ADVERTISEMENT

ವಿವಾದಾತ್ಮಕ ಹೇಳಿಕೆ ನೀಡಿದ್ದ ಶರಣ್‌ ಪಂಪ್‌ವೆಲ್‌ ವಿರುದ್ಧ ಎಫ್‌ಐಆರ್‌ ದಾಖಲು

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2023, 15:45 IST
Last Updated 1 ಫೆಬ್ರುವರಿ 2023, 15:45 IST
   

ತುಮಕೂರು: ನಗರದಲ್ಲಿ ಈಚೆಗೆ ನಡೆದ ವಿಶ್ವ ಹಿಂದೂ ಪರಿಷತ್‌ ಶೌರ್ಯ ಯಾತ್ರೆಯಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದ ವಿಶ್ವ ಹಿಂದೂ ಪರಿಷತ್ತಿನ ಪ್ರಾಂತ ಸಹ ಕಾರ್ಯದರ್ಶಿ ಶರಣ್‌ ಪಂಪ್‌ವೆಲ್‌ ವಿರುದ್ಧ ಪ್ರಕರಣ ದಾಖಲಾಗಿದೆ.

ಪಂಪ್‌ವೆಲ್‌ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ರೀತಿಯಲ್ಲಿ ಮಾತನಾಡಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ಮುಸ್ಲಿಂ ಸಂಘಟನೆಗಳ ಪದಾಧಿಕಾರಿಗಳು ನಗರದ ತಿಲಕ್‌ ಪಾರ್ಕ್‌ ಠಾಣೆಗೆ ದೂರು ನೀಡಿದ್ದರು. ದೂರಿನ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಘಟನೆ ಹಿನ್ನೆಲೆ: ‘ದಕ್ಷಿಣ ಕನ್ನಡ ಜಿಲ್ಲೆ ಮಾತ್ರವಲ್ಲ, ಮುಂದೊಂದು ದಿನ ತುಮಕೂರು ಸೇರಿದಂತೆ ಇಡೀ ರಾಜ್ಯ ಹಿಂದುತ್ವದ ಫ್ಯಾಕ್ಟರಿ ಆಗಲಿದೆ. ಗುಜರಾತ್‌ನಲ್ಲಿ 59 ಜನ ಕರಸೇವಕರ ಹತ್ಯೆಗೆ ಪ್ರತೀಕಾರವಾಗಿ ಸುಮಾರು ಎರಡು ಸಾವಿರ ಜನರ ಹತ್ಯೆಯಾಗಿದೆ. ಇದು ಹಿಂದೂಗಳ ಪರಾಕ್ರಮ, ಸಾಮರ್ಥ್ಯ’ ಎಂದು ಹೇಳಿಕೆ ನೀಡಿದ್ದರು.

ADVERTISEMENT

ನೈಜ ಘಟನೆ ಉಲ್ಲೇಖಿಸಿ ಹೇಳಿಕೆ: ಶರಣ್‌ ಪಂಪ್‌ವೆಲ್ ನೈಜ ಘಟನೆಗಳನ್ನು ಉಲ್ಲೇಖಿಸಿ ಮಾತನಾಡಿದ್ದಾರೆ. ಯಾವುದೇ ರೀತಿಯ ಶಾಂತಿ ಭಂಗವುಂಟು ಮಾಡುವಂತಹ ಹೇಳಿಕೆಯಲ್ಲ ಎಂದು ಬಜರಂಗ ದಳ, ವಿಶ್ವ ಹಿಂದೂ ಪರಿಷತ್‌ ಸಂಘಟನೆ ಪಂಪ್‌ವೆಲ್‌ ಹೇಳಿಕೆಯನ್ನು ಸಮರ್ಥಿಸಿಕೊಂಡಿದೆ. ಅವರ ವಿರುದ್ಧ ದಾಖಲಾಗಿರುವ ದೂರನ್ನು ರದ್ದು ಪಡಿಸಬೇಕು ಎಂದು ಪರಿಷತ್ ಅಧ್ಯಕ್ಷ ಜಿ.ಕೆ.ಶ್ರೀನಿವಾಸ್ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.