ADVERTISEMENT

ಪ್ರಶ್ನಿಸುವವರಿಗೆ ಗುಂಡಿಕ್ಕುವ ಕಾಲವಿದು: ಚಿಂತಕ ಜಿ.ವಿ.ಆನಂದಮೂರ್ತಿ ಆತಂಕ

ಕನಕ ಚಿಂತನ ಮಾಲೆ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2020, 11:08 IST
Last Updated 2 ಫೆಬ್ರುವರಿ 2020, 11:08 IST
ಚಿಂತಕ ಜಿ.ವಿ.ಆನಂದಮೂರ್ತಿ ಮಾತನಾಡಿದರು. ಸುರೇಶ ನಾಗಲಮಡಿಕೆ(ಎಡದಿಂದ), ಎಂಪ್ರೆಸ್‌ ಪಿ.ಯು.ಕಾಲೇಜು ಪ್ರಾಂಶುಪಾಲ ಕೆ.ಎಸ್‌.ಸಿದ್ಧಲಿಂಗಪ್ಪ, ಲೇಖಕರಾದ ಎಸ್‌.ಕೃಷ್ಣಪ್ಪ ಮತ್ತು ಕೆ.ಪಿ.ನಟರಾಜ್‌ ಇದ್ದರು.
ಚಿಂತಕ ಜಿ.ವಿ.ಆನಂದಮೂರ್ತಿ ಮಾತನಾಡಿದರು. ಸುರೇಶ ನಾಗಲಮಡಿಕೆ(ಎಡದಿಂದ), ಎಂಪ್ರೆಸ್‌ ಪಿ.ಯು.ಕಾಲೇಜು ಪ್ರಾಂಶುಪಾಲ ಕೆ.ಎಸ್‌.ಸಿದ್ಧಲಿಂಗಪ್ಪ, ಲೇಖಕರಾದ ಎಸ್‌.ಕೃಷ್ಣಪ್ಪ ಮತ್ತು ಕೆ.ಪಿ.ನಟರಾಜ್‌ ಇದ್ದರು.   

ತುಮಕೂರು: ಇಂದು ಸುಲಭವಾಗಿ ಯಾರನ್ನೂ ಪ್ರಶ್ನಿಸುವಂತಿಲ್ಲ. ಆಳುವವರು ತಪ್ಪು ಮಾಡಿದರೂ ಆರೋಗ್ಯಕರ ವಿಮರ್ಶೆ ಮಾಡುವಂತಿಲ್ಲ. ಎಲ್ಲವನ್ನೂ ಸುಮ್ಮನೆ ಒಪ್ಪಿಕೊಳ್ಳಬೇಕಿದೆ. ಪ್ರಶ್ನೆ ಮಾಡುವವರ ಮೇಲೆ ಹಲ್ಲೆಗಳು ಆಗುತ್ತಿವೆ ಎಂದು ಚಿಂತಕ ಜಿ.ವಿ.ಆನಂದಮೂರ್ತಿ ಅವರು ಆತಂಕ ವ್ಯಕ್ತಪಡಿಸಿದರು.

ರಾಷ್ಟ್ರೀಯ ಸಂತ ಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ಎಂಪ್ರೆಸ್‌ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಗರಿಕೆ ಮನೆ ಕುಟುಂಬದವರ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ‘ಕನಕ ಚಿಂತನ ಮಾಲೆ: ಎಸ್‌.ಕೃಷ್ಣಪ್ಪ ಅವರ ಕನಕದಾಸರು ಮತ್ತು ಪಶುಪಾಲನಾ ಪರಂಪರೆ ಸಂಶೋಧನಾ ಕೃತಿ ಕುರಿತ ಅವಲೋಕನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕನಕರ ಕಾಲದಲ್ಲಿಯೂ ಪ್ರಶ್ನಿಸಲು ಅಡೆತಡೆಗಳು ಇದ್ದವು. ಆದರೆ ಹಲ್ಲೆಗಳು ಆಗುತ್ತಿರಲಿಲ್ಲ. ಇಂದಿನಂತೆ ಗುಂಡಿಕ್ಕುವ ಪ್ರವೃತ್ತಿ ಇರಲಿಲ್ಲ ಎಂದರು.

ADVERTISEMENT

ಭಿನ್ನಮತ, ಬಹುಸಂಸ್ಕೃತಿಯೇ ನಮ್ಮ ಸಮಾಜವನ್ನು ಪೊರೆಯುವ ಮುಖ್ಯ ಅಂಶಗಳು. ಇವುಗಳಿಗೆ ದಕ್ಕೆ ಬಂದಾಗ ಪ್ರಶ್ನಿಸುವವರನ್ನು ದೇಶ ಬಿಟ್ಟು ಹೋಗಲು ಹೇಳಲಾಗುತ್ತಿದೆ ಎಂದು ವಿಷಾದಿಸಿದರು.

ಕನಕರನ್ನು ಹರಿದಾಸರ ಪಂಥಕ್ಕೆ ಸೇರಿಸಲಾಗಿದೆ. ಹರಿದಾಸರು ದೈವತ್ವ, ಭಕ್ತಿ ಪ್ರಧಾನ, ದೇವಾಲಯ, ಜಾತಿ ಸಂಸ್ಕೃತಿ ಒಪ್ಪಿದವರು. ಆದರೆ, ಕನಕರ ಮಾರ್ಗವೇ ಬೇರೆಯಾಗಿತ್ತು. ಅವರು ಹರಿದಾಸರು ಪ್ರತಿನಿಧಿಸುವ ಸಂಸ್ಕೃತಿಯನ್ನು ಪ್ರಶ್ನಿಸಿದರು ಎಂದು ತಿಳಿಸಿದರು.

ಕನಕರು ‘ರಾಮಧಾನ್ಯ ಚರಿತೆ’ ಕೃತಿ ಮೂಲಕ ಶೂದ್ರ ಮತ್ತು ಶೂದ್ರರಲ್ಲದ ಸಮುದಾಯಗಳ ನಡುವಿನ ಆಹಾರ ಪದ್ಧತಿಯ ತರತಮವನ್ನು ಹೇಳಿದ್ದಾರೆ. ಶೂದ್ರರ ಆಹಾರ ಪದ್ಧತಿಯೂ ಕೀಳಲ್ಲ ಎಂದು ಸಮರ್ಥಿಸಿದವರು ಕನಕರು ಎಂದು ಹೇಳಿದರು.

ಕನಕರು ಏನನ್ನು ಪ್ರಶ್ನಿಸಿದರು ಎಂಬುದನ್ನು ಇಂದು ಮರೆಮಾಚಿ, ಅವರು ರಚಿಸಿದ ಸ್ತುತಿ ಕೀರ್ತನೆಗಳನ್ನು ಮಾತ್ರ ಎತ್ತಿ ಹಿಡಿಯಲಾಗುತ್ತಿದೆ ಎಂದು ಬೇಸರಿಸಿದರು.

ಕನಕ ಮತ್ತು ಕುವೆಂಪು ಪುರಾಣಗಳನ್ನು ಪುನರ್ ರಚನೆ ಮಾಡಿದರು. ಹರಿದಾಸಪಂಥವು ತೊಡಿಸಿದ್ದ ಕಣ್ಪಟ್ಟಿಯನ್ನು ಕಳಚಿ ಪುರಾಣಗಳನ್ನು ಓದುವುದನ್ನು ಕಲಿಸಿದರು. ಈ ಇಬ್ಬರೂ ಶೂದ್ರ ಸಮುದಾಯದಿಂದಲೇ ಬಂದವರು ಎಂದು ತಿಳಿಸಿದರು.

ಲೇಖಕ ಸುರೇಶ ನಾಗಲಮಡಿಕೆ ಪುಸ್ತಕದ ಕುರಿತು ಮಾತನಾಡುತ್ತ, ಕೃತಿ ಸತ್ಯಾಂಶಗಳನ್ನು ಶೋಧಿಸುವ, ಕನಕರನ್ನು ಬಹುಮುಖ ಆಯಾಮಗಳಲ್ಲಿ ಅಧ್ಯಯನ ಮಾಡುವ ಮಾದರಿಯಲ್ಲಿದೆ. ಜನಪದರ ಮಹಾಕಾವ್ಯಗಳಾದ ಮಂಟೇಸ್ವಾಮಿ, ಮಾದಪ್ಪ, ಹಾಲುಮತ, ಜುಂಜಪ್ಪರ ಮೌಖಿಕ ಪರಂಪರೆಯ ಹಿನ್ನಲೆಯಲ್ಲಿ ಕನಕರನ್ನು ಜೋಡಿಸುವ ಪ್ರಯತ್ನವನ್ನು ಲೇಖಕರು ಮಾಡಿದ್ದಾರೆ ಎಂದರು.

ಲೇಖಕ ಕೆ.ಪಿ.ನಾಗರಾಜ್‌, ಕನಕರ ಕಾಲಕ್ಕೆ ನಾಲ್ಕು ದಿಕ್ಕುಗಳಲ್ಲೂ ಪಶುಪಾಲನೆಯು ಜ್ವಲಂತ ಪರಂಪರೆಯಾಗಿತ್ತು. ಆ ಪರಂಪರೆಯಲ್ಲಿ ಅನುಕಂಪವಿತ್ತು, ಜೀವ ಕಾರುಣ್ಯವಿತ್ತು, ಪಶುದಯೆ ಇತ್ತು. ಅದರ ಹಿನ್ನಲೆಯಲ್ಲಿ ರಚಿತವಾದ ಈ ಕೃತಿ ಅಧ್ಯಯನಶೀಲವಾಗಿದೆ ಎಂದು ಪ್ರಶಂಸಿದರು.

ಕೀರ್ತನೆಗಳಿಗೆ ತಲೆದೂಗಿದ ಸಭಿಕರು

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ವಿದ್ವಾನ್‌ ಲಕ್ಷ್ಮಣ್‌ದಾಸ್‌ ಹಾಗೂ ಎಂಪ್ರೆಸ್‌ ಪ್ರೌಢಶಾಲೆಯ ವಿದ್ಯಾರ್ಥಿನಿಯರು ಕನಕದಾಸರ ರಚನೆಗಳನ್ನು ಮಧುರವಾಗಿ ಹಾಡಿದರು.

ಭಜಿಸಿ ಬದುಕೆಲೆ ಮಾನವ...., ಗುರುವಿನ ಮುಖದಿಂದ ಗುರುವ ಕಂಡವರಿಲ್ಲ..., ಕುಲ ಕುಲ ಎನ್ನುತ್ತಿಹರು..., ಕುಲ ಕುಲವೆಂದು ಹೊಡದಾಡದಿರಿ..., ಪರರ ಹಿತಕ್ಕೆ ಇಲ್ಲದವನ ಶರೀರ ಏತಕ್ಕೆ.... ಎಂಬ ಸಾಲುಗಳುಳ್ಳ ಕೀರ್ತನೆಗಳನ್ನು ಸಂಗೀತಗಾರರು ಸುಸ್ವರದಲ್ಲಿ ಪ್ರಸ್ತುತಪಡಿಸಿದಾಗ ಸಭಿಕರೆಲ್ಲರೂ ತಲೆದೂಗಿದರು.

ಈ ಸಂಗೀತ ಕಛೇರಿಗೆ ಹಾರ್ಮೋನಿಯಂನಲ್ಲಿ ಶಿವಲಿಂಗಶೆಟ್ಟಿ, ತಬಲದಲ್ಲಿ ಶ್ರೀಧರ್ ಅವರು ಸಾಥ್‌ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.