ADVERTISEMENT

ತೋವಿನಕೆರೆ: ಕೊರಟಗೆರೆ ತಾಲ್ಲೂಕಿನಲ್ಲಿ 50 ದಿನಗಳ ನಂತರ ಮಳೆ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2021, 8:09 IST
Last Updated 7 ಅಕ್ಟೋಬರ್ 2021, 8:09 IST
ಕೊರಟಗೆರೆ ತಾಲ್ಲೂಕು ಕಸಬಾ ಹೋಬಳಿ ಗರಗದೊಡ್ಡಿಯಲ್ಲಿನ ಮಳೆ ಅಶ್ರಯದ ಮುಸುಕಿನ ಜೋಳದ ತಾಕು
ಕೊರಟಗೆರೆ ತಾಲ್ಲೂಕು ಕಸಬಾ ಹೋಬಳಿ ಗರಗದೊಡ್ಡಿಯಲ್ಲಿನ ಮಳೆ ಅಶ್ರಯದ ಮುಸುಕಿನ ಜೋಳದ ತಾಕು   

ತೋವಿನಕೆರೆ: ಕೊರಟಗೆರೆ ತಾಲ್ಲೂಕಿನಲ್ಲಿ ಮಳೆ ಕೊರತೆಯಿಂದ ಬೆಳೆ ಒಣಗುತ್ತಿದ್ದು, ರೈತರ ಆತಂಕಕ್ಕೆ ಕಾರಣವಾಗಿತ್ತು. ಮೇವಿಗೂ ಬರ ಎನ್ನುವ ಅತಂಕದಲ್ಲಿದ್ದ ಹೈನುಗಾರರಿಗೆ ಮಂಗಳವಾರ ಮತ್ತು ಬುಧವಾರ ಬಿದ್ದ ಮಳೆ ತುಸು ನೆಮ್ಮದಿ ತಂದಿದೆ.

ಕೊರಟಗೆರೆ ತಾಲ್ಲೂಕಿನಲ್ಲಿ ಮಳೆಯ ಕಣ್ಣ ಮುಚ್ಚಾಲೆ ನಡುವೆ ಸಮೃದ್ಧವಾದ ಬಿತ್ತನೆಯಾಗಿತ್ತು. 50 ದಿನ ಕೈ ಕೊಟ್ಟ ಮಳೆಯಿಂದ ಇಳುವರಿ ಕುಸಿದಿದ್ದು, ರೈತರ ಆತಂಕಕ್ಕೆ ಕಾರಣವಾಗಿತ್ತು.

ಆಗಸ್ಟ್ 20ರಿಂದ ಆಕ್ಟೋಬರ್ 4ರವರೆಗೆ 50 ದಿನ ಮಳೆ ಬರದೇ ಇರುವುದರಿಂದ ಮಳೆ ಅಶ್ರಯದ ಎಲ್ಲ ಬೆಳೆಗಳ ಇಳುವರಿ ಕುಸಿದಿದೆ.

ADVERTISEMENT

ತಾಲ್ಲೂಕಿನಲ್ಲಿ ಈ ವರ್ಷದ ಮುಂಗಾರಿನಲ್ಲಿ 26,880 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿತ್ತು. ರಾಗಿ, ತೊಗರಿ, ಮುಸುಕಿನ ಜೋಳ, ಮತ್ತು ಶೇಂಗಾ ಹೆಚ್ಚು ಬಿತ್ತನೆಯಾಗಿತ್ತು.

ತಾಲ್ಲೂಕಿನಲ್ಲಿ ವಾರ್ಷಿಕ 637 ಮಿ.ಮೀ ವಾಡಿಕೆ ಮಳೆಯಾಗಬೇಕು. ಅಕ್ಟೋಬರ್‌ವರೆಗೆ 582 ಮಿ.ಮೀ ಮಳೆಯಾಗಬೇಕಿದ್ದು, 512 ಮಿ.ಮೀ ಮಳೆಯಾಗಿದ್ದು, ಶೇ 12ರಷ್ಟು ಕೊರೆತೆಯಾಗಿದೆ.

ಶೇಂಗಾ 4,740 ಹೆಕ್ಟೇರ್‌ ಮತ್ತು ಮುಸುಕಿನ ಜೋಳ 11,900 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿತ್ತು. ಕಾಯಿ ಕಟ್ಟುವ ಹಂತದಲ್ಲಿ ಮಳೆ ಬರದೇ ಶೇ 90ರಷ್ಟು ಇಳುವರಿ ಕುಸಿತವಾಗಿದೆ.

ತಾಲ್ಲೂಕಿನಲ್ಲಿ ಈ ವರ್ಷ ಭತ್ತ 155, ರಾಗಿ 8,185, ತೊಗರಿ 725, ಹುರುಳಿ 780, ಅವರೆ, ಅಲಸಂದೆ 75, ಹರಲು 150, ಹತ್ತಿ 5 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ.

ಸಮಯಕ್ಕೆ ಸರಿಯಾಗಿ ಬಿತ್ತನೆ ಬೀಜ, ರಾಸಾಯನಿಕ ಗೊಬ್ಬರ ಪೂರೈಕೆ ಮಾಡಲಾಗಿತ್ತು. ಶೇ 91ರಷ್ಟು ಬಿತ್ತನೆಯೂ ಅಗಿತ್ತು. ಅಗಸ್ಟ್ 20ರಿಂದ 50 ದಿನ ಮಳೆ ಬರದೇ ಬೆಳೆಗಳ ಇಳುವರಿ ಶೇ 50ರಷ್ಟು ಕುಸಿತವಾಯಿತು. ಶೇಂಗಾ ಮತ್ತು ಮುಸುಕಿನ ಜೋಳದ ಬೆಳೆಯ ಮೇಲೆ ಪರಿಣಾಮ ಬೀರಿದ್ದು, ಶೇ 90ರಷ್ಟು ನಷ್ಟವಾಗಿದೆ ಎಂದು ತಾಲ್ಲೂಕಿನ ಕೃಷಿ ಸಹಾಯಕ ನಿರ್ದೇಶಕ ಎಚ್. ನಾಗರಾಜ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.