ADVERTISEMENT

ದಲಿತರ ಕಷ್ಟಗಳಿಗೆ ಧ್ವನಿಯಾಗದ ‘ಮೀಸಲು ರಾಜಕಾರಣಿಗಳು’

​ಪ್ರಜಾವಾಣಿ ವಾರ್ತೆ
Published 3 ಜನವರಿ 2021, 3:41 IST
Last Updated 3 ಜನವರಿ 2021, 3:41 IST
ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು
ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು   

ತುಮಕೂರು: ಪರಿಶಿಷ್ಟರ ಮೀಸಲಾತಿ ಕ್ಷೇತ್ರದಿಂದ ಗೆದ್ದು ಅಧಿಕಾರ ಅನುಭವಿಸುತ್ತಿರುವ ರಾಜಕಾರಣಿಗಳು, ಅಧಿಕಾರದ ಆಸೆಗೆ ಪರಿಶಿಷ್ಟರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ಖಂಡಿಸುತ್ತಿಲ್ಲ ಎಂದು ದಲಿತ ಸಂಘರ್ಷ ಸಮಿತಿ ಸಂಸ್ಥಾಪಕ ಸದಸ್ಯರಲ್ಲಿ ಒಬ್ಬರಾದ ಶ್ರೀಧರ್ ಕಲಿವೀರ್ ಅಸಮಾಧಾನ ವ್ಯಕ್ತಪಡಿಸಿದರು.

ನಗರದ ಕನ್ನಡಭವನದಲ್ಲಿ ದಲಿತ ಶೋಷಿತ ಸಮಾಜ ಸಂಘರ್ಷ ಸಮಿತಿ ಹಾಗೂ ಕರ್ಮಯೋಗಿ ರಂಗಸ್ವಾಮಿ ಬೆಲ್ಲದಮಡು ಚಾರಿಟಬಲ್ ಟ್ರಸ್ಟ್ ಆಯೋಜಿಸಿದ್ದ ಇತ್ತೀಚೆಗೆ ನಿಧನರಾದ ಹೋರಾಟಗಾರರಾದ ಎಂ.ಜಯಣ್ಣ ಹಾಗೂ ರಂಗಸ್ವಾಮಿ ಬೆಲ್ಲದಮಡು ಅವರ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇತರೆ ಸಮಾಜದವರ ಮತಗಳಿಗಾಗಿ ಪರಿಶಿಷ್ಟರ ಮೇಲೆ ನಡೆಯುವ ಅತ್ಯಾಚಾರಗಳನ್ನು ಖಂಡಿಸುತ್ತಿಲ್ಲ. ಡಿಎಸ್‍ಎಸ್‍ಗೆ ಯಾರ ಮತವೂ ಬೇಕಾಗಿಲ್ಲ. ದಲಿತ ಸಂಘರ್ಷ ಸಮಿತಿಯ ಸದಸ್ಯರು ಹೋರಾಟಗಾರರೇ ಹೊರತು ರಾಜಕಾರಣಿಗಳಲ್ಲ ಎಂದರು.

ADVERTISEMENT

ರಂಗಸ್ವಾಮಿ ಬೆಲ್ಲದಮಡು, ಎಂ.ಜಯಣ್ಣ ತಮ್ಮ ಕುಟುಂಬವನ್ನು ಮರೆತು ರಾಜ್ಯದಾದ್ಯಂತ ಸುತ್ತಾಡಿ ಪರಿಶಿಷ್ಟರ ಮೇಲೆ ನಡೆಯುತ್ತಿದ್ದ ಶೋಷಣೆ ವಿರೋಧಿಸಿದರು. ಅವರ ಆಶಯ ಮಣ್ಣುಪಾಲು ಮಾಡದಂತೆ ನಾವೆಲ್ಲರೂ ಎಚ್ಚರ ವಹಿಸಬೇಕಾಗಿದೆ ಎಂದು ಹೇಳಿದರು.

ದಲಿತ ಶೋಷಿತ ಸಮಾಜ ಸಂಘರ್ಷ ಸಮಿತಿ ಅಧ್ಯಕ್ಷ ವೆಂಕಟಗಿರಿಯಯ್ಯ ಅಧ್ಯಕ್ಷತೆ ವಹಿಸಿದ್ದರು. ದಸಂಸ ಮುಖಂಡರಾದ ನರಸಿಂಹಯ್ಯ, ಕುಂದೂರು ತಿಮ್ಮಯ್ಯ, ನರಸೀಯಪ್ಪ, ಸಾಮಾಜಿಕ ಹೋರಾಟಗಾರ ಕೆ.ದೊರೆರಾಜ್, ರಂಗಸ್ವಾಮಿ ಬೆಲ್ಲದಮಡು ಕುಟುಂಬದವರಾದ ಡಾ.ಡಿ.ಮುರುಳೀಧರ್, ಡಿ.ಭರತ್‍ಕುಮಾರ್, ಡಿ.ಶಿವಕುಮಾರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.