ADVERTISEMENT

ತಿಪಟೂರು: ‘ಕೈಮಗ್ಗದ ಪುನಶ್ಚೇತನವಾಗಲಿ’

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2021, 4:18 IST
Last Updated 3 ಅಕ್ಟೋಬರ್ 2021, 4:18 IST
ತಿಪಟೂರಿನ ಮಿನಿ ವಿಧಾನಸೌಧದ ಬಳಿ ನೇಕಾರರು ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಆರ್.ಜಿ.ಚಂದ್ರಶೇಖರ್ ಅವರಿಗೆ ಮನವಿ ಸಲ್ಲಿಸಿದರು
ತಿಪಟೂರಿನ ಮಿನಿ ವಿಧಾನಸೌಧದ ಬಳಿ ನೇಕಾರರು ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಆರ್.ಜಿ.ಚಂದ್ರಶೇಖರ್ ಅವರಿಗೆ ಮನವಿ ಸಲ್ಲಿಸಿದರು   

ತಿಪಟೂರು: ಲಾಕ್‌ಡೌನ್ ಸಂಕಷ್ಟದಿಂದಾಗಿ ನೇಕಾರರ ಬದುಕು ಸಂಕಷ್ಟದಲ್ಲಿ ಇರುವುದರಿಂದ ಸರ್ಕಾರ ನೇಕಾರರ ಸುಧಾರಣೆಗೆ ಆರ್ಥಿಕ ವ್ಯವಸ್ಥೆ ರೂಪಿಸಬೇಕು. ಮಹಾತ್ಮ ಗಾಂಧೀಜಿ ಕಂಡ ಕೈಮಗ್ಗ ಕನಸು ಪುನಶ್ಚೇತನ ಆಗಬೇಕು ಎಂದು ಕೆಪಿಸಿಸಿ ರಾಜ್ಯ ಅಸಂಘಟಿತ ಕಾರ್ಮಿಕ ಘಟಕದ ಪ್ರಧಾನ ಕಾರ್ಯದರ್ಶಿ ಕೆ.ಟಿ.ಶಾಂತಕುಮಾರ್ ಹೇಳಿದರು.

ನಗರದ ಹಳೇಪಾಳ್ಯದಿಂದ ಮಿನಿ ವಿಧಾನಸೌಧದವರೆಗೆ ಶನಿವಾರ ಪಾದಯಾತ್ರೆ ನಡೆಸಿ ಮಾತನಾಡಿದರು.

ಸಣ್ಣ ಕೈಗಾರಿಕೆ ಪುನಶ್ಚೇತನಗೊಳ್ಳಲು ಸರ್ಕಾರದ ಸಹಕಾರ ಅಗತ್ಯವಾಗಿದೆ. ನೇಕಾರರ ಯಂತ್ರಗಳಿಗೆ ಜಿಎಸ್‌ಟಿ ಹೆಚ್ಚಾಗಿದ್ದು ಸರ್ಕಾರದಿಂದ ಸಬ್ಸಿಡಿ ದೊರಕುತ್ತಿಲ್ಲ. ಯಾವುದೇ ಅನುದಾನಗಳು ನೇಕಾರರಿಗೆ ಸಿಗುತ್ತಿಲ್ಲ. ಶೀಘ್ರದಲ್ಲೇ ಸ್ಥಳೀಯ ನೇಕಾರರ ನಿಯೋಗ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ನೇಕಾರರ ಸಮಸ್ಯೆ ಬಗ್ಗೆ ರಾಜ್ಯಸರ್ಕಾರಕ್ಕೆ ಮನವರಿಕೆ ಮಾಡಿಕೊಡಲಾಗುವುದು ಎಂದು ಹೇಳಿದರು.

ADVERTISEMENT

ನೇಕಾರರ ಹಿತರಕ್ಷಣಾ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಶಿವಲಿಂಗ ಟರ್ಕಿ ಮಾತನಾಡಿ, ಮಹಾತ್ಮ ಗಾಂಧೀಜಿಯವರ ನಾಡಲ್ಲಿ ನೇಕಾರರ ಬದುಕು ಸಂಕಷ್ಟದಲ್ಲಿದೆ. ಸರ್ಕಾರ ಕೃಷಿ ಕಾಯ್ದೆ, ಕಾರ್ಮಿಕ ಕಾಯ್ದೆ, ಸೇವಾ ಕಾಯ್ದೆ ತಿದ್ದುಪಡಿ ಮಾಡುವುದರಿಂದ ಅಸಂಘಟಿತ ಕಾರ್ಮಿಕರಿಗೆ ಸಾಕಷ್ಟು ತೊಂದರೆಯಾಗಲಿದೆ. ನೇಕಾರರ ಸಾಲವನ್ನು ಸರ್ಕಾರ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.

ತಹಶೀಲ್ದಾರ್ ಆರ್.ಜಿ.ಚಂದ್ರಶೇಖರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ನೇಕಾರ ಸಂಘದ ರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷ ಡಾ.ಅನಿಲ್ ಕಾಂಬ್ಳೆ, ರಮೇಶ್ ಬಾಕರೆ, ಸುನಿಲ್ ಮೇಟಿ, ಜಯರಾಮ್, ಗೊರಗೊಂಡನಹಳ್ಳಿ ಸುದರ್ಶನ್, ಚಂದ್ರಶೇಖರ್, ಲೋಕೇಶ್, ಮೋಹನ್ ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.