ತುಮಕೂರಿನಲ್ಲಿ ಭಾನುವಾರ ದಕ್ಷಿಣ ಕನ್ನಡ ಮಿತ್ರ ವೃಂದದಿಂದ ಸರ್ವ ಸದಸ್ಯರ ಮಹಾಸಭೆ, ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ತುಮಕೂರು: ನಗರದಲ್ಲಿ ಸುಮಾರು 6 ಸಾವಿರ ಜನ ದಕ್ಷಿಣ ಕನ್ನಡದ ಜನರಿದ್ದಾರೆ. ದಕ್ಷಿಣ ಕನ್ನಡ ಮಿತ್ರ ವೃಂದದಲ್ಲಿ 750 ಜನ ಮಾತ್ರ ಸದಸ್ಯತ್ವ ಪಡೆದಿದ್ದಾರೆ. ಹೆಚ್ಚಿನ ಜನರು ಮಿತ್ರ ವೃಂದದಲ್ಲಿ ಗುರುತಿಸಿಕೊಳ್ಳಬೇಕು ಎಂದು ಕೈಗಾರಿಕೋದ್ಯಮಿ ಎಚ್.ಜಿ.ಚಂದ್ರಶೇಖರ್ ಸಲಹೆ ಮಾಡಿದರು.
ನಗರದಲ್ಲಿ ಭಾನುವಾರ ದಕ್ಷಿಣ ಕನ್ನಡ ಮಿತ್ರ ವೃಂದದಿಂದ ಹಮ್ಮಿಕೊಂಡಿದ್ದ ಸರ್ವ ಸದಸ್ಯರ ಮಹಾಸಭೆ, ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕನಿಷ್ಠ 2 ಸಾವಿರ ಜನರಾದರೂ ಸಂಘಟನೆಯಲ್ಲಿ ಗುರುತಿಸಿಕೊಳ್ಳಬೇಕು. ಸಂಖ್ಯಾ ಬಲದ ಮೇಲೆ ಸಂಘಟನೆಗೆ ಶಕ್ತಿ ಬರುತ್ತದೆ. ಮುಂದಿನ ದಿನಗಳಲ್ಲಿ ದಕ್ಷಿಣ ಕನ್ನಡ ಆಹಾರ ಮೇಳ ಏರ್ಪಡಿಸಿದರೆ ಹೆಚ್ಚಿನ ಅನುಕೂಲವಾಗಲಿದೆ. ದಕ್ಷಿಣ ಕನ್ನಡ ಆಹಾರದ ರುಚಿಯೇ ಬೇರೆ, ಇಲ್ಲಿ ಅದು ಸಾಧ್ಯವಿಲ್ಲ ಎಂದು ತಿಳಿಸಿದರು.
ದಕ್ಷಿಣ ಕನ್ನಡ ಮಿತ್ರ ವೃಂದದ ಅಧ್ಯಕ್ಷ ಅಮರನಾಥ ಶೆಟ್ಟಿ, ‘ದಕ್ಷಿಣ ಕನ್ನಡವೆಂದರೆ ಒಂದು ಯಕ್ಷಗಾನ, ಇನ್ನೊಂದು ತರಾವರಿ ಖಾದ್ಯಗಳು. ಮುಂದಿನ ವರ್ಷದಿಂದಲೇ ನಮ್ಮ ಸಂಘಟನೆಯಿಂದ ಯಕ್ಷಗಾನ, ಕರಾವಳಿ ಭಾಗದ ಎಲ್ಲಾ ಖಾದ್ಯಗಳ ಮೇಳ ಆಯೋಜಿಸಲು ಆಡಳಿತ ಮಂಡಳಿ ತೀರ್ಮಾನಿಸಿದೆ. ಇದಕ್ಕೆ ಎಲ್ಲ ಸದಸ್ಯರು ಸಹಕರಿಸಬೇಕು’ ಎಂದರು.
ದಕ್ಷಿಣ ಕನ್ನಡ ಮಿತ್ರ ವೃಂದದ ಉಪಾಧ್ಯಕ್ಷ ಸುಧೀರ್ ಹೆಗಡೆ, ಪದಾಧಿಕಾರಿಗಳಾದ ವೆಂಕಟೇಶ್ ಎಂ.ಎಸ್.ಕಾರಂತ್, ಸದಾಶಿವ ಅಮೀನ್, ಜನಾರ್ಧನ್ ಭಟ್, ನರಸಿಂಹನಾಯಕ್, ಸುಶೀಲ ರಮೇಶ್, ವಿಶ್ವನಾಥ್ ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.