ADVERTISEMENT

ತುಮಕೂರು: ತ್ರಿವಿಧ ದಾಸೋಹಿ ಶಿವಕುಮಾರ ಸ್ವಾಮೀಜಿಗೆ ಭಕ್ತರ ನಮನ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2025, 22:35 IST
Last Updated 1 ಏಪ್ರಿಲ್ 2025, 22:35 IST
ತುಮಕೂರು ಸಿದ್ಧಗಂಗಾ ಮಠದಲ್ಲಿ ಮಂಗಳವಾರ ಶಿವಕುಮಾರ ಸ್ವಾಮೀಜಿ ಪುತ್ಥಳಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪುಷ್ಪ ನಮನ ಸಲ್ಲಿಸಿದರು. ಸಿದ್ಧಲಿಂಗ ಸ್ವಾಮೀಜಿ, ಶಾಸಕ ಬಿ.ಸುರೇಶ್‌ಗೌಡ, ಸಚಿವ ವಿ.ಸೋಮಣ್ಣ ಭಾಗವಹಿಸಿದ್ದರು
ತುಮಕೂರು ಸಿದ್ಧಗಂಗಾ ಮಠದಲ್ಲಿ ಮಂಗಳವಾರ ಶಿವಕುಮಾರ ಸ್ವಾಮೀಜಿ ಪುತ್ಥಳಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪುಷ್ಪ ನಮನ ಸಲ್ಲಿಸಿದರು. ಸಿದ್ಧಲಿಂಗ ಸ್ವಾಮೀಜಿ, ಶಾಸಕ ಬಿ.ಸುರೇಶ್‌ಗೌಡ, ಸಚಿವ ವಿ.ಸೋಮಣ್ಣ ಭಾಗವಹಿಸಿದ್ದರು   

ತುಮಕೂರು: ಸಿದ್ಧಗಂಗಾ ಮಠದಲ್ಲಿ ಮಂಗಳವಾರ ತ್ರಿವಿಧ ದಾಸೋಹಿ ಶಿವಕುಮಾರ ಸ್ವಾಮೀಜಿಗೆ ನಾಡಿನ ಮೂಲೆ, ಮೂಲೆಗಳಿಂದ ಬಂದಿದ್ದ ಅಪಾರ ಸಂಖ್ಯೆಯ ಭಕ್ತಗಣ ಗುರು ನಮನ ಸಲ್ಲಿಸಿತು.

ಅನ್ನ, ಅಕ್ಷರ ಹಾಗೂ ಆಶ್ರಯ ನೀಡಿದ ಗುರುವಿಗೆ ನಮಿಸಲು ಈ ಬಾರಿಯೂ ನಾಡಿನ ವಿವಿಧೆಡೆಗಳಿಂದ ಸಾಕಷ್ಟು ಸಂಖ್ಯೆಯ ಭಕ್ತರು ಬಂದಿದ್ದರು.

ಪ್ರತಿ ವರ್ಷವೂ ಏ.1ರಂದು ಸ್ವಾಮೀಜಿ ಜಯಂತಿಯನ್ನು ಸಿದ್ಧಗಂಗಾ ಮಠದಲ್ಲಿ ಭಕ್ತಿ, ಭಾವದಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಸ್ವಾಮೀಜಿ 118ನೇ ಜಯಂತಿ ಹಾಗೂ ಗುರುವಂದನಾ ಮಹೋತ್ಸವಕ್ಕೆ ಈ ಬಾರಿಯೂ ಸಹಸ್ರಾರು ಭಕ್ತರು ಮತ್ತು ಶಿಷ್ಯರು ಸಾಕ್ಷಿಯಾದರು.

ADVERTISEMENT

ಶಿವಕುಮಾರ ಸ್ವಾಮೀಜಿ ಗದ್ದುಗೆಯಲ್ಲಿ ಮುಂಜಾನೆಯಿಂದಲೇ ವಿವಿಧ ಧಾರ್ಮಿಕ ಕಾರ್ಯ ನೆರವೇರಿದವು. ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ಮೊದಲಿಗೆ ತಮ್ಮ ಗುರುವಿಗೆ ಪೂಜೆ ಸಲ್ಲಿಸುವ ಮೂಲಕ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.  

ಇಡೀ ದಿನ ತಂಡೋಪತಂಡವಾಗಿ ಮಠಕ್ಕೆ ಬಂದ ಭಕ್ತರು ಮೊದಲಿಗೆ ಸ್ವಾಮೀಜಿ ಗದ್ದುಗೆಗೆ ತೆರಳಿ ನಮಿಸಿ, ಪೂಜೆ ಸಲ್ಲಿಸಿ ನಂತರ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡರು. 

ಮಠದ ಆವರಣದಲ್ಲಿ ಸಿದ್ಧಲಿಂಗ ಸ್ವಾಮೀಜಿ ಪುತ್ಥಳಿ ಮೆರವಣಿಗೆ ನೆರವೇರಿತು. ಭಕ್ತರು ಪುತ್ಥಳಿ ಹೊರಲು ಹೆಗಲಾದರು. ಮೆರವಣಿಗೆ ಸಂದರ್ಭದಲ್ಲಿ ಸ್ವಾಮೀಜಿ ನಾಮಸ್ಮರಣೆ, ಜೈಕಾರ ಮೊಳಗಿದವು.

ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು 118 ದೀಪಗಳನ್ನು ಬೆಳಗಿಸುವ ಮೂಲಕ ಶಿವಕುಮಾರ ಸ್ಮಾಮೀಜಿ ಜಯಂತಿಗೆ ಚಾಲನೆ ನೀಡಿದರು. ಸಚಿವರು ತಮ್ಮ ಮಾತಿನುದ್ದಕ್ಕೂ ಸ್ವಾಮೀಜಿ, ದೇಶದ ಸಂಸ್ಕೃತಿ, ಗುರು ಪರಂಪರೆ, ಸಾಧಕರನ್ನು ಸ್ಮರಿಸಿದರು.

ಶಿವಕುಮಾರ ಸ್ವಾಮೀಜಿ ಅವರಂತಹ ಸಂತರಿಂದ ನಮ್ಮ ಪರಂಪರೆ ಉಳಿದಿದೆ. ಸಂತರಿಂದ ಸಂಸ್ಕೃತಿ ರಕ್ಷಣೆಯಾಗುತ್ತಿದೆ. ಮಠಾಧೀಶರು, ಸಾಧು, ಸಂತರು ಸಮಾಜಕ್ಕಾಗಿ, ಮನುಕುಲದ ಒಳಿತಿಗಾಗಿ ತಮ್ಮ ಜೀವನ ಮುಡುಪಾಗಿಟ್ಟಿದ್ದಾರೆ. ಸಿದ್ಧಗಂಗಾ ಮಠದಲ್ಲಿ ಜಾತಿ, ಧರ್ಮವನ್ನು ಮೀರಿ ಸಾವಿರಾರು ಮಕ್ಕಳಿಗೆ ಅನ್ನ, ಅಕ್ಷರ, ಆಶ್ರಯ ನೀಡಲಾಗಿದೆ. ಇದೊಂದು ಮಹತ್ತರವಾದ ಕಾರ್ಯ ಎಂದು ಹೇಳಿದರು.

‘ನಮ್ಮ ಸಂಸ್ಕೃತಿ, ಆಚಾರ, ವಿಚಾರಗಳಿಂದಾಗಿ ಈಗ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಭಾರತದ ಮಾತು ನಡೆಯುತ್ತಿದೆ. ಹಿಂದೆ ನಮ್ಮ ಮಾತುಗಳನ್ನು ಯಾರೂ ಕೇಳುತ್ತಿರಲಿಲ್ಲ. ಈಗ ವಿದೇಶಿಗರು ಕಿವಿ ತೆರೆದು ನಮ್ಮ ಮಾತು ಆಲಿಸುತ್ತಿದ್ದಾರೆ. ಶಿವಕುಮಾರ ಸ್ವಾಮೀಜಿ ಅವರಂತಹ ಸಂತರಿಂದ ಇದು ಸಾಧ್ಯವಾಗಿದೆ’ ಎಂದರು.

ಸಿದ್ಧಗಂಗಾ ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ, ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹಾಗೂ ಹಲವು ಮಠಾಧೀಶರು ವೇದಿಕೆಯಲ್ಲಿದ್ದರು.

ತುಮಕೂರು ಸಿದ್ಧಗಂಗಾ ಮಠದಲ್ಲಿ ಮಂಗಳವಾರ ಶಿವಕುಮಾರ ಸ್ವಾಮೀಜಿ ಜಯಂತಿ ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಜತೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೇಂದ್ರ ಸಚಿವ ವಿ.ಸೋಮಣ್ಣ ಚರ್ಚಿಸಿದರು. ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಿದ್ಧಗಂಗಾ ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ಶಾಸಕರಾದ ಬಿ.ಸುರೇಶ್‌ಗೌಡ ಜಿ.ಬಿ.ಜ್ಯೋತಿಗಣೇಶ್ ಉಪಸ್ಥಿತರಿದ್ದರು

ಸ್ವಾಮೀಜಿಗೆ ‘ಭಾರತ ರತ್ನ’ ನೀಡುವಂತೆ ಮನವಿ

ತುಮಕೂರು: ಅನ್ನ ಅಕ್ಷರ ಆಶ್ರಯ ನೀಡಿ ಸಹಸ್ರಾರು ಮಕ್ಕಳ ಬಾಳಿಗೆ ಬೆಳಕಾಗಿದ್ದ ಶಿವಕುಮಾರ ಸ್ವಾಮೀಜಿಗೆ ‘ಭಾರತ ರತ್ನ’ ಗೌರವ ನೀಡುವಂತೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮನವಿ ಮಾಡಿದರು. ‘ರಕ್ಷಣಾ ಸಚಿವ ರಾಜನಾಥ್‌ ಸಿಂಗ್ ಅವರು ಪ್ರಧಾನಿ ಬಳಿ ಸ್ವಾಮೀಜಿಗೆ ಭಾರತ ರತ್ನ ಗೌರವ ನೀಡುವ ವಿಷಯ ಪ್ರಸ್ತಾಪಿಸಬೇಕು’ ಎಂದು ಕೇಳಿಕೊಂಡರು. ‘ಇದು ನನ್ನೊಬ್ಬನ ಬೇಡಿಕೆಯಲ್ಲ. ಇಡೀ ರಾಜ್ಯದ ಜನರ ಬೇಡಿಕೆಯಾಗಿದ್ದು ಕೇಂದ್ರ ಸರ್ಕಾರ ಸ್ಪಂದಿಸಬೇಕು’ ಎಂದರು. ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ‘ತುಮಕೂರು ನಗರದ ಬಸ್ ನಿಲ್ದಾಣಕ್ಕೆ ಶಿವಕುಮಾರ ಸ್ವಾಮೀಜಿ ಹೆಸರಿಡುವಂತೆ ಕೋರಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿ ಹಲವು ತಿಂಗಳಾಗಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ತಕ್ಷಣ ಸರ್ಕಾರ ಒಪ್ಪಿಗೆ ನೀಡಿ ಕೇಂದ್ರಕ್ಕೆ ಕಳುಹಿಸಿಕೊಡಬೇಕು’ ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.