ತುಮಕೂರು: ತಿಪಟೂರು ತಾಲ್ಲೂಕಿನ ಅಯ್ಯನಬಾವಿಯಲ್ಲಿ ಈಚೆಗೆ ಬೀದಿ ನಾಯಿಗಳ ದಾಳಿಯಿಂದ 6 ವರ್ಷದ ಬಾಲಕಿ ಮೃತಪಟ್ಟ ಪ್ರಕರಣದ ಕುರಿತು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದೆ.
‘ಇತ್ತೀಚೆಗೆ ನಗರ ಸೇರಿ ವಿವಿಧೆಡೆ ಮಕ್ಕಳ ಮೇಲೆ ಬೀದಿನಾಯಿಗಳ ದಾಳಿ ಹೆಚ್ಚುತ್ತಿದೆ. ಕೆಲವರು ಗಾಯಗೊಂಡರೆ, ಮತ್ತೆ ಕೆಲವರು ಮೃತಪಟ್ಟಿರುವುದು ವಿಪರ್ಯಾಸದ ಸಂಗತಿ. ನಿರ್ಲಕ್ಷ ವಹಿಸುತ್ತಿರುವ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು’ ಎಂದು ಆಯೋಗದ ಸದಸ್ಯ ಕೆ.ಟಿ.ತಿಪ್ಪೇಸ್ವಾಮಿ ತಿಳಿಸಿದ್ದಾರೆ.
ಮಕ್ಕಳಿಗೆ ಸಾಮಾಜಿಕ ಭದ್ರತೆ ಒದಗಿಸುವುದು ಸರ್ಕಾರದ ಆದ್ಯ ಕರ್ತವ್ಯ. ಮಕ್ಕಳನ್ನು ವಿವಿಧ ಅವಘಡ ಹಾಗೂ ಸಂಭವನೀಯ ವಿಪತ್ತುಗಳಿಂದ ರಕ್ಷಿಸಬೇಕು. ರಕ್ಷಣಾತ್ಮಕ ವ್ಯವಸ್ಥೆ ರೂಪಿಸುವಲ್ಲಿ ಸ್ಥಳೀಯ ಸರ್ಕಾರಗಳ ಪಾತ್ರ ಮಹತ್ವದ್ದು. ಆದರೆ, ಸ್ಥಳೀಯ ಸಂಸ್ಥೆಗಳು ಈ ಬಗ್ಗೆ ಗಮನ ಹರಿಸದಿರುವುದು ವಿಪರ್ಯಾಸದ ಸಂಗತಿ. ಮಕ್ಕಳ ರಕ್ಷಣೆ ವಿಚಾರದಲ್ಲಿ ಸ್ಥಳೀಯ ಆಡಳಿತಗಳು ನಿರ್ಲಕ್ಷ್ಯ ವಹಿಸಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸರ್ಕಾರ ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ರಕ್ಷಣಾ ವ್ಯವಸ್ಥೆ ಕಲ್ಪಿಸಲು ಕಾರ್ಯೋನ್ಮುಖವಾಗಬೇಕು. ನಗರದ ಮಾಂಸದ ಅಂಗಡಿಗಳ ತ್ಯಾಜ್ಯ ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು. ಸಕಾಲದಲ್ಲಿ ನಾಯಿ ಗಣತಿ, ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಬೇಕು. ನಾಯಿ ಕಡಿತಕ್ಕೆ ಒಳಗಾದ ಮಕ್ಕಳಿಗೆ ಸೂಕ್ತ ಚಿಕಿತ್ಸೆ ಮತ್ತು ಪರಿಹಾರ ಒದಗಿಸಬೇಕು ಎಂದು ನಿರ್ದೇಶಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.