ADVERTISEMENT

ವಿವಿಧೆಡೆ ಮುಂದುವರಿದ ಪ್ರತಿಭಟನೆ

ಡಿಸಿಸಿ ಬ್ಯಾಂಕ್ ಸೂಪರ್ ಸೀಡ್‌ಗೆ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 24 ಜುಲೈ 2019, 14:47 IST
Last Updated 24 ಜುಲೈ 2019, 14:47 IST
ಮಧುಗಿರಿ ತಾಲ್ಲೂಕಿನ ಐಡಿಹಳ್ಳಿ ಗ್ರಾಮದ ವಿಎಸ್‍ಎಸ್‍ಎನ್ ಕಚೇರಿ ಮುಂಭಾಗ ಕಾಂಗ್ರೆಸ್‌ ಮುಖಂಡರು ಹಾಗೂ ರೈತರು ಮಂಗಳವಾರ ಪ್ರತಿಭಟನೆ ನಡೆಸಿದರು
ಮಧುಗಿರಿ ತಾಲ್ಲೂಕಿನ ಐಡಿಹಳ್ಳಿ ಗ್ರಾಮದ ವಿಎಸ್‍ಎಸ್‍ಎನ್ ಕಚೇರಿ ಮುಂಭಾಗ ಕಾಂಗ್ರೆಸ್‌ ಮುಖಂಡರು ಹಾಗೂ ರೈತರು ಮಂಗಳವಾರ ಪ್ರತಿಭಟನೆ ನಡೆಸಿದರು   

ತುಮಕೂರು/ಮಧುಗಿರಿ/ಪಾವಗಡ: ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ (ಡಿಸಿಸಿ) ಸೂಪರ್ ಸೀಡ್ ವಿರೋಧಿಸಿ ಜಿಲ್ಲೆಯ ವಿವಿಧ ಕಡೆಗಳಲ್ಲಿ ಬ್ಯಾಂಕ್ ನೌಕರರು ಮಂಗಳವಾರವೂ ಪ್ರತಿಭಟನೆ ಮುಂದುವರಿಸಿದರು.

ನಗರದ ಡಿಸಿಸಿ ಬ್ಯಾಂಕ್ ಶಾಖೆಗಳಲ್ಲಿ ಪ್ರತಿಭಟಿಸಿದ ನೌಕರರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ಹಾಗೂ ಲೋಕೋಪಯೋಗಿ ಇಲಾಖೆ ಸಚಿವ ಎಚ್.ಡಿ.ರೇವಣ್ಣ ಅವರ ವಿರುದ್ಧ ಘೋಷಣೆಗಳನ್ನು ಕೂಗಿದರು. ಡಿಸಿಸಿ ಬ್ಯಾಂಕ್ ನೌಕರರ ಯೂನಿಯನ್ ಕಾರ್ಯದರ್ಶಿ ಮಧುಸೂದನ್ ನೇತೃತ್ವವಹಿಸಿದ್ದರು.

ಮಧುಗಿರಿ ತಾಲ್ಲೂಕಿನ ಐಡಿಹಳ್ಳಿ ಗ್ರಾಮದ ವಿಎಸ್‍ಎಸ್‍ಎನ್ ಕಚೇರಿ ಮುಂಭಾಗ ಕಾಂಗ್ರೆಸ್‌ ಮುಖಂಡರು ಹಾಗೂ ರೈತರು ಪ್ರತಿಭಟನೆ ನಡೆಸಿದರು.

ADVERTISEMENT

ಡಿಸಿಸಿ ಬ್ಯಾಂಕ್ ವತಿಯಿಂದ ಸಾಲದ ಸೌಲಭ್ಯ ಸೇರಿದಂತೆ ಅನೇಕ ಜನಪರ ಯೋಜನೆಗಳನ್ನು ರೂಪಿಸುವ ಮೂಲಕ ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರು ಬಡವರ್ಗ, ರೈತಾಪಿ ವರ್ಗ, ಸ್ತ್ರಿಶಕ್ತಿ ಸಂಘದ ಸದಸ್ಯರಿಗೆ, ಹಿಂದುಳಿದ ವರ್ಗ ಹಾಗೂ ಪರಿಶಿಷ್ಟರಿಗೆ ಆರ್ಥಿಕವಾಗಿ ಸದೃಢರಾಗಲು ಶ್ರಮಿಸುತ್ತಿದ್ದಾರೆ. ಇವರ ಏಳ್ಗೆಯನ್ನು ಸಹಿಸದೇ ಡಿಸಿಸಿ ಬ್ಯಾಂಕ್ ಸೂಪರ್ ಸೀಡ್ ಮಾಡಿಸಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿ, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಇಂದಿರಾ ದೇನಾನಾಯ್ಕ ಮಾತನಾಡಿದರು. ಎಪಿಎಂಸಿ ಮಾಜಿ ಅಧ್ಯಕ್ಷ ಪಿ.ಟಿ.ಗೋವಿಂದಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜಗೋಪಾಲ್, ವಿಎಸ್‍ಎಸ್‍ಎನ್ ಅಧ್ಯಕ್ಷ ಕೆ.ಎಸ್.ಶಿವಶಂಕರರೆಡ್ಡಿ, ತಾ.ಪಂ ಮಾಜಿ ಸದಸ್ಯ ಶ್ರೀನಿವಾಸ ರೆಡ್ಡಿ, ಮುಖಂಡರಾದ ಗುಡ್ಡೀರಪ್ಪ, ರಾಜಣ್ಣ, ಸದಾಶಿವ, ಲಕ್ಷ್ಮೀಪತಯ್ಯ, ಸದಾಶಿವರೆಡ್ಡಿ, ಹನುಮಂತರೆಡ್ಡಿ ಹಾಜರಿದ್ದರು.

ಪಾವಗಡ ತಾಲ್ಲೂಕು ಲಿಂಗದಹಳ್ಳಿಯ ವ್ಯವಸಾಯ ಸೇವಾ ಸಹಕಾರ ಸಂಘದ ನಿರ್ದೇಶಕರು, ರೈತರು ಡಿಸಿಸಿ ಬ್ಯಾಂಕ್ ಸೂಪರ್ ಸೀಡ್ ಮಾಡಿರುವುದನ್ನು ಖಂಡಿಸಿ ಪ್ರತಿಭಟಿಸಿದರು. ಮುಖಂಡ ಆಂಜನರೆಡ್ಡಿ, ರಾಮಾಂಜನರೆಡ್ಡಿ, ಶ್ರೀರಾಮರೆಡ್ಡಿ, ಶ್ರೀನಿವಾಸರೆಡ್ಡಿ ಇದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.