ADVERTISEMENT

ಎನ್‌ಆರ್‌ಎಲ್‌ಎಂ | 5 ತಿಂಗಳ ವೇತನ ಬಾಕಿ; ಸಂಬಳ ಸಿಗದೆ ಪರದಾಟ

ಜಿಲ್ಲೆಯಲ್ಲಿ 48 ಮಂದಿ ಕೆಲಸ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2025, 5:31 IST
Last Updated 13 ಆಗಸ್ಟ್ 2025, 5:31 IST
ತುಮಕೂರು ಜಿಲ್ಲಾ ಪಂಚಾಯಿತಿ
ತುಮಕೂರು ಜಿಲ್ಲಾ ಪಂಚಾಯಿತಿ   

ತುಮಕೂರು: ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಯೋಜನೆಯಡಿ (ಎನ್‌ಆರ್‌ಎಲ್‌ಎಂ) ಜಿಲ್ಲೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ, ಸಿಬ್ಬಂದಿಗೆ ಕಳೆದ 5 ತಿಂಗಳಿನಿಂದ ವೇತನವೇ ಸಿಕ್ಕಿಲ್ಲ.

ಜಿಲ್ಲೆಯಾದ್ಯಂತ 48 ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರಿಗೆಲ್ಲ ಫೆಬ್ರುವರಿ ತಿಂಗಳಲ್ಲಿ ಕೊನೆಯದಾಗಿ ವೇತನ ಪಾವತಿಯಾಗಿದೆ. ಅಲ್ಲಿಂದ ಇದುವರೆಗೆ ಅವರ ಖಾತೆಗೆ ಸಂಬಳದ ಹಣ ಜಮಾ ಆಗಿಲ್ಲ. ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿಗಳಲ್ಲಿ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ.

ಗ್ರಾಮೀಣ ಭಾಗದಲ್ಲಿ ಮಹಿಳಾ ಸ್ವಸಹಾಯ ಗುಂಪುಗಳ ರಚನೆ ಮತ್ತು ಬಲವರ್ಧನೆಗೆ ಯೋಜನೆಯಡಿ ಕ್ರಮ ವಹಿಸಲಾಗುತ್ತಿದೆ. ಸಂಘದ ನಿರ್ವಹಣೆ, ಸಾಲ ವಿತರಣೆ ಸೇರಿದಂತೆ ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಸಂಘಗಳ ಮೂಲಕ ಮಹಿಳೆಯರು ಸ್ವಯಂ ಉದ್ಯೋಗ ಕೈಗೊಳ್ಳಲು ಯೋಜನೆಯಡಿ ನೆರವು ಹಸ್ತ ಚಾಚಲಾಗುತ್ತಿದೆ. ಗ್ರಾಮೀಣ ಅಭಿವೃದ್ಧಿಗೆ ಶ್ರಮಿಸುವ ಅಧಿಕಾರಿ, ಸಿಬ್ಬಂದಿಗಳು ಸಂಬಳ ಇಲ್ಲದೆ ಜೀವನ ಸಾಗಿಸಲು ಪರದಾಡುತ್ತಿದ್ದಾರೆ.

ADVERTISEMENT

ಜಿಲ್ಲಾ ಪಂಚಾಯಿತಿಯಿಂದ ಟೆಂಡರ್‌ ಪಡೆದ ಖಾಸಗಿ ಸಂಸ್ಥೆಯಿಂದ ವೇತನ ಪಾವತಿಯಾಗಬೇಕು. ಯೋಜನೆ ಜಾರಿಯಾದ ವರ್ಷದಿಂದ ಇದೇ ರೀತಿ ಮಾಡಲಾಗುತ್ತಿದೆ. ಈ ಬಾರಿಯ ಆರ್ಥಿಕ ವರ್ಷದಿಂದ ಖಾಸಗಿ ಸಂಸ್ಥೆ ಬದಲಾಗಿದ್ದರಿಂದ ವೇತನ ತಡವಾಗಿದೆ. ಸಂಬಳ ನಂಬಿ ಬದುಕುತ್ತಿದ್ದವರು ಸಾಲ ಮಾಡಿ ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ. ಮಕ್ಕಳನ್ನು ಶಾಲಾ–ಕಾಲೇಜಿಗೆ ಸೇರಿಸಲು ಹೆಣಗಾಡುತಿದ್ದಾರೆ.

‘48 ಜನರಿಗೆ ಪ್ರತಿ ತಿಂಗಳು ₹18 ಸಾವಿರದಿಂದ ₹33 ಸಾವಿರದ ತನಕ ವೇತನ ಪಾವತಿ ಮಾಡಬೇಕು. ಒಂದೆರಡು ತಿಂಗಳು ಸಂಬಳ ಸಿಗದಿದ್ದರೆ ನಡೆಯುತ್ತದೆ. 5 ತಿಂಗಳಿನಿಂದ ಸಂಬಳ ನೀಡದಿದ್ದರೆ ಸಂಸಾರ ನಡೆಸುವುದು ಹೇಗೆ? ಕೆಲಸ ಮಾಡುವವರು ಸರ್ಕಾರದ ವೇತನವನ್ನೇ ಅವಲಂಬಿಸಿದ್ದಾರೆ’ ಎಂದು ಸಿಬ್ಬಂದಿಯೊಬ್ಬರು ಪ್ರತಿಕ್ರಿಯಿಸಿದರು.

ಪ್ರತಿ ತಿಂಗಳು ತಡ

‘ಸಂಬಳ ಬಾರದಿರುವುದರಿಂದ ತುಂಬಾ ಸಮಸ್ಯೆಯಾಗುತ್ತಿದೆ. ಮನೆಗೆ ಬೇಕಾದ ಆಹಾರ ಸಾಮಗ್ರಿ ಖರೀದಿಸಲು ಆಗುತ್ತಿಲ್ಲ. ಉನ್ನತ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗುತ್ತಿಲ್ಲ. ಹೀಗೆ ಮುಂದುವರಿದರೆ ಬೇರೆ ಕೆಲಸ ನೋಡಿಕೊಳ್ಳಬೇಕಾಗುತ್ತದೆ’ ಎಂದು ಹೆಸರೇಳಲು ಇಚ್ಚಿಸದ ಸಿಬ್ಬಂದಿಯೊಬ್ಬರು ಬೇಸರ ವ್ಯಕ್ತಪಡಿಸಿದರು.

ನರೇಗಾ ಯೋಜನೆ ಸಿಬ್ಬಂದಿಯೂ 8 ತಿಂಗಳು ಸಂಬಳ ಇಲ್ಲದೆ ತೊಂದರೆ ಅನುಭವಿಸಿದ್ದರು. ಜಿಲ್ಲೆಯಲ್ಲಿ ಕೆಲಸ ಮಾಡುತ್ತಿರುವ ಹೊರಗುತ್ತಿಗೆ ಸಿಬ್ಬಂದಿಗೆ ಪ್ರತಿ ತಿಂಗಳು ವೇತನ ಪಾವತಿ ಆಗುತ್ತಿಲ್ಲ. ಸರ್ಕಾರಿ ನೌಕರರಂತೆ ನಮಗೂ ಸಕಾಲಕ್ಕೆ ಸಂಬಳದ ಹಣ ಸಿಗುವಂತಾಗಬೇಕು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.