ಕೊಡಿಗೇನಹಳ್ಳಿ: ಹೋಬಳಿಯ ಮೈದನಹಳ್ಳಿ ಜನತಾ ಮನೆಗಳ ಎದುರು ಭಾಗದಲ್ಲಿರುವ ಸುಮಾರು ನಾಲ್ಕು ಎಕರೆ ವಿಸ್ತೀರ್ಣದ ಸೊಸೈಟಿ ಆಫ್ ಗ್ರೀನ್ ಪ್ಲಾನೆಟ್‌ಗೆ ಯಾರಾದರೂ ಭೇಟಿ ನೀಡಿದರೆ ಅಲ್ಲಿನ ಗಿಡ-ಮರ, ಹೂವು, ಈಜುಕೊಳದ ಸೊಬಗು ಕಂಡವರಿಗೆ ತಕ್ಷಣಕ್ಕೆ ಎಲ್ಲೊ ಪ್ರವಾಸ ಬಂದಿದ್ದೇವೆ ಎಂಬಂತೆ ಭಾಸವಾಗುತ್ತದೆ.
ವಿವಿಧ ಬಗೆಯ ಬಣ್ಣ ಬಣ್ಣದ ಗುಲಾಬಿ ಗಿಡ, ನೆರಳಿನ ಮರ, ಮಾವು, ಪನ್ನೀರು, ಸಪೋಟ, ಸೇಬು, ನೇರಳೆ, ಅವಕಾಯಿ, ಮುಳ್ಳು ಸೀತಾಫಲ, ಬೆಟ್ಟದ ನೆಲ್ಲಿಕಾಯಿ, ನಿಂಬೆ, ಮೂಸಂಬಿ, ಕಿತ್ತಳೆ, ಬಾಳೆ, ತೆಂಗು, ಅಡಿಕೆ, ಅಂಜೂರ, ಹಲಸು, ಗೋಡಂಬಿ ಸೇರಿದಂತೆ ವಿವಿಧ ಬಗೆಯ ಗಿಡಗಳನ್ನು ಬೆಳೆಸಿದ್ದಾರೆ. ಅಲ್ಲಲ್ಲಿ ಸಾಲಾಗಿ ಶೋ ಗಿಡ, ಹೂವಿನ ಕುಂಡಗಳು, ಗುಲಾಬಿ ಗಿಡಗಳನ್ನು ಆಕರ್ಷಕವಾಗಿ ಜೋಡಿಸಿದ್ದಾರೆ.
ಇಲ್ಲಿನ ಈಜುಕೊಳದಲ್ಲಿ ಈಜಾಡಲು ಆಗಾಗ ಸ್ಥಳೀಯರಿಗೆ ಅವಕಾಶ ಮಾಡಿಕೊಡುತ್ತಾರೆ. ಸ್ಥಳೀಯ ದಂಪತಿ ಗಂಗಾದೇವಿ-ಕೃಷ್ಣಪ್ಪ ನಿರ್ವಹಣೆ ಜವಾಬ್ದಾರಿ ಹೊತ್ತಿದ್ದಾರೆ. ಈ ಸೊಸೈಟಿ ಸ್ಥಳೀಯರಿಗೆ ಯಾವುದೇ ಬಡ್ಡಿ ಇಲ್ಲದೇ ₹20 ಸಾವಿರದವರೆಗೆ ಸಾಲ ನೀಡುತ್ತಿದೆ ಎಂದು ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
‘ನಮ್ಮ ಸುತ್ತಮುತ್ತ ಗಿಡ-ಮರಗಳ ಜೊತೆಗೆ ಸುಂದರ ಪರಿಸರವಿದ್ದಾಗ ಮಾತ್ರ ಉತ್ತಮ ಆರೋಗ್ಯದೊಂದಿಗೆ ಲವಲವಿಕೆಯಿಂದ ಇರಲು ಸಾಧ್ಯ. ನಾನು ಸೊಸೈಟಿ ಆಫ್ ಗ್ರೀನ್ ಪ್ಲಾನೆಟ್ ಹೆಸರಿಗೆ ತಕ್ಕಂತೆ ಅಲ್ಲಿ ವಿವಿಧ ಬಗೆಯ ಸಸ್ಯರಾಶಿ ಬೆಳೆಸಿದ್ದೇನೆ. ನಮ್ಮ ಸೊಸೈಟಿಯಿಂದ ಇಲ್ಲಿನ ಪ್ರದೇಶದಲ್ಲಿ ಅಗತ್ಯವಾದ ಗಿಡ-ಮರ ಹಾಗೂ ಹೂವಿನ ಗಿಡಗಳನ್ನು ನಡೆಸಿ ಸುಂದರ ವಾತವರಣ ನಿರ್ಮಿಸಿದ್ದೇವೆ’ ಎನ್ನುತ್ತಾರೆ ಎಸ್‌ಎಚ್‌ಜೆ ಕಾರ್ಯದರ್ಶಿ ಎನ್.ಎಸ್.ಜೇಸುದಾಸ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.