ADVERTISEMENT

ಭಿನ್ನಮತವಿಲ್ಲ: ಜ್ಯೋತಿಗಣೇಶ್

​ಪ್ರಜಾವಾಣಿ ವಾರ್ತೆ
Published 20 ಜೂನ್ 2020, 16:03 IST
Last Updated 20 ಜೂನ್ 2020, 16:03 IST
ಶಾಸಕ ಜ್ಯೋತಿಗಣೇಶ್
ಶಾಸಕ ಜ್ಯೋತಿಗಣೇಶ್   

ತುಮಕೂರು: ‘ಕೆಲವು ಸುದ್ದಿ ಮಾಧ್ಯಮಗಳಲ್ಲಿ ಬಿಜೆಪಿ ಶಾಸಕರು ಸರ್ಕಾರಕ್ಕೆ ತೊಡಕಾಗುವ ರೀತಿಯಲ್ಲಿ ಭಿನ್ನಮತ ನಡೆಸಲು ಸಭೆ ಸೇರಿದ್ದಾರೆ ಎಂದು ನನ್ನ ಹೆಸರು ಪ್ರಸಾರವಾಗಿದೆ. ಈ ವರದಿಯು ಸತ್ಯಕ್ಕೆ ದೂರವಾದುದು’ ಎಂದು ಶಾಸಕ ಜಿ.ಬಿ.ಜ್ಯೋತಿ ಗಣೇಶ್ ತಿಳಿಸಿದ್ದಾರೆ.

‘ಮಹಾತ್ಮಗಾಂಧಿ ನಗರ ವಿಕಾಸ ಯೋಜನೆ ಅಡಿ ತುಮಕೂರು ಮಹಾನಗರಪಾಲಿಕೆಯೂ ಸೇರಿದಂತೆ ರಾಜ್ಯದ ಇತರ ಮಹಾನಗರಪಾಲಿಕೆಗಳಿಗೆ ಮಂಜೂರಾಗಿದ್ದ ₹125 ಕೋಟಿ ಅನುದಾನ ಕೊರೊನಾ ಪರಿಣಾಮವಾಗಿ ವಾಪಸ್ ಪಡೆಯಲು ಸರ್ಕಾರ ನಿರ್ಧರಿಸಿದೆ. ಈಗಾಗಲೇ ಕಾಮಗಾರಿಗಳ ಕಾರ್ಯಕ್ರಮ ಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಸಿ ಅನುಮೋದನೆ ಪಡೆಯಲಾಗಿದೆ. ಟೆಂಡರ್ ಪ್ರಕ್ರಿಯೆ ಬಾಕಿ ಇತ್ತು. ಆದರೆ ಕೊರೊನಾ ಕಾರಣ ಅನುದಾನ ವಾಪಸ್ ಪಡೆಯಲಾಗಿದೆ’.

ಈ ಕಾರಣದಿಂದ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಬಸನಗೌಡ ಪಾಟೀಲ ಯತ್ನಾಳ್ ಸೇರಿದಂತೆ ಕೆಲವು ಶಾಸಕರು ನಗರಾಭಿವೃದ್ಧಿ ಸಚಿವರನ್ನು ಭೇಟಿ ಮಾಡಿ ಮನವರಿಕೆ ಮಾಡಿಕೊಟ್ಟಿದ್ದೆವು. ಬಿ.ಎಸ್.ಯಡಿಯೂರಪ್ಪ ಅವರ ಗಮನಕ್ಕೆ ತಂದು ಅನುದಾನವನ್ನು ಮರು ಮಂಜೂರು ಮಾಡುವಂತೆ ಮನವಿ ಮಾಡಲು ಸಭೆ ಸೇರಿದ್ದೆವು ಎಂದು ಸ್ಪಷ್ಟಪಡಿಸಿದ್ದಾರೆ.

ADVERTISEMENT

‘ಯಾವುದೇ ಕಾರಣಕ್ಕೂ ಭಿನ್ನಮತವಾಗಲಿ, ಸರ್ಕಾರಕ್ಕೆ ತೊಂದರೆ ಕೊಡುವ ಕೆಲಸವನ್ನು ನಾವು ಮಾಡುವುದಿಲ್ಲ. ನಮ್ಮ ನಾಯಕ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಸರ್ಕಾರ ಸುಭದ್ರವಾಗಿದೆ. ಜನಪರ ಅಭಿವೃದ್ಧಿ ಕಾರ್ಯಗಳನ್ನು ನಿರ್ವಹಿಸುತ್ತಿದೆ. ನಮ್ಮದು ಬಿಜೆಪಿ ಸರ್ಕಾರಕ್ಕೆ ಸಹಮತವಷ್ಟೆ, ಭಿನ್ನಮತವಲ್ಲ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.