ADVERTISEMENT

ಕೃಷಿ ಪಠ್ಯದಲ್ಲಿ ರೈತನ ಚಿಂತನೆ, ತತ್ವ ಅಡಕವಾಗಲಿ: ಸಾಹಿತಿ ಕೃಷ್ಣಮೂರ್ತಿ ಬಿಳಿಗೆ

ತಿಪಟೂರಿನಲ್ಲಿ ಕೃಷಿ ಸಾಹಿತ್ಯ ಸಮ್ಮೇಳನ: ಸಂವಾದ, ಗೋಷ್ಠಿ, ಪುಸ್ತಕ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 7 ಜೂನ್ 2025, 14:07 IST
Last Updated 7 ಜೂನ್ 2025, 14:07 IST
ತಿಪಟೂರಿನಲ್ಲಿ ನಡೆದ ಕೃಷಿ ಸಾಹಿತ್ಯ ಸಮ್ಮೇಳನದಲ್ಲಿ ಪುಸ್ತಕ ಮಳಿಗೆ
ತಿಪಟೂರಿನಲ್ಲಿ ನಡೆದ ಕೃಷಿ ಸಾಹಿತ್ಯ ಸಮ್ಮೇಳನದಲ್ಲಿ ಪುಸ್ತಕ ಮಳಿಗೆ   

ತಿಪಟೂರು: ನಗರದ ಕಲ್ಪತರು ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಶನಿವಾರ ಕೃಷಿ ಸಾಹಿತ್ಯ ಸಮ್ಮೇಳನ ಹಾಗೂ ಕೃಷಿ ವಿಚಾರ ಸಂಕಿರಣ ನಡೆಯಿತು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌, ರಾಜ್ಯ ರೈತ ಸಂಘ, ಹಸಿರು ಸೇನೆ ಸಹಯೋಗದಲ್ಲಿ ಸಾಹಿತ್ಯ ಪರಿಷತ್‌ ಲೋಕದಲ್ಲಿ ಸಮ್ಮೇಳನ ನಡೆಯಿತು.

ಶಾಸಕ ಕೆ.ಷಡಕ್ಷರಿ ಮಾತನಾಡಿ, ರೈತನಿಗೆ ಮೂಲ ಸೌಕರ್ಯ ಸಿಗದೆ, ಬೆಳೆಗಳಿಗೆ ಉತ್ತಮ ಬೆಲೆ ಸಿಗದೆ, ಸಮಯಕ್ಕೆ ಸರಿಯಾಗಿ ಸವಲತ್ತು ಸಿಗದೆ ಕೃಷಿ ಚಟುವಟಿಕೆಯಿಂದ ವಿಮುಖವಾಗುತ್ತಿದ್ದಾರೆ. ಇದನ್ನು ಮನಗಂಡು ಸರ್ಕಾರದಿಂದ ಹಲವು ಯೋಜನೆಗಳನ್ನು ಜಾರಿಗೆ ತರಲಾಗಿದೆ. ಸಹಕಾರಿ ಬ್ಯಾಂಕ್‌ನಿಂದ ₹5 ಲಕ್ಷದವರೆಗೆ ಶೂನ್ಯ ಬಡ್ಡಿದರ ಹಾಗೂ ₹15 ಲಕ್ಷದವರೆಗೆ ಶೇ 3 ಬಡ್ಡಿದರದಲ್ಲಿ ಸಾಲ ನೀಡಲಾಗುತ್ತಿದೆ ಎಂದು ತಿಳಿಸಿದರು.

ADVERTISEMENT

ಸಾಹಿತಿ ಕೃಷ್ಣಮೂರ್ತಿ ಬಿಳಿಗೆರೆ ಮಾತನಾಡಿ, ರೈತರ ಸಮಸ್ಯೆ ಬಗೆಹರಿಸಲು, ಸರ್ಕಾರದ ಸವಲತ್ತು ತಲುಪಿಸಲು ರೈತರು ಯಾರು ಎಂಬುದನ್ನು ಮೊದಲು ಗುರುತಿಸಬೇ‌ಕಿದೆ. ಕೃಷಿ ಸಾಹಿತ್ಯವು ದೊಡ್ಡ ಸಂಶೋಧನೆ ಪಾಠವಾಗಿದ್ದು, ಭೂಮಿ ಮೇಲೆ ಬರೆದ ಅನ್ನದ ಅಕ್ಷರಗಳು ಚಳವಳಿಯ ಆಲೋಚನೆಯಾಗಿದೆ. ಕೃಷಿ ಪಠ್ಯಗಳಲ್ಲಿ ರೈತನ ಚಿಂತನೆ, ತತ್ವ, ಕಾರ್ಮಿಕನ ಬದುಕು, ನೀರು, ಮಣ್ಣು, ದೂಳು ಸೇರಬೇಕಾಗಿದೆ ಎಂದರು.

ರೈತ ಸಂಘ ಹಾಗೂ ಹಸಿರು ಸೇನೆ ವರಿಷ್ಠ ಕೆ.ಟಿ.ಗಂಗಾಧರ್ ಮಾತನಾಡಿ, ದೇಶದಲ್ಲಿ ರೈತರ ಸಾವು, ಹೆಣ್ಣು ಮಕ್ಕಳ ಅನಾರೋಗ್ಯ, ಮಕ್ಕಳಲ್ಲಿ ಪೌಷ್ಠಿಕಾಂಶದ ಆಹಾರ ಕೊರತೆ ಏಕೆ ಆಗುತ್ತದೆ ಎಂಬುದನ್ನು ನೋಡಬೇಕಿದೆ. ರೈತನ ಬದುಕು, ಜೀವನ ಮಟ್ಟ, ಪ್ರಮಾಣ, ಗುಣಮಟ್ಟ ಹೇಗಿದೆ ಎಂಬುದರ ಮೇಲೆ ಜಿಡಿಪಿ ನಿರ್ಧಾರವಾಗಬೇಕಿದೆ. ವ್ಯಕ್ತಿ ಖರೀದಿ ಸಾಮರ್ಥ್ಯದ ಮೇಲೆ ನಿರ್ಧರಿಸಬೇಕಿದೆ. ರೈತರ ಭೂಮಿಯನ್ನು ಮೌಲ್ಯಾಧಾರಿತವಾಗಿ ಬದಲಾವಣೆ ಮಾಡಬೇಕಿದೆ, ಮಾರುಕಟ್ಟೆ ಕೌಶಲ ಕಲಿಸಬೇಕಿದೆ ಎಂದು ಹೇಳಿದರು.

ಗೋಷ್ಠಿಯಲ್ಲಿ ಹೊಸೂರಿನ ಗಾಂಧಿ ಸಹಜ ಬೇಸಾಯ ಶಾಲೆಯ ತೆಂಗು ಮತ್ತು ಅಡಿಕೆ-ವರ್ತಮಾನ ಮತ್ತು ಭವಿಷ್ಯ– ಸಂವಾದ, ಸಂತೆಶಿವರ ಬಸವರಾಜು ಅವರಿಂದ ‘ಬಹು ಬೆಳೆ ಪದ್ಧತಿ ನನ್ನ ಪ್ರಯೋಗಗಳು’ ಬಗ್ಗೆ ಸಂವಾದ, ಬೆಂಗಳೂರು ಜಿಕೆವಿಕೆ ಕಾಲೇಜಿನ ಪ್ರಾಂಶುಪಾಲೆ ಸುಕನ್ಯ ಅವರಿಂದ ‘ಸಿರಿಧಾನ್ಯಗಳ ಉತ್ಪಾದನೆ ಸಂಸ್ಕರಣೆ, ವಿತರಣೆ’ ಸಣ್ಣ ರೈತರ ಸಾಧ್ಯತೆಗಳು ಹಾಗೂ ಕೃಷಿ ನೀತಿಯ ಅದ್ವಾನಗಳ ಬಗ್ಗೆ ಜಿ.ಎನ್.ನಾಗರಾಜು ಅವರಿಂದ ಸಂವಾದ ನಡೆದವು.

ಕಸಾಪ ಅಧ್ಯಕ್ಷ ಬಸವರಾಜಪ್ಪ, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ಎಚ್.ಎಂ, ಕಲ್ಪತರು ವಿದ್ಯಾಸಂಸ್ಥೆ ಕಾರ್ಯದರ್ಶಿ ಸುಧಾಕರ್ ಎಚ್.ಜಿ, ಕೃಷಿ ಇಲಾಖೆ ಪವನ್, ತೋಟಗಾರಿಕರ ಚಂದ್ರಶೇಖರ್, ಬಿ.ಯೋಗೀಶ್ವರ ಸ್ವಾಮಿ, ಪ್ರಾಂಶುಪಾಲ ಎಮ್.ಡಿ.ಶಿವಕುಮಾರ್, ರೈತ ಸಂಘದ ತಾಲ್ಲೂಕು ಅಧ್ಯಕ್ಷ ಜಯನಂದಯ್ಯ, ಕೃಷಿಕ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

ತಿಪಟೂರಿನಲ್ಲಿ ನಡೆದ ಕೃಷಿ ಸಾಹಿತ್ಯ ಸಮ್ಮೇಳನ ಉದ್ಘಾಟನೆ ಸಂದರ್ಭ
ಕೃಷಿ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದ್ದ ಆಸಕ್ತರು 
ಕೃಷಿ ಸಾಹಿತ್ಯ ಸಮ್ಮೇಳನ ಅರ್ಥಪೂರ್ಣವಾಗಿದೆ. ಗೋಷ್ಠಿಗಳಿಂದ ಹಲವಾರು ವಿಚಾರ ತಿಳಿದು ಅಳವಡಿಸಿಕೊಳ್ಳಲು ಸಹಕಾರಿಯಾಗಿದೆ.
ನರಸಿಂಹಮೂರ್ತಿ ನಿವೃತ್ತ ಶಿಕ್ಷಕ.
ಸಮ್ಮೇಳನಕ್ಕೆ ಸಾರ್ವಜನಿಕರಿಂದ ಉತ್ತಮ ಅಭಿಪ್ರಾಯ ವ್ಯಕ್ತವಾಗಿದೆ. ಕೃಷಿಗೆ ಸಂಬಂಧಿಸಿದ ಪುಸ್ತಕಗಳು ಹೆಚ್ಚು ಮಾರಾಟವಾಗಿದೆ. ಭಾನುವಾರ ಗೋಷ್ಠಿಯಲ್ಲಿ ಮಳೆ ನೀರು ಮಣ್ಣಿನ ಗೋಷ್ಠಿಗಳನ್ನು ಆಯೋಜಿಸಲಾಗಿದೆ.
ಮಂಜಪ್ಪ ಕಸಾಪ ತಾ.ಕಾರ್ಯದರ್ಶಿ 
ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆ ಬೆಲೆ ಬಂದಾಗ ಸರ್ಕಾರಗಳು ಖರೀದಿಯ ಕಾನೂನು ಜಾರಿಗೆ ಬರಬೇಕಾಗಿದೆ. ಕೃಷಿ ಭೂಮಿಗಳನ್ನು ಬೇರೆ ಬಳಕೆಗೆ ಬಳಸದಂತೆ ನೋಡಿಕೊಳ್ಳಬೇಕಿದೆ. ‌
ಕೆ.ಟಿ.ಗಂಗಾಧರ್ ರೈತ ಸಂಘ ಹಸಿರು ಸೇನೆ ವರಿಷ್ಠ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.