ADVERTISEMENT

ಪ್ಲಾಸ್ಟಿಕ್‌ ನಿಷೇಧಕ್ಕೆ ಎಲ್ಲರೂ ಕೈಜೋಡಿಸಿ

ಪ್ಲಾಸ್ಟಿಕ್‌ ಸಾಮಗ್ರಿಗಳ ಬಳಕೆ ನಿಷೇಧ ಜಾಗೃತಿ ಜಾಥಾಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2019, 11:34 IST
Last Updated 25 ಸೆಪ್ಟೆಂಬರ್ 2019, 11:34 IST
ಜಿ.ಬಿ.ಜ್ಯೋತಿಗಣೇಶ್‌, ಜಿಲ್ಲಾಧಿಕಾರಿ ಕೆ.ರಾಕೇಶ್‌ಕುಮಾರ್‌, ಸಿಇಒ ಶುಭಾ ಕಲ್ಯಾಣ ಅವರು ಕರಪತ್ರಗಳನ್ನು ಹಂಚುವ ಮೂಲಕ ಜನರಲ್ಲಿ ಅರಿವು ಮೂಡಿಸಿದರು
ಜಿ.ಬಿ.ಜ್ಯೋತಿಗಣೇಶ್‌, ಜಿಲ್ಲಾಧಿಕಾರಿ ಕೆ.ರಾಕೇಶ್‌ಕುಮಾರ್‌, ಸಿಇಒ ಶುಭಾ ಕಲ್ಯಾಣ ಅವರು ಕರಪತ್ರಗಳನ್ನು ಹಂಚುವ ಮೂಲಕ ಜನರಲ್ಲಿ ಅರಿವು ಮೂಡಿಸಿದರು   

ತುಮಕೂರು: ಪ್ಲಾಸ್ಟಿಕ್ ನಿಷೇಧ ಕುರಿತು ಜಿಲ್ಲೆಯಲ್ಲಿ ಹಮ್ಮಿಕೊಂಡಿರುವ ಜನಾಂದೋಲನ ಕಾರ್ಯಕ್ರಮದಲ್ಲಿಪ್ರತಿಯೊಬ್ಬರೂ ಸ್ವಯಂಪ್ರೇರಿತರಾಗಿ ಭಾಗವಹಿಸಬೇಕು ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ತಿಳಿಸಿದರು.

ಜಿಲ್ಲಾಡಳಿತವು ಅಕ್ಟೋಬರ್‌ 1ರ ವರೆಗೆ ಹಮ್ಮಿಕೊಂಡಿರುವ ‘ಪ್ಲಾಸ್ಟಿಕ್‌ ಸಾಮಗ್ರಿಗಳ ಬಳಕೆ ನಿಷೇಧದ ಕುರಿತು ಜನಜಾಗೃತಿ’ ಜಾಥಾಕ್ಕೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.

ಪ್ಲಾಸ್ಟಿಕ್‍ನಿಂದ ಅನಾಹುತಗಳು ಹೆಚ್ಚುತ್ತಿವೆ. ಮೂರ್ನಾಲ್ಕು ದಿನಗಳಿಂದ ಉತ್ತಮ ಮಳೆಯಾಗುತ್ತಿದೆ. ಬಿದ್ದ ಮಳೆನೀರು ಕೆರೆ-ಕಟ್ಟೆಗಳಿಗೆ ಸರಾಗವಾಗಿ ಹೋಗಲು ಪ್ಲಾಸ್ಟಿಕ್‍ ಕಸದಿಂದ ಅಡಚಣೆಯಾಗಿದೆ. ಹರಿಯುವ ನೀರಿಗೆ ಪ್ಲಾಸ್ಟಿಕ್ ಸೇರುತ್ತಿರುವುದರಿಂದ ಜಲಮಾಲಿನ್ಯ ಉಂಟಾಗುತ್ತಿದೆ. ಈ ನಿಟ್ಟಿನಲ್ಲಿ ಪ್ಲಾಸ್ಟಿಕ್ ಅನ್ನು ಸಂಪೂರ್ಣವಾಗಿ ನಿಷೇಧಿಸಲು ಎಲ್ಲರೂ ಕೈಜೋಡಿಸಿ ಈ ಜನಾಂದೋಲನವನ್ನು ಯಶಸ್ವಿಗೊಳಿಸಬೇಕು ಎಂದರು.

ADVERTISEMENT

ಜಿಲ್ಲಾಧಿಕಾರಿ ಕೆ.ರಾಕೇಶ್‍ಕುಮಾರ್, ಬಾಪೂಜಿ ಅವರ 150ನೇ ಜಯಂತಿ ಸಂದರ್ಭದಲ್ಲಿ ಪ್ಲಾಸ್ಟಿಕ್ ನಿಷೇಧದ ಬಗ್ಗೆ ಜನಜಾಗೃತಿ ಮೂಡಿಸಲುಈ ಜನಾಂದೋಲನ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು, ಮಕ್ಕಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ಲಾಸ್ಟಿಕ್ ಬಳಸದಿರುವ ಕುರಿತು ಒಬ್ಬರಿಂದ ಒಬ್ಬರಿಗೆ ಮಾಹಿತಿ ರವಾನಿಸಿ ಅರಿವು ಮೂಡಿಸಬೇಕು ಎಂದು ತಿಳಿಸಿದರು.

ಮೇಯರ್ ಲಲಿತಾ ರವೀಶ್, ಪ್ಲಾಸ್ಟಿಕ್ ತಯಾರಿಕೆಯನ್ನೇ ರದ್ದುಗೊಳಿಸಿದಲ್ಲಿ ಪ್ಲಾಸ್ಟಿಕ್ ನಿಷೇಧ ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ಎಂಪ್ರೆಸ್ ಕಾಲೇಜಿನ ವಿದ್ಯಾರ್ಥಿನಿಯರು ಜಾಥಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪುರಭವನದಿಂದ ಆರಂಭವಾದ ಜಾಥಾ ಎಂ.ಜಿ.ರಸ್ತೆ-ಜಿಲ್ಲಾಧಿಕಾರಿಗಳ ಕಚೇರಿ ಮೂಲಕ ಸಾಗಿ ಬಾಲಗಂಗಾಧರನಾಥ ಸ್ವಾಮೀಜಿ ವೃತ್ತದಲ್ಲಿ ಕೊನೆಗೊಂಡಿತು.

ಈ ಜಾಗೃತಿ ಜಾಥಾದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೋನ ವಂಶಿಕೃಷ್ಣ, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾ ಅಧಿಕಾರಿ(ಸಿಇಒ) ಶುಭಾ ಕಲ್ಯಾಣ್, ಮಹಾನಗರ ಪಾಲಿಕೆ ಉಪಮೇಯರ್ ರೂಪಶ್ರೀ, ಪಾಲಿಕೆಯ ಆರೋಗ್ಯಾಧಿಕಾರಿ ನಾಗೇಶ್, ಟೂಡಾ ಆಯುಕ್ತ ಯೋಗಾನಂದ ಸೇರಿದಂತೆ ಪಾಲಿಕೆ ಸದಸ್ಯರು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.