ADVERTISEMENT

ವಾಹನ ಬಿಡಲು ಹಣ ಪಡೆದ ಗ್ರಾ.ಪಂ. ಕಾರ್ಯದರ್ಶಿ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2020, 13:14 IST
Last Updated 8 ಏಪ್ರಿಲ್ 2020, 13:14 IST

ಹುಳಿಯಾರು: ಸಮೀಪದ ಮತಿಘಟ್ಟ ಕೈಮರದ ಗೇಟ್‌ನಲ್ಲಿ ಕೊರೊನಾ ಪರಿಣಾಮ ತೆರೆದಿರುವ ಚೆಕ್‌ಪೋಸ್ಟ್‌ನಲ್ಲಿ ಬುಧವಾರ ವಾಹನ ಬಿಡಲು ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಹಣ ಪಡೆದ ವಿಷಯ ಬಹಿರಂಗಗೊಂಡು ಹಿರಿಯ ಅಧಿಕಾರಿಗಳು ಮಧ್ಯೆ ಪ್ರವೇಶಿಸಿ ಹಣ ವಾಪಸ್‌ ಕೊಡಿಸಿದ್ದಾರೆ.

ಹಾಸನದ ಕೂಲಿ ಕಾರ್ಮಿಕರು ಆಂಧ್ರಪ್ರದೇಶಕ್ಕೆ ಕೂಲಿಗಾಗಿ ತೆರಳಿದ್ದರು. ಲಾಕ್‌ಡೌನ್‌ ಪರಿಣಾಮ ಅಲ್ಲಿಯೇ ನೆಲೆಗೊಂಡಿದ್ದರು. ಆದರೆ, ಆಹಾರಕ್ಕೆ ತೊಂದರೆಯಾದ ಕಾರಣ ವಾಹನವೊಂದನ್ನು ಬಾಡಿಗೆ ಪಡೆದು ಸ್ವಗ್ರಾಮಕ್ಕೆ ಹಿಂದಿರುಗುತ್ತಿದ್ದರು. ಈ ವೇಳೆ ಕೈಮರ ಚೆಕ್‌ಪೋಸ್ಟ್‌ ಬಳಿ ಕರ್ತವ್ಯದಲ್ಲಿದ್ದ ಬರಗೂರು ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಲಕ್ಷ್ಮಿಕಾಂತ್‌ ವಾಹನ ಮುಂದೆ ಬಿಡಲು ಪೊಲೀಸರಿಗೆ ತಿಳಿಯದಂತೆ ₹1 ಸಾವಿರ ಹಣ ಪಡೆದಿದ್ದರು.

ಬಳಿಕ ‘ಸ್ವಲ್ಪ ಸಮಯ ಬಿಟ್ಟು ಬನ್ನಿ ವಾಹನ ಬಿಡುತ್ತೇನೆ’ ಎಂದು ತಿಳಿಸಿದ್ದರು. ನಂತರ ಅವರ ಕರ್ತವ್ಯದ ಅವಧಿ ಮುಗಿದ ಕಾರಣ ಅಲ್ಲಿಂದ ತೆರಳಿದ್ದಾರೆ. ಕೂಲಿ ಕಾರ್ಮಿಕರು ಊಟ ಮಾಡಿಕೊಂಡು ಮುಂದೆ ಹೋಗಲು ಬಂದಾಗ ಅವರನ್ನು ತಡೆದ ಪೊಲೀಸರಿಗೆ ₹1 ಸಾವಿರ ಹಣ ಪಡೆದಿರುವುದು ಗೊತ್ತಾಯಿತು. ಕೂಡಲೇ ಕಾರ್ಯದರ್ಶಿಯ ಸಂಪರ್ಕಕ್ಕೆ ಪ್ರಯತ್ನಿಸಿದಾಗ ಮೊಬೈಲ್‌ ಸ್ವಿಚ್‌ ಆಫ್‌ ಮಾಡಿಕೊಂಡಿದ್ದರು.

ADVERTISEMENT

ಹೋಬಳಿ ಉಸ್ತುವಾರಿ ಹಂದನಕೆರೆ ಹೋಬಳಿ ಕಂದಾಯ ತನಿಖಾಧಿಕಾರಿ ಕುಮಾರ್‌ ಸ್ಥಳಕ್ಕೆ ಬಂದು ತಹಶೀಲ್ದಾರ್‌ ಗಮನಕ್ಕೆ ತಂದರು. ಅವರ ಆದೇಶದ ಮೇರೆಗೆ ಕಾರ್ಮಿಕರಿಗೆ ಹಣ ವಾಪಸ್‌ ನೀಡಿ ವಾಹನವನ್ನು ಅಲ್ಲಿಂದ ಹಿಂದಕ್ಕೆ ಕಳುಹಿಸಿ, ಕೂಲಿ ಕಾರ್ಮಿಕರಿಗೆ ಲಾರಿಗಳ ಮೂಲಕ ತಮ್ಮ ಗ್ರಾಮಗಳಿಗೆ ತೆರಳಲು ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.