ಪ್ರಾತಿನಿಧಿಕ ಚಿತ್ರ
ಪಾವಗಡ: ಪಟ್ಟಣದ ಶಿರಾ ರಸ್ತೆ ಬಳಿಯ ಕುಮಾರಸ್ವಾಮಿ ಬಡಾವಣೆ ಹೆಸರನ್ನು ಯಾವುದೇ ಕಾರಣಕ್ಕೂ ಬದಲಾಯಿಸಬಾರದು ಎಂದು ಒಕ್ಕಲಿಗರ ಸಂಘದ ಮುಖಂಡ ಎನ್.ಎ. ಈರಣ್ಣ ಒತ್ತಾಯಿಸಿದರು.
ಪಟ್ಟಣದಲ್ಲಿ ಮಂಗಳವಾರ ತಾಲ್ಲೂಕು ಒಕ್ಕಲಿಗರ ಸಂಘದಿಂದ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ನಿರ್ಮಿಸಲಾಗಿದ್ದ ಮನೆಗಳನ್ನು ವಿತರಿಸಿ ಉದ್ಘಾಟಿಸಿದ್ದರು. ಆಗಿನ ಶಾಸಕ ಕೆ.ಎಂ. ತಿಮ್ಮರಾಯಪ್ಪ ಬಡಾವಣೆಗೆ ಮೂಲ ಸೌಕರ್ಯಗಳನ್ನು ಕಲ್ಪಿಸಿದ್ದರು ಎಂದರು.
ಆದರೆ ಈಗಿನ ಪುರಸಭೆ ಆಡಳಿತವು ಒಕ್ಕಲಿಗ ಸಮುದಾಯದ ನಾಯಕನಿಗೆ ಅಪಮಾನ ಮಾಡುವ ರೀತಿಯಲ್ಲಿ ಬಡಾವಣೆ ಹೆಸರನ್ನು ಬದಲಾವಣೆ ಮಾಡಲು ಹೊರಟಿರುವುದು ಅಸಮಂಜಸ. ತಾಲ್ಲೂಕಿನಲ್ಲಿ ಒಕ್ಕಲಿಗರಿಗೆ ಮಾಡಿರುವ ಅಪಮಾನ, ತಾಲೂಕಿನಲ್ಲಿ 30ರಿಂದ 40ಸಾವಿರ ಜನರಿರುವ ಒಕ್ಕಲಿಗ ಸಮುದಾಯವನ್ನು ಕಡೆಗಣಿಸಲಾಗುತ್ತಿದೆ ಎಂದರು.
ಮುಖಂಡ ಮಂಗಳವಾಡ ರಂಗಣ್ಣ ಮಾತನಾಡಿ, ಸಮಾಜದ ಏಳ್ಗೆಗೆ ಶ್ರಮಿಸಿದ ಒಕ್ಕಲಿಗ ಸಮಾಜದ ನಾಯಕ ಎಚ್.ಡಿ. ಕುಮಾರಸ್ವಾಮಿ ಹೆಸರಿಗೆ ಕಳಂಕ ತರುವ ರೀತಿ ಪುರಸಭೆ ಬಡಾವಣೆ ಹೆಸರು ಬದಲಾವಣೆ ಮಾಡಲು ಹೊರಟಿರುವುದನ್ನು ಒಕ್ಕಲಿಗರ ಸಂಘ ಖಂಡಿಸುತ್ತದೆ ಎಂದರು.
ತಾಲೂಕು ಒಕ್ಕಲಿಗ ಸಂಘದ ಅಧ್ಯಕ್ಷ ತಿಪ್ಪೆಈರಣ್ಣ ಮಾತನಾಡಿ, ಯಾವುದೇ ಕಾರಣಕ್ಕೂ ಬಡಾವಣೆ ಹೆಸರು ಬದಲಿಸಬಾರದು. ಹೆಸರು ಬದಲಿಸಿದಲ್ಲಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಮುಖಂಡ ಕೆ.ಟಿ ಹಳ್ಳಿ ಚಂದ್ರಶೇಖರ್, ವಿಎಸ್ಎಸ್‌ಎನ್ ಮಾಜಿ ಅಧ್ಯಕ್ಷ ಕೃಷ್ಣಪ್ಪ, ಕುಂಚಿಟಿಗ ಒಕ್ಕಲಿಗ ಸಂಘದ ನಿರ್ದೇಶಕ ಮೂರ್ತಿ, ಕಾರ್ಯಕಾರಿಣಿ ಸದಸ್ಯ ಈರಣ್ಣ, ಮಂಜಪ್ಪ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.