ADVERTISEMENT

ಕೋವಿಡ್‌: ಪಟಾಕಿ ವ್ಯಾಪಾರ ಕುಸಿತ

ಸರ್ಕಾರ ಮೊದಲೇ ತಿಳಿಸಬೇಕಿತ್ತು ಅಲ್ಲವೇ? ಮಾರಾಟಗಾರರ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2020, 4:08 IST
Last Updated 14 ನವೆಂಬರ್ 2020, 4:08 IST
ಆರಾಧ್ಯ
ಆರಾಧ್ಯ   

ತುಮಕೂರು: ದೀಪಾವಳಿ ಸಮಯದಲ್ಲಿ ‘ಹಸಿರು ಪಟಾಕಿ’ ಹಚ್ಚಲು ಸರ್ಕಾರ ‌ಅವಕಾಶ ನೀಡಿದೆ. ಈ ಹಿಂದಿನ ವರ್ಷಗಳಲ್ಲಿ ಮೊದಲ ದಿನವೇ ಭರ್ಜರಿಯಾಗಿ ನಡೆಯುತ್ತಿದ್ದ ಪಟಾಕಿ ವ್ಯಾಪಾರ ಈ ಬಾರಿ ಕುಂಟುತ್ತ ಸಾಗಿದೆ.

ವ್ಯಾಪಾರಿಗಳಿಗೆ ಈ ಹಿಂದಿನ ವರ್ಷ
ಗಳಿಗೆ ಹೋಲಿಸಿದರೆ ಈ ದೀಪಾವಳಿ ಸಿಹಿಯನ್ನು ತಂದಿಲ್ಲ. ಮತ್ತೊಂದು
ಕಡೆ ದೀಪಗಳ ಮಾರಾಟಗಾರರಿಗೆ ದೀಪಾ
ವಳಿ ಹೆಚ್ಚಿನ ಸಿಹಿಯನ್ನು
ಉಣಿಸಿದೆ.

ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುವ ಪಟಾಕಿ ವ್ಯಾಪಾರಿಗಳು ‘ಸರ್ಕಾರ ಪಟಾಕಿ ಖರೀದಿಸಿದ ನಂತರ ಹಸಿರು ಪಟಾಕಿ ಮಾತ್ರ ಹಚ್ಚಲು ಆದೇಶಿಸುತ್ತಿದೆ. ಮೊದಲೇ ಹೇಳಿದ್ದರೆ ನಾವು ಸಹ ಪೂರ್ಣ ಪ್ರಮಾಣದಲ್ಲಿ ಹಸಿರು ಪಟಾಕಿಗಳನ್ನೇ ಖರೀದಿಸುತ್ತಿದ್ದೆವು. ಈ ಬಾರಿ ವ್ಯಾಪಾರಿಗಳು ನಷ್ಟ ಖಚಿತ’ ಎಂದು ಅಸಮಾಧಾನ
ವ್ಯಕ್ತಪಡಿಸುವರು.

ADVERTISEMENT

ನಗರದ ಬಿ.ಎಚ್‌.ರಸ್ತೆಯಲ್ಲಿ ಶುಕ್ರವಾರ ಪಟಾಕಿ ಅಂಗಡಿಗಳು ಕಾರ್ಯಾರಂಭ ಮಾಡಿವೆ. ಬೆಳಿಗ್ಗೆಯೇ ಮಾಲೀಕರು ಶೆಡ್‌ಗಳನ್ನು ಕಟ್ಟಿ ಪಟಾಕಿಗಳನ್ನು ಜೋಡಿಸಿದ್ದರು. ಹಸಿರು ಪಟಾಕಿ ಎನ್ನುವ ಯಾವ ಗೊಂದಲಗಳಿಗೂ ಒಳಗಾಗದೆ ಬೆರಳೆಣಿಕೆಯಷ್ಟಿದ್ದ ನಾಗರಿಕರು ಪಟಾಕಿಗಳನ್ನು ಖರೀದಿಸುತ್ತಿದ್ದರು.

‘ಮಾಲಿನ್ಯ ಉಂಟು ಮಾಡುವ ಪಟಾಕಿಗಳ ತಯಾರಿ ಹಾಗೂ ಮಾರಾಟವನ್ನು ನಿಷೇಧಿಸಿ, 2018
ರಲ್ಲಿ ಸುಪ್ರೀಂಕೋರ್ಟ್ ಆದೇಶಿಸಿತ್ತು.
ಸುಪ್ರೀಂಕೋರ್ಟ್ ಮಾರ್ಗಸೂಚಿಗಳ ಪ್ರಕಾರವೇ ಪಟಾಕಿಗಳು ತಯಾ
ರಾಗುತ್ತವೆ. ನಾವೂ ಅಂತಹ ಪಟಾಕಿಗಳನ್ನೇ ಮಾರಾಟ ಮಾಡುತ್ತಿ
ದ್ದೇವೆ’ ಎಂದು ನಗರದ
ಬಿ.ಎಚ್‌.ರಸ್ತೆಯಲ್ಲಿರುವ ಪಟಾಕಿ ಅಂಗಡಿ
ಯೊಂದರ ಮಾಲೀಕ ಆರಾಧ್ಯ ಮಂಚಲದೊರೆ
ತಿಳಿಸಿದರು.

‘ಜನರಲ್ಲಿ ಮತ್ತು ಅಧಿಕಾರಿಗಳಲ್ಲಿಯೇ ಹಸಿರು ಪಟಾಕಿ ಯಾವುದು ಎನ್ನುವ ಗೊಂದಲ ಇದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಶೇ 40ರಷ್ಟು ಮಾತ್ರ ಪಟಾಕಿಗಳನ್ನು ಮಾರಾಟಕ್ಕೆ ಇಟ್ಟಿದ್ದೇವೆ. ಹಸಿರು ಪಟಾಕಿಗಳನ್ನು ಎಲ್ಲರೂ ಮಾರಾಟ ಮಾಡುತ್ತಿದ್ದಾರೆ’ ಎಂದು ಮಾಹಿತಿ ನೀಡಿದರು.

‘ಜಿಲ್ಲಾಡಳಿತದಿಂದ ನಗರದಲ್ಲಿ ಮೂರು ಜನರು ಮಾತ್ರ ಪಟಾಕಿ ವ್ಯಾಪಾರಕ್ಕೆ ಪರವಾನಗಿ ಪಡೆದಿದ್ದೇವೆ. 2015ರಲ್ಲಿಯೂ ನಗರದಲ್ಲಿ 15ರಿಂದ 20 ಜನರು ಪಟಾಕಿ ಮಾರಾಟ ಮಾಡುತ್ತಿದ್ದರು. ಪ್ರತಿ ವರ್ಷ ಪಟಾಕಿ ಮಾರಾಟಗಾರರ ಸಂಖ್ಯೆ ಕುಸಿಯುತ್ತಿದೆ’ ಎಂದರು.

ಮುಳುಗಿದೆವು: ನಾವು ಸಹ ಪರಿಸರದ ಪರವಾಗಿಯೇ ಇದ್ದೇವೆ. ಆದರೆ ಸರ್ಕಾರ ಪಟಾಕಿ ಖರೀದಿ ಮಾಡಿದ ನಂತರ ಹಸಿರು ಪಟಾಕಿ ಮಾತ್ರ ಹಚ್ಚಬೇಕು ಎಂದು ಆದೇಶಿಸಿತು. ಇದನ್ನು ಮುಂಚೆಯೇ ಹೇಳಿದ್ದರೆ ನಮಗೂ ನಷ್ಟ ತಪ್ಪುತ್ತಿತ್ತು ಅಲ್ಲವೇ ಎಂದು ಪ್ರಶ್ನಿಸುತ್ತಾರೆ ಮತ್ತೊಂದು ಪಟಾಕಿ ಅಂಗಡಿ ಮಾಲೀಕರಾದ ಚೌಡೇಶ್‌.

‘ನಾವು ಪಟಾಕಿ ಕಂಪನಿಗಳಿಂದ ಖರೀದಿಸಿ ಸರಕನ್ನು ತಂದಿದ್ದೆವು. ಮುಂಚೆಯೇ ಹೇಳಿದ್ದರೆ ಹಸಿರು ಪಟಾಕಿ ಖರೀದಿಸುವುದೋ ಅಥವಾ ಬೇರೊಂದು ವ್ಯವಸ್ಥೆ ಮಾಡಿಕೊಳ್ಳುತ್ತಿದ್ದೆವು’ ಎಂದರು.

‘ಕಳೆದ ವರ್ಷ ಮಳೆ ಕಾರಣದಿಂದ ವ್ಯಾಪಾರ ನಡೆಯಲಿಲ್ಲ. ಈ ಬಾರಿ ಸರ್ಕಾರದ ಆದೇಶಗಳ ಪರಿಣಾಮ ವ್ಯಾಪಾರಿಗಳಿಗೆ ಪೆಟ್ಟು ಬಿದ್ದಿದೆ. ಹಣ, ಶ್ರಮ ವ್ಯರ್ಥವಾಗಿದೆ. ವ್ಯಾಪಾರವನ್ನು ಕಳೆದುಕೊಂಡಿದ್ದೇವೆ’ ಎಂದು ಬೇಸರ ವ್ಯಕ್ತಪಡಿಸುವರು.

‘ಹಸಿರು ಪಟಾಕಿ ಬಗ್ಗೆ ಟಿ.ವಿ, ಪತ್ರಿಕೆಗಳಲ್ಲಿ ಕೇಳಿ ತಿಳಿದ್ದೇವೆ. ಆದರೆ ಅವು ಯಾವು ಎಂದು ನಮಗೂ ಗೊತ್ತಿಲ್ಲ. ನಮ್ಮ ಮನೆಯಲ್ಲಿ ಮಕ್ಕಳೇ ಹೆಚ್ಚು ಪಟಾಕಿ ಹಚ್ಚುವ ಕಾರಣ ಸುರ್‌ಸುರ್ ಬತ್ತಿ, ಹೂ ಕುಂಡ, ರಾಕೆಟ್‌ಗಳನ್ನು ಪ್ರಮುಖವಾಗಿ ಖರೀದಿಸುತ್ತಿದ್ದೇವೆ’ ಎಂದು ಗ್ರಾಹಕ ರಾಜೇಶ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.