ADVERTISEMENT

ಬಿಜೆಪಿ ವಿರುದ್ಧ ರೈತ ಸಂಘ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2020, 3:43 IST
Last Updated 29 ಅಕ್ಟೋಬರ್ 2020, 3:43 IST
ಪ್ರಕಾಶ್ ಕಮ್ಮರಡಿ
ಪ್ರಕಾಶ್ ಕಮ್ಮರಡಿ   

ತುಮಕೂರು: ರೈತರು, ದಲಿತರು, ಕಾರ್ಮಿಕರ ವಿರೋಧಿ ಕಾಯ್ದೆಗಳನ್ನು ಸುಗ್ರೀವಾಜ್ಞೆ ಮೂಲಕ ಬಿಜೆಪಿ ನೇತೃತ್ವದ ಸರ್ಕಾರ ಜಾರಿಗೆ ತಂದಿದ್ದು, ಉಪಚುನಾವಣೆಯಲ್ಲಿ ತಕ್ಕಪಾಠ ಕಲಿಸಬೇಕು ಎಂದು ರೈತ, ದಲಿತ, ಕಾರ್ಮಿಕ ‘ಐಕ್ಯ ಹೋರಾಟ’ ಸಮಿತಿಯ ಪ್ರಕಾಶ್ ಕಮ್ಮರಡಿ ಮನವಿ ಮಾಡಿದರು.

ರಾಜ್ಯ, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅನುಸರಿಸುತ್ತಿರುವ ರೈತ, ಕಾರ್ಮಿಕ ವಿರೋಧಿ ನೀತಿಗಳಿಂದಾಗಿ ದೇಶ ಅತಂತ್ರ ಸ್ಥಿತಿಗೆ ತಲುಪಿದೆ. ಜನ ವಿರೋಧಿ ಕಾಯ್ದೆಗಳ ವಿರುದ್ಧ ನಿರಂತರ ಹೋರಾಟಗಳನ್ನು ಐಕ್ಯ ಹೋರಾಟ ಸಮಿತಿ ರೂಪಿಸುತ್ತಾ ಬಂದಿದೆ. ಈ ಹೋರಾಟ ಮತಗಳಾಗಿ ಪರಿವರ್ತನೆಯಾಗಬೇಕು ಎಂಬ ಉದ್ದೇಶದಿಂದ ಶಿರಾ, ಆರ್.ಆರ್.ನಗರ ಉಪಚುನಾವಣೆಯಲ್ಲಿ ಕರಪತ್ರಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿ, ಬಿಜೆಪಿ ಸೋಲಿಸುವಂತೆ ಕೇಳಿಕೊಳ್ಳಲಾಗುತ್ತಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಭೂ ಸುಧಾರಣೆ, ಕಾರ್ಮಿಕ ಕಾಯ್ದೆ, ಎಪಿಎಂಸಿ ಕಾಯ್ದೆಗಳಿಗೆ ತರಾತುರಿಯಲ್ಲಿ ತಿದ್ದುಪಡಿ ಮಾಡಿ ಜಾರಿಗೆ ತಂದಿದೆ. ಜನಸಾಮಾನ್ಯರಿಗೆ ಮರಣ ಶಾಸನವಾಗಿರುವ ಈ ತಿದ್ದುಪಡಿ ಕಾಯ್ದೆಗಳು ಜಾರಿಯಾಗದಂತೆ ತಡೆಯಲು ಉಪಚುನಾವಣೆಯಲ್ಲಿ ರೈತರು, ಕಾರ್ಮಿಕರು, ದಲಿತರು ಒಗ್ಗೂಡಿ ನಿರ್ಧಾರ ಕೈಗೊಳ್ಳಬೇಕು ಎಂದು ಕೇಳಿಕೊಂಡರು.

ADVERTISEMENT

ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ‘ಸೆಪ್ಟಂಬರ್ 26ರಂದು ನಡೆದ ಜನತಾ ಪರ್ಯಾಯ ಅಧಿವೇಶನದಲ್ಲಿ ತೆಗೆದುಕೊಳ್ಳಲಾದ ನಿರ್ಣಯದಂತೆ ಶಿರಾ, ಆರ್.ಆರ್.ನಗರ ಉಪಚುನಾವಣೆಯಲ್ಲಿ ಬಿಜೆಪಿ ಸೋಲಿಸುವಂತೆ ಕರೆ ನೀಡಲಾಗಿದೆ. ಇದರ ಭಾಗವಾಗಿ ಶಿರಾ ಕ್ಷೇತ್ರದಲ್ಲಿ ರೈತರ ಸಭೆ ನಡೆಸಿ, ಕರ ಪತ್ರ ನೀಡಿ ಜನರ ಮನವೊಲಿಸಲಾಗುತ್ತಿದೆ’ ಎಂದು ಹೇಳಿದರು.

ದಲಿತ ಸಂಘರ್ಷ ಸಮಿತಿ ಮುಖಂಡ ಗುರುಪ್ರಸಾದ್ ಕೆರಗೋಡು, ‘ಬಿಜೆಪಿಯವರ ಬಣ್ಣದ ಮಾತುಗಳಿಗೆ ಮರುಳಾಗಬೇಡಿ. ಬಾಣಲೆಯಿಂದ ಬೆಂಕಿಗೆ ಬೀಳುವ ನಿರ್ಧಾರ ಕೈಗೊಳ್ಳಬಾರದು’ ಎಂದರು.

ರೈತ ಸಂಘದ ಕಾರ್ಯಾಧ್ಯಕ್ಷ ಚಮಾರಸ ಮಾಲಿ ಪಾಟೀಲ್, ‘2014ರ ಲೋಕಸಭಾ ಚುನಾವಣೆಯಲ್ಲಿ ಇನ್ನಿಲ್ಲದ ಆಶ್ವಾಸನೆಗಳನ್ನು ನೀಡಿ ಅಧಿಕಾರಕ್ಕೆ ಬಂದ ಬಿಜೆಪಿ, ಭರವಸೆ ಈಡೇರಿಸುವಲ್ಲಿ ವಿಫಲವಾಗಿವೆ. ಕೃಷಿ ವಲಯವನ್ನು ಅತ್ಯಂತ ನಿಕೃಷ್ಟವಾಗಿ ಕಂಡಿದೆ’ ಎಂದು ಆರೋಪಿಸಿದರು.

ಮುಖಂಡರಾದ ಸಿ.ಯತಿರಾಜು, ಕಾರ್ಮಿಕ ಮುಖಂಡರಾದ ಕಾಳಪ್ಪ, ರವಿಕಿರಣ್, ಪೊನ್ನಪ್ಪ, ವೆಂಕಟೇಗೌಡ, ಎಂ.ಶಂಕರಪ್ಪ, ರಾಮು, ಚನ್ನಪ್ಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.