ಗುಬ್ಬಿ: ಗ್ರಾಮ ಆಡಳಿತ ಅಧಿಕಾರಿಗಳ ಬೇಡಿಕೆಗೆ ಸಂಬಂಧಿಸಿದಂತೆ ಈ ಹಿಂದೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ನೇತೃತ್ವದಲ್ಲಿ ನಡೆದಿದ್ದ ಸಭೆಯಲ್ಲಿ ತೀರ್ಮಾನವಾಗಿದ್ದ ಬೇಡಿಕೆಗಳನ್ನು ಈಡೇರಿಸದ ಕಾರಣ ಸೋಮವಾರದಿಂದ ಗ್ರಾಮ ಆಡಳಿತ ಅಧಿಕಾರಿಗಳು ಅನಿರ್ದಿಷ್ಟಾವಧಿ ಮುಷ್ಕರ ಕೈಗೊಂಡರು.
ತಾಲ್ಲೂಕಿನ ಎಲ್ಲಾ ವೃತ್ತಗಳ ಗ್ರಾಮ ಆಡಳಿತ ಅಧಿಕಾರಿಗಳು ತಾಲ್ಲೂಕು ಆಡಳಿತ ಸೌಧದ ಮುಂಭಾಗ ಕೆಲಸ ಸ್ಥಗಿತಗೊಳಿಸಿ ಮುಷ್ಕರ ನಡೆಸಿದರು.
ಗ್ರಾಮ ಆಡಳಿತ ಅಧಿಕಾರಿಗಳ ಮುಷ್ಕರದಿಂದಾಗಿ ಕಂದಾಯ ಇಲಾಖೆಗೆ ಸಂಬಂಧಿಸಿದ ಯಾವುದೇ ಕೆಲಸಗಳು ಆಗದೇ ಸಾರ್ವಜನಿಕರು ದೂರದ ಹಳ್ಳಿಗಳಿಂದ ತಾಲ್ಲೂಕು ಕಚೇರಿಗೆ ಬಂದು ಬರಿಗೈಯಲ್ಲಿ ವಾಪಸ್ ಹೋಗುತ್ತಿದ್ದರು. ಸಾರ್ವಜನಿಕರು ಮುಷ್ಕರ ಸ್ಥಳಕ್ಕೆ ತೆರಳಿ ಕೆಲಸ ಮಾಡಿಕೊಡುವಂತೆ ಗ್ರಾಮ ಆಡಳಿತ ಅಧಿಕಾರಿಗಳನ್ನು ಮನವಿ ಮಾಡಿಕೊಳ್ಳುತ್ತಿದ್ದು ಕಂಡುಬಂತು.
ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಗುರುಪ್ರಸಾದ್ ಮಾತನಾಡಿ, ನಿಯಮಾವಳಿಯಂತೆ ಕೆಲಸ ಮಾಡಲು ಅನುವು ಮಾಡಿಕೊಡುವ ಜೊತೆಗೆ ಒಂದು ಕೆಲಸದ ನಂತರ ಮತ್ತೊಂದು ಕೆಲಸ ವಹಿಸಿದರೆ ಒತ್ತಡವಿಲ್ಲದೆ ಮಾಡಲು ಸಾಧ್ಯ. ಆದರೆ ಮೇಲಾಧಿಕಾರಿಗಳು ಒತ್ತಡ ಹಾಕಿ ಕೆಲಸ ಪೂರೈಸಲು ಸಮಯ ನಿಗದಿ ಮಾಡಿ ಒತ್ತಡದಲ್ಲಿ ಸಿಲುಕುವಂತೆ ಮಾಡುತ್ತಿದೆ ಎಂದು ಹೇಳಿದರು.
ಗ್ರಾಮ ಆಡಳಿತಾಧಿಕಾರಿಗಳ ಬೇಡಿಕೆಯನ್ನು ಈಡೇರಿಸಲು ಸರ್ಕಾರ ಬದ್ಧತೆ ತೋರಬೇಕು ಎಂದು ಒತ್ತಾಯಿಸಿದರು.
ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷೆ ಸುಮತಿ ಟಿ.ಎಸ್ ಮಾತನಾಡಿ, ಗ್ರಾಮ ಆಡಳಿತಾಧಿಕಾರಿಗಳಿಗೆ ಅಗತ್ಯವಿರುವ ಮೂಲ ಸೌಕರ್ಯಗಳನ್ನು ಒದಗಿಸಿಕೊಡದೆ ಕೆಲಸ ನಿಯೋಜನೆ ಮಾಡುವುದು ಸರಿಯಲ್ಲ. 20ಕ್ಕೂ ಹೆಚ್ಚು ಕೆಲಸಗಳನ್ನು ವೆಬ್ ಮತ್ತು ಮೊಬೈಲ್ ತಂತ್ರಾಂಶಗಳ ಮೂಲಕ ಕಾರ್ಯನಿರ್ವಹಿಸುವಂತೆ ಒತ್ತಡ ಹೇರಲಾಗುತ್ತಿದೆ. ಆದರೆ ತಾಂತ್ರಿಕ ಹುದ್ದೆಗಳಿಗೆ ನಿಗದಿಪಡಿಸಿರುವ ವೇತನ ಶ್ರೇಣಿ ನಿಗದಿಪಡಿಸಲು ಮೀನಮೇಷ ಎಣಿಸುವ ಮೂಲಕ ತಾರತಮ್ಯ ಎಸಗಲಾಗುತ್ತಿದೆ ಎಂದರು.
ಸಂಘದ ತಾಲ್ಲೂಕು ಘಟಕದ ಉಪಾಧ್ಯಕ್ಷ ತಾರಾಚಂದ್, ಅಪ್ಸರ, ಅಭಿಷೇಕ್, ಶಶಿಕುಮಾರ್, ಆನಂದ್, ಪ್ರಸನ್ನ ಕುಮಾರ್, ಅರ್ಪಿತ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.