ADVERTISEMENT

ಗಾಂಧೀಜಿ ಅವರ 150ನೇ ಜನ್ಮ ವರ್ಷಾಚರಣೆ: ಮೇ 7ರಂದು ಗ್ರಾಮ ವಾಸ್ತವ್ಯ

​ಪ್ರಜಾವಾಣಿ ವಾರ್ತೆ
Published 6 ಮೇ 2019, 12:13 IST
Last Updated 6 ಮೇ 2019, 12:13 IST

ತುಮಕೂರು: ಮಹಾತ್ಮಗಾಂಧಿ ಚಿಂತನ ಪ್ರತಿಷ್ಠಾನ ಹಾಗೂ ಜಿಲ್ಲಾ ಸರ್ವೋದಯ ಮಂಡಲದಿಂದ ಮಹಾತ್ಮ ಗಾಂಧೀಜಿ ಅವರ 150ನೇ ಜನ್ಮ ವರ್ಷಾಚರಣೆ ಅಂಗವಾಗಿ ಮೇ 7ರಂದು ಗ್ರಾಮ ವಾಸ್ತವ್ಯ ಮತ್ತು ಗ್ರಾಮ ಭಾರತಕ್ಕಾಗಿ ಕಾಲ್ನಡಿಗೆ ಜಾಥಾ ಹಮ್ಮಿಕೊಳ್ಳಲಾಗಿದೆ.

ಶಿರಾ ತಾಲ್ಲೂಕು ಬುಕ್ಕಾಪಟ್ಟಣ ಹೋಬಳಿ ಹುಯಿಲ್‌ದೊರೆ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ನಡೆಯಲಿದೆ. 8ರಂದು ಬೆಳಿಗ್ಗೆ 7ಕ್ಕೆ ಹುಯಿಲ್‌ದೊರೆ ಗ್ರಾಮ ಪಂಚಾಯಿತಿಯಿಂದ ಬುಕ್ಕಾಪಟ್ಟಣದ ವರೆಗೆ ಕಾಲ್ನಡಿಗೆ ಜಾಥಾ ನಡೆಯಲಿದೆ. ಜಾಥಾವನ್ನು ನಿವೃತ್ತ ಉಪವಿಭಾಗಾಧಿಕಾರಿ ಭಕ್ತರಾಮೇಗೌಡ ಉದ್ಘಾಟಿಸುವರು. ಸಂಜೆ 6ಕ್ಕೆ ಗ್ರಾಮೀಣ ಜನರೊಂದಿಗೆ ಚರ್ಚೆ ನಡೆಯಲಿದೆ. ಪರಿಸರವಾದಿ ಸಿ.ಯತಿರಾಜ್, ರಂಗಕರ್ಮಿ ಉಗಮ ಶ್ರೀನಿವಾಸ್, ಜನಪದ ವಿದ್ವಾಂಸ ಡಾ.ಚಿಕ್ಕಣ್ಣ ಯಣ್ಣೇಕಟ್ಟೆ ಭಾಗವಹಿಸುವರು. ತಾಲ್ಲೂಕು ಸರ್ವೋದಯ ಮಂಡಲದ ಅಧ್ಯಕ್ಷ ಲೋಕೇಶ್ ಅಗ್ರಹಾರ ಅಧ್ಯಕ್ಷತೆ ವಹಿಸುವರು.

ಬಹುತ್ವ ಭಾರತಕ್ಕಾಗಿ ಶಾಂತಿಯ ನಡಿಗೆ ಮಾಡಿದ ಸರ್ವೋದಯ ಮಂಡಲ ಈಗ ಗಾಂಧೀಜಿ ಅವರ ಗ್ರಾಮ ಸ್ವರಾಜ್ಯದ ಆಶಯವನ್ನು ಸಾಕಾರಗೊಳಿಸಲು ಗ್ರಾಮ ವಾಸ್ತವ್ಯ ಹಮ್ಮಿಕೊಂಡಿದೆ.

ADVERTISEMENT

ಜಿಲ್ಲೆಯ 10 ತಾಲ್ಲೂಕುಗಳಲ್ಲಿ ಗ್ರಾಮವಾಸ್ತವ್ಯ ಮಾಡಲಾಗುವುದು. ಸ್ಥಳೀಯರ ಜೊತೆ ಚರ್ಚೆ ನಡೆಸಿ ಗ್ರಾಮೀಣಾಭಿವೃದ್ಧಿಗೆ ಒತ್ತು ನೀಡಲಾಗುವುದು.

ಬುಕ್ಕಾಪಟ್ಟಣ ಹೋಬಳಿ ವ್ಯಾಪ್ತಿಯ ಎಲ್ಲ ಗ್ರಾಮಸ್ಥರು ಈ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕುವ ಮೂಲಕ ಗ್ರಾಮಭಾರತದ ಆಶಯವನ್ನು ಸಾಕಾರಗೊಳಿಸಬೇಕು ಎಂದು ಜಿಲ್ಲಾ ಸರ್ವೋದಯ ಮಂಡಲ ಕಾರ್ಯದರ್ಶಿ ಆರ್‌.ವಿ.ಪುಟ್ಟಕಾಮಣ್ಣ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.