ತುಮಕೂರು: ತಾಲ್ಲೂಕಿನ ಗೂಳೂರು ಗಣಪತಿ ವಿಸರ್ಜನಾ ಮಹೋತ್ಸವ ಡಿ. 6ರಿಂದ 8ರ ವರೆಗೆ ನಡೆಯಲಿದ್ದು, ಈ ಅವಧಿಯಲ್ಲಿ ಗ್ರಾಮದಲ್ಲಿ ಮದ್ಯ ಮಾರಾಟ ನಿಷೇಧಿಸುವಂತೆ ದಲಿತ ಸೇನೆಯ ಮುಖಂಡರು ಮನವಿ ಮಾಡಿದ್ದಾರೆ.
ದಲಿತ ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಗೂಳೂರು ಸಿದ್ದರಾಜು, ಮುಖಂಡರಾದ ಗೋವಿಂದರಾಜು, ಎ.ರಂಜನ್, ಗೂಳರಿವೆ ನಾಗರಾಜು, ರಂಗನಾಥ್ ನಾಯಕ್, ನಾಗೇಶ್, ಬಾಲಾಜಿ ಇತರರು ಹೆಚ್ಚುವರಿ ಜಿಲ್ಲಾಧಿಕಾರಿ ಎನ್.ತಿಪ್ಪೇಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.
ವಿಸರ್ಜನಾ ಮಹೋತ್ಸವದಲ್ಲಿ ಕೆಲ ಕಿಡಿಗೇಡಿಗಳು ಕುಡಿದು ಗಲಾಟೆ ಮಾಡುತ್ತಾರೆ. ಜಾತ್ರೆಗೆ ಬರುವ ಮಹಿಳೆಯರು, ಮಕ್ಕಳ ಜತೆಗೆ ಅಸಭ್ಯವಾಗಿ ವರ್ತಿಸುತ್ತಾರೆ. ಇದರಿಂದ ಹಬ್ಬದ ವಾತಾವರಣ ಹಾಳಾಗುತ್ತದೆ. ಉತ್ಸವ ನಡೆಯುವ ಮೂರು ದಿನ ಗ್ರಾಮದಲ್ಲಿ ಮದ್ಯ ಮಾರಾಟ ನಿಷೇಧಿಸಬೇಕು ಎಂದು ಒತ್ತಾಯಿಸಿದರು.
ಗೂಳೂರು ಗ್ರಾಮದಲ್ಲಿ ಕಿರಾಣಿ ಅಂಗಡಿಗಳಲ್ಲಿ ಮದ್ಯ ಸಿಗುತ್ತಿದೆ. ವೆಂಕಟೇಶ್ವರ ದೇವಾಲಯದ ಮುಂಭಾಗದ ಅಂಗಡಿ, ದಲಿತರ ಕಾಲೊನಿಯ ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಜಿಲ್ಲಾ ಆಡಳಿತ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.