ADVERTISEMENT

ದೇವೇಗೌಡರ ಪರ ಪ್ರಾಮಾಣಿಕ ಕೆಲಸ

ಸಂಸದ ಎಸ್‌.ಪಿ.ಮುದ್ದಹನುಮೇಗೌಡ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2019, 16:28 IST
Last Updated 10 ಏಪ್ರಿಲ್ 2019, 16:28 IST
ಮಧುಗಿರಿ ಸಭೆಗೂ ಮುನ್ನ ಶಾಸಕ ವೀರಭದ್ರಯ್ಯ ಹಾಗೂ ಮಾಜಿ ಶಾಸಕ ಕೆ.ಎನ್‌.ರಾಜಣ್ಣ ಹಸ್ತಲಾಘವದ ಸನ್ನಿವೇಶ. ಈ ಇಬ್ಬರು ನಾಯಕರು ಪರಸ್ಪರ ಕೈ ಜೋಡಿಸಿದಾಗ ಸುತ್ತಲಿದ್ದವರು ಸಂಭ್ರಮಿಸಿದರು
ಮಧುಗಿರಿ ಸಭೆಗೂ ಮುನ್ನ ಶಾಸಕ ವೀರಭದ್ರಯ್ಯ ಹಾಗೂ ಮಾಜಿ ಶಾಸಕ ಕೆ.ಎನ್‌.ರಾಜಣ್ಣ ಹಸ್ತಲಾಘವದ ಸನ್ನಿವೇಶ. ಈ ಇಬ್ಬರು ನಾಯಕರು ಪರಸ್ಪರ ಕೈ ಜೋಡಿಸಿದಾಗ ಸುತ್ತಲಿದ್ದವರು ಸಂಭ್ರಮಿಸಿದರು   

ಮಧುಗಿರಿ: ರಾಷ್ಟ್ರದ ಹಿತ ದೃಷ್ಟಿಯಿಂದ ಮೈತ್ರಿ ಅಭ್ಯರ್ಥಿ ಪರವಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುವೆ ಎಂದು ಸಂಸದ ಎಸ್.ಪಿ.ಮುದ್ದಹನುಮೇಗೌಡ ಹೇಳಿದರು.

ಪಟ್ಟಣದ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದರು.

‘ನಾನು ಬಿ.ಫಾರಂ, ಸಿ.ಫಾರಂ ಎಲ್ಲವನ್ನು ನೋಡಿದ್ದೇನೆ. ನನ್ನ ಸ್ಥಿತಿ ಕಂಡು ಕೆಲವರು ಸಂಭ್ರಮಿಸುತ್ತಿದ್ದಾರೆ. ನಾನು ದುರಂತ ನಾಯಕನಾಗಿರುವೆ ಹೊರತು ಪಕ್ಷಕ್ಕೆ ದ್ರೋಹ ಬಗೆಯುವುದಿಲ್ಲ. ನನ್ನ ಕೈ ಪರಿಶುದ್ಧವಾಗಿದೆ. ಮಧುಗಿರಿಯ ದಂಡಿನ ಮಾರಮ್ಮ ದೇವಿಯ ಆಣೆ’ ಎಂದರು.

ADVERTISEMENT

ಎಚ್.ಡಿ.ದೇವೇಗೌಡ ಮಾತನಾಡಿ, ‘ಮಾಜಿ ಶಾಸಕ ಕೆ.ಎನ್.ರಾಜಣ್ಣ ಮಧುಗಿರಿಯನ್ನು ಜಿಲ್ಲಾ ಕೇಂದ್ರ ಮಾಡಲು ಮನವಿ ಮಾಡಿದ್ದಾರೆ. ಅವರ ಮನವಿಗೆ ಸಂಪೂರ್ಣ ಸಹಕಾರ ನೀಡುವೆ. ಈ ವಿಚಾರವನ್ನು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಗಮನಕ್ಕೆ ತರುವೆ’ ಎಂದು ಹೇಳಿದರು.

ಸಿದ್ದರಾಮಯ್ಯ ಮಾತನಾಡಿ, ‘ಸಂವಿಧಾನ ಬದಲಿಸುತ್ತೇವೆ ಎನ್ನುವ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಗ್ರಾಮ ಪಂಚಾಯಿತಿ ಸದಸ್ಯನಾಗಲು ಕೂಡ ನಾಲಾಯಕ್. ಸಾಮಾಜಿಕ ನ್ಯಾಯ ಬೇಕಾದವರು ಬಿಜೆಪಿಯನ್ನು ತಿರಸ್ಕರಿಸಿ ಎಂದರು. ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಎಚ್.ಡಿ.ದೇವೇಗೌಡರು 3 ಲಕ್ಷಕ್ಕೂ ಅಧಿಕ ಮತಗಳಿಂದ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಾಜಿ ಶಾಸಕ ಕೆ.ಎನ್ ರಾಜಣ್ಣ, ‘ಕಾಂಗ್ರೆಸ್ ಹೈ ಕಮಾಂಡ್ ನಿರ್ದೇಶನದಂತೆ ದೇವೇಗೌಡರಿಗೆ ಬೆಂಬಲ ನೀಡುತ್ತೇವೆ. ಸಂಸದ ಎಸ್.ಪಿ.ಮುದ್ದಹನುಮೇಗೌಡರಿಗೆ ಆಗಿರುವ ಅನ್ಯಾಯಕ್ಕೆ ಪ್ರತಿಯಾಗಿ ಅವರಿಗೆ ಸೂಕ್ತ ಸ್ಥಾನ ನೀಡಬೇಕು. ಶಾಸಕ ವೀರಭದ್ರಯ್ಯ ಅವರು ಇಟ್ಟಿರುವಂತ ಬೇಡಿಕೆಯಂತೆ ತಾಲ್ಲೂಕಿನ ಎಲ್ಲ ಕೆರೆಗಳಿಗೆ ನೀರು ತುಂಬಿಸುವ ಕೆಲಸವಾಗಬೇಕು’ ಎಂದರು.

ಉಪ ಮುಖ್ಯಮಂತ್ರಿ ಡಾ ಜಿ. ಪರಮೇಶ್ವರ, ಸಚಿವರಾದ ಶ್ರೀನಿವಾಸ್, ಬಂಡೆಪ್ಪ ಕಾಶೆಂಪುರ್, ಶಾಸಕ ಎಂ.ವಿವೀರಭದ್ರಯ್ಯ, ಮಾಜಿ ಶಾಸಕರಾದ ತಿಮ್ಮರಾಯಪ್ಪ, ಸುಧಾಕರ್ ಲಾಲ್, ಸಿ.ಎಂ ಇಬ್ರಾಹಿಂ ಮಾತನಾಡಿದರು.

ರಾಜ್ಯಸಭಾ ಸದಸ್ಯ ಹನುಮಂತಯ್ಯ, ಮಾಜಿ ಸಚಿವ ಎಂ.ಆರ್.ಸೀತಾರಾಮ್ , ಶಾಸಕರಾದ ಬಿ.ಆರ್.ಸತ್ಯನಾರಾಯಣ, ಬೆಮೆಲ್ ಕಾಂತರಾಜು, ಚೌಡರೆಡ್ಡಿ ಆರ್ ತೂಪಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.