ADVERTISEMENT

ಗಣಿಗಾರಿಕೆ ಆದೇಶ ವಾಪಸ್‌ಗೆ ಒತ್ತಾಯ

ತಂಗನಹಳ್ಳಿ; ರೈತರೊಂದಿಗೆ ಚರ್ಚೆ ನಡೆಸಿದ ಹನುಮಂತನಾಥ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2020, 3:55 IST
Last Updated 15 ಸೆಪ್ಟೆಂಬರ್ 2020, 3:55 IST
ಕೊರಟಗೆರೆ ತಾಲ್ಲೂಕು ತಂಗನಹಳ್ಳಿಯಲ್ಲಿ ಹನುಮಂತನಾಥ ಸ್ವಾಮೀಜಿ ನೇತೃತ್ವದಲ್ಲಿ ಗಣಿಗಾರಿಕೆ ವಿರೋಧಿಸಿ ರೈತ ಮುಖಂಡರ ಸಭೆ ನಡೆಸಿದರು. ಜಿ.ಪಂ. ಸದಸ್ಯ ಜಿ.ಆರ್.ಶಿವರಾಮಯ್ಯ ಇದ್ದರು
ಕೊರಟಗೆರೆ ತಾಲ್ಲೂಕು ತಂಗನಹಳ್ಳಿಯಲ್ಲಿ ಹನುಮಂತನಾಥ ಸ್ವಾಮೀಜಿ ನೇತೃತ್ವದಲ್ಲಿ ಗಣಿಗಾರಿಕೆ ವಿರೋಧಿಸಿ ರೈತ ಮುಖಂಡರ ಸಭೆ ನಡೆಸಿದರು. ಜಿ.ಪಂ. ಸದಸ್ಯ ಜಿ.ಆರ್.ಶಿವರಾಮಯ್ಯ ಇದ್ದರು   

ಕೊರಟಗೆರೆ: ತಾಲ್ಲೂಕಿನ 175 ಕಡೆ ಕಲ್ಲು ಗಣಿಗಾರಿಕೆ ಮತ್ತು ಕ್ರಷರ್ ಸ್ಥಾಪಿಸಲು ಸರ್ಕಾರದ ಮಟ್ಟದಲ್ಲಿ ಅನುಮತಿ ನೀಡಲು ಪೂರ್ವ ಸಿದ್ಧತೆ ನಡೆಯುತ್ತಿದೆ. ಆ ಮೂಲಕ ತಾಲ್ಲೂಕಿನ ನೈಸರ್ಗಿ ಸಂಪತ್ತನ್ನು ಲೂಟಿ ಮಾಡುವ ಹುನ್ನಾರ ಮಾಡಲಾಗುತ್ತಿದೆ ಎಂದು ಎಲೆರಾಂಪುರ ಕುಂಚಿಟಿಗ ಮಠದ ಹನುಮಂತನಾಥ ಸ್ವಾಮೀಜಿ ಆರೋಪಿಸಿದರು.

ತಾಲ್ಲೂಕಿನ ಕೋಳಾಲ ಹೋಬಳಿ ಎಲೆರಾಂಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಂಗನಹಳ್ಳಿ ಗ್ರಾಮದಲ್ಲಿ ರೈತರೊಂದಿಗೆ ಚರ್ಚೆ ನಡೆಸಿದ ಸ್ವಾಮೀಜಿ ಸಭೆ ಉದ್ದೇಶಿಸಿ ಮಾತನಾಡಿದರು.

ಸಿದ್ದರಬೆಟ್ಟ, ಗೊರವನಹಳ್ಳಿ, ದೇವರಾಯನದುರ್ಗ, ನಾಮ ಚಿಲುಮೆ, ಕ್ಯಾಮೇನಹಳ್ಳಿ ಆಂಜನೇಯ ದೇವಾಲಯ ಸೇರಿದಂತೆ ವಿವಿಧ ಯಾತ್ರಾ ಸ್ಥಳ ಹಾಗೂ ಮಠ ಮಾನ್ಯಗಳಿವೆ. ಕ್ಷೇತ್ರದ 355 ಗ್ರಾಮದಲ್ಲಿ 290 ಅಂಗನವಾಡಿ ಕೇಂದ್ರ, 300ಕ್ಕೂ ಹೆಚ್ಚು ಶಾಲಾ ಕಾಲೇಜು ಸೇರಿದಂತೆ ₹25 ಸಾವಿರ ಕೋಟಿ ವೆಚ್ಚದ ಎತ್ತಿನಹೊಳೆ ಯೋಜನೆ ಕಾಮಗಾರಿ ಚಾಲನೆಯಲ್ಲಿದೆ. ಈಗಾಗಲೇ ತಾಲ್ಲೂಕಿನಲ್ಲಿ ಅಕ್ರಮ ಗಣಿಗಾರಿಕೆ, ಕ್ರಷರ್‌ಗಳು ಎಗ್ಗಿಲ್ಲದೇ ನಡೆಯುತ್ತಿವೆ ಎಂದು ದೂರಿದರು.

ADVERTISEMENT

ಕೋಳಾಲ ಜಿಲ್ಲಾ ಪಂಚಾಯಿತಿ ಸದಸ್ಯ ಜಿ.ಆರ್.ಶಿವರಾಮಯ್ಯ ಮಾತನಾಡಿ, ತಂಗನಹಳ್ಳಿ ರೈತರ 49 ಎಕರೆ ಜಮೀನಿನ ಜತೆ ಜರಿ, ಬೆಟ್ಟದ ಸುತ್ತಮುತ್ತಲಿನ 300 ಎಕರೆ ಪರಿಸರ ವಲಯದಲ್ಲಿ ಗಣಿಗಾರಿಕೆ ನಡೆಸಲು ಹುನ್ನಾರ ನಡೆಸಲಾಗಿದೆ. ರೈತರ ಹೆಸರಿನಲ್ಲಿ ಅಧಿಕಾರ ಪಡೆಯುವ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿವೆ. ಗಣಿಗಾರಿಕೆ ವಿರುದ್ಧ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಧರಣಿ ಮಾಡುವುದಾಗಿ ಎಚ್ಚರಿಸಿದರು.

ರೈತ ಸಂಘದ ಅಧ್ಯಕ್ಷ ರಂಗಹನುಮಯ್ಯ, ಬೋರಣ್ಣ, ರವೀಂದ್ರ, ರಾಮಕೃಷ್ಣಪ್ಪ, ಉಮೇಶ್, ತಿಮ್ಮರಾಜು, ಜಯಣ್ಣ, ಶಿವಲಿಂಗಯ್ಯ, ನಾಗರಾಜು, ರಾಜಣ್ಣ, ತಿಮ್ಮಣ್ಣ, ಶಿವಲಿಂಗಯ್ಯ, ರಾಮಚಂದ್ರಯ್ಯ, ಅಂಜನಮೂರ್ತಿ, ನರಸರಾಜು, ನಂಜಮ್ಮ, ನರಸಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.