ದು ಯಾರು?’ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.

ADVERTISEMENT

ಈವರೆಗೆ 106 ಬಾರಿ ಸಂವಿಧಾನದ ತಿದ್ದುಪಡಿ ಮಾಡಲಾಗಿದೆ. ಕಾಂಗ್ರೆಸ್‌ 75 ಬಾರಿ ತಿದ್ದುಪಡಿ ಮಾಡಿದೆ. ಅಟಲ್‌ ಬಿಹಾರಿ ವಾಜಪೇಯಿ, ನರೇಂದ್ರ ಮೋದಿ ಸರ್ಕಾರ ಸಾಮಾಜಿಕ ನ್ಯಾಯಕ್ಕಾಗಿ, ದೇಶದ ಅಭಿವೃದ್ಧಿ ದೃಷ್ಟಿಯಿಂದ ಸಂವಿಧಾನ ತಿದ್ದುಪಡಿ ಮಾಡಿತ್ತು. 370ನೇ ವಿಧಿ ರದ್ದುಗೊಳಿಸುವ ಮೂಲಕ ಜಮ್ಮು, ಕಾಶ್ಮೀರದಲ್ಲಿ ದಲಿತರಿಗೆ ಮೀಸಲಾತಿ ಸೌಲಭ್ಯ ಕಲ್ಪಿಸಲಾಯಿತು ಎಂದರು.

ಕಾಂಗ್ರೆಸ್‌ ಚುನಾವಣೆಗೂ ಮುನ್ನ ಒಳ ಮೀಸಲಾತಿ ಜಾರಿಯ ಭರವಸೆ ನೀಡಿತ್ತು. ಊರೂರು ಸುತ್ತಿ ಇದನ್ನೇ ಹೇಳಿತ್ತು. ಅಧಿಕಾರಕ್ಕೆ ಬಂದ ನಂತರ ಮೀಸಲಾತಿ ಹಂಚಿಕೆಗೆ ಮುಂದಾಗಿಲ್ಲ. ಸುಪ್ರೀಂ ಕೋರ್ಟ್‌ ತೀರ್ಪು ನೀಡಿದ ನಂತರ ದಲಿತರನ್ನು ಮೋಸ ಮಾಡಲು ಹೊಸದಾಗಿ ಸಮಿತಿ ರಚಿಸಿದೆ. ಹೀಗೆ ಕಾಲ ಕಳೆದು ಅಧಿಕಾರ ಮುಗಿಸುವ ಯೋಚನೆಯಲ್ಲಿದೆ ಎಂದು ದೂರಿದರು.

ನೆಹರೂ ಮನೆತನದ ಗುಲಾಮರ ಮನಸ್ಥಿತಿಯಿಂದ ಪರಿಶಿಷ್ಟರು ಹೊರ ಬರದಿದ್ದರೆ ಸ್ವಾಭಿಮಾನದಿಂದ ಬದುಕಲು ಸಾಧ್ಯವಿಲ್ಲ. ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾಗಿದ್ದಾರೆ ಎಂದು ಖುಷಿ ಪಡಬೇಡಿ. ಅವರು ಪದಾಧಿಕಾರಿ ಮಾತ್ರ. ಕಾಂಗ್ರೆಸ್‌ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಸರ್ವಾಧಿಕಾರ ನಡೆಸುತ್ತಾರೆ. ಅವರು ಹೇಳಿದಂತೆ ಅಧಿಕಾರ ನಡೆಯುತ್ತದೆ. ಖರ್ಗೆ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂದು ಆರೋಪಿಸಿದರು.

ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ‘ದೇಶದಲ್ಲಿ ಕಾಂಗ್ರೆಸ್‌ ಆಡಳಿತದಲ್ಲಿದ್ದ 65 ವರ್ಷ ನಕಲಿ ಗಾಂಧಿ ಕುಟುಂಬ ಆಡಳಿತ ನಡೆಸಿತು. ರಾಜಪ್ರಭುತ್ವದಿಂದ ಪ್ರಜಾಪ್ರಭುತ್ವದ ಕಡೆಗೆ ಸಾಗಿದರೂ ಇಡೀ ದೇಶದ ಆಡಳಿತ ಒಂದು ಕುಟುಂಬದ ಕೈಯಲ್ಲಿತ್ತು. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸಂವಿಧಾನಕ್ಕೆ ಬೆಲೆ ಬಂದಿದೆ. ಬಿಜೆಪಿ ಆಡಳಿತದಲ್ಲಿ ಸಂವಿಧಾನ ಸುಭದ್ರವಾಗಿದೆ’ ಎಂದರು.

ಶಾಸಕ ಬಿ.ಸುರೇಶ್‌ಗೌಡ, ‘ಕಾಂಗ್ರೆಸ್‍ನಿಂದ ದಲಿತರ ಏಳಿಗೆ ಸಾಧ್ಯವಿಲ್ಲ. ಮಲ್ಲಿಕಾರ್ಜುನ ಖರ್ಗೆ, ಜಿ.ಪರಮೇಶ್ವರ, ಡಾ.ಎಚ್.ಸಿ.ಮಹದೇವಪ್ಪ ಅಂತಹವರು ಮಾತ್ರ ಉದ್ಧಾರ ಆಗುತ್ತಿದ್ದಾರೆ’ ಎಂದು ಹೇಳಿದರು.

ಶಾಸಕ ಜಿ.ಬಿ.ಜ್ಯೋತಿಗಣೇಶ್‌, ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ವೈ.ಎಚ್.ಹುಚ್ಚಯ್ಯ, ಲೇಖಕ ವಾದಿರಾಜ್, ಮುಖಂಡರಾದ ಓಂಕಾರ್, ಆಂಜಿನಪ್ಪ, ಪ್ರಭಾಕರ್, ವಿಜಯಕುಮಾರ್‌ ಇತರರು ಹಾಜರಿದ್ದರು.

‘ಪ್ಯಾಕೇಜ್‌’ಗೆ ಇಳಿದ ದಲಿತ ಸಂಘಟನೆ: ಛಲವಾದಿ

ಒಂದು ಕಾಲದಲ್ಲಿ ದಲಿತ ಸಂಘಟನೆಗಳ ಹೋರಾಟಕ್ಕೆ ಸರ್ಕಾರಗಳು ನಡುಗುತ್ತಿದ್ದವು. ಪ್ರಸ್ತುತ ಕೆಲವರು ಸಂಘಟನೆ ಹೆಸರಿನಲ್ಲಿ ‘ಪ್ಯಾಕೇಜ್‌’ಗೆ ಇಳಿದಿದ್ದಾರೆ ಎಂದು ಛಲವಾದಿ ನಾರಾಯಣಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.

ಕೆಲವರು ಕಷ್ಟಪಟ್ಟು ಹೋರಾಡುತ್ತಾರೆ. ಇನ್ನೂ ಕೆಲವರದ್ದು ಸಂಜೆಯ ತನಕ ಹೋರಾಟ ನಂತರ ತೂರಾಟವಾಗಿದೆ. ಸಂಜೆ ಐದು ಗಂಟೆಯ ನಂತರ ಅವರು ಯಾರ ಕೈಗೂ ಸಿಗುವುದಿಲ್ಲ. ₹200 ಕೋಟಿ ₹300 ಕೋಟಿ ಆಸ್ತಿವಂತರಾಗಿದ್ದಾರೆ. ಅಂಬೇಡ್ಕರ್ ಹೆಸರಿನಲ್ಲಿ ಬಂಡವಾಳ ಶಾಹಿಗಳಾಗುತ್ತಿದ್ದಾರೆ ಎಂದರು.

ಕಾಂಗ್ರೆಸ್‌ನಲ್ಲಿ ದಲಿತ ಸಮುದಾಯದ ಮೂರು ಕುಟುಂಬಗಳಿಗೆ ಅಧಿಕಾರ ಸೀಮಿತವಾಗಿದೆ. ಬೆಂಗಳೂರಿನ ಸದಾಶಿವನಗರದಲ್ಲಿ ಅವರ ಮನೆಗಳಿವೆ. ಅವರನ್ನು ತೋರಿಸಿಕೊಂಡು ದಲಿತರ ಮತ ಕೇಳುತ್ತಾರೆ. ಅವರು ಮತ್ತೊಬ್ಬ ದಲಿತರನ್ನು ಬೆಳೆಯಲು ಬಿಡುವುದಿಲ್ಲ. ಅಳಿಯ ಮಗ ಸೊಸೆ ಎಂದು ಅವರೇ ಆಡಳಿತ ನಡೆಸುತ್ತಾರೆ. ನಮಗೆ ಅಧಿಕಾರ ಬೇಡವೇ? ನಾವು ದಲಿತರಲ್ಲವೇ? ಎಂದು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.