ADVERTISEMENT

ಶಿಷ್ಟರ ಮೌನ ಅಪಾಯಕಾರಿ: ನಿವೃತ್ತ ನ್ಯಾಯಾಧೀಶ ಸಂಗಪ್ಪ ವಿಠಲ್ ಕೋಡ್

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2021, 3:40 IST
Last Updated 20 ಮಾರ್ಚ್ 2021, 3:40 IST
ಪಾದಯಾತ್ರೆಗೆ ನಿವೃತ್ತ ನ್ಯಾಯಾಧೀಶ ಸಂಗಪ್ಪ ವಿಠಲ್ ಕೋಡ್ ಚಾಲನೆ ನೀಡಿದರು
ಪಾದಯಾತ್ರೆಗೆ ನಿವೃತ್ತ ನ್ಯಾಯಾಧೀಶ ಸಂಗಪ್ಪ ವಿಠಲ್ ಕೋಡ್ ಚಾಲನೆ ನೀಡಿದರು   

ಕುಣಿಗಲ್: ಸಮಾಜದಲ್ಲಿ ದುಷ್ಟರ ದೌರ್ಜನ್ಯಕ್ಕಿಂತಲೂ ಶಿಷ್ಟರ ಮೌನ ಅತ್ಯಂತ ಅಪಾಯಕಾರಿ ಎಂದು ನಿವೃತ್ತ ನ್ಯಾಯಾಧೀಶ ಸಂಗಪ್ಪ ವಿಠಲ್ ಕೋಡ್ ಹೇಳಿದರು.

ಲೋಕಾಯುಕ್ತಾ ವ್ಯವಸ್ಥೆ ಬಲಪಡಿಸಲು ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಹೋರಾಟಗಾರರ ವೇದಿಕೆ ಹಮ್ಮಿಕೊಂಡಿದ್ದ ಎಡೆಯೂರು ಸಿದ್ದಲಿಂಗೇಶ್ವರಸ್ವಾಮಿ ದೇವಾಲಯದಿಂದ ಮುಖ್ಯಮಂತ್ರಿ ಎಡಿಯೂರಪ್ಪ ಮನೆಬಾಗಿಲಿನವರೆಗೆ ಪಾದಯಾತ್ರೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಲೋಕಾಯುಕ್ತಾ ವ್ಯವಸ್ಥೆ ಬಲಪಡಿಸಬೇಕಾದ ಸರ್ಕಾರ ಗಮನಹರಿಸದ ಕಾರಣ ಎಚ್ಚರಿಸುವ ಕೆಲಸವನ್ನು ವೇದಿಕೆ ಮಾಡುತ್ತಿರುವುದು ಶ್ಲಾಘನೀಯ ಎಂದರು.

ADVERTISEMENT

ವೇದಿಕೆಯ ಅಧ್ಯಕ್ಷ ಎಚ್. ಜಿ. ರಮೇಶ್ ಮಾತನಾಡಿ, ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ಸಮಯದಲ್ಲಿ ಲೋಕಾಯುಕ್ತಾ ವ್ಯವಸ್ಥೆ ಬಲಪಡಿಸುವುದಾಗಿ ಎಡಿಯೂರಪ್ಪ ತಿಳಿಸಿದ್ದರೂ, ಈಗ ಮರೆತಿರುವಂತಿದೆ. ಈ ಕಾರಣದಿಂದಾಗಿ ಮುಖ್ಯಮಂತ್ರಿ ಗಮನಸೆಳೆಯಲು ಅವರ ಮನೆದೇವರಾದ ಎಡೆಯೂರು ಸಿದ್ದಲಿಂಗೇಶ್ವರಸ್ವಾಮಿ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿ ಪ್ರಸಾದದೊಂದಿಗೆ ಮುಖ್ಯಮಂತ್ರಿ ಯಡೆಯೂರಪ್ಪ ಅವರ ಗೃಹಕಚೇರಿವರೆಗೂ ಪಾದಯಾತ್ರೆ ಮೂಲಕ ತೆರಳಿ ಮನವಿ ಸಲ್ಲಿಸುವುದಾಗಿ ತಿಳಿಸಿದರು.

ಶುಕ್ರವಾರ ಬೆಳಿಗ್ಗೆ ಎಡೆಯೂರು ಸಿದ್ದಲಿಂಗೇಶ್ವರಸ್ವಾಮಿ ದೇವಾಲಯದ ಬಳಿ ಸಭೆ ನಡೆಸಿ ನಂತರ ವಿಶೇಷ ಪೂಜೆ ಸಲ್ಲಿಸಿ ಮನವಿ ಪತ್ರ ಮತ್ತು ಪ್ರಸಾದದೊಂದಿಗೆ ಮಧ್ಯಾಹ್ನ ಮೂರು ಗಂಟೆಗೆ ಪಾದಯಾತ್ರೆ ಪ್ರಾರಂಭಿಸಲಾಯಿತು.

ಕೆ.ಆರ್.ಎಸ್ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ರವಿಕೃಷ್ಣರೆಡ್ಡಿ, ಎಚ್.ಎಂ.ವೆಂಕಟೇಶ್, ಮಲ್ಲಿಕಾರ್ಜುನ್ ಮತ್ತು ವಿವಿಧ ಜಿಲ್ಲೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು. ಇದೇ 22ರಂದು ಬೆಂಗಳೂರಿಗೆ ಪಾದಯಾತ್ರೆಯಲ್ಲಿ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರು ತಲುಪಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.