ADVERTISEMENT

ಎತ್ತಿನಹೊಳೆ: ಎಲ್ಲ ಸಂತ್ರಸ್ತರಿಗೆ ಪರಿಹಾರ ನೀಡಿ

ಎತ್ತಿನಹೊಳೆ ನೀರು ತಿಪಟೂರು ತಾಲ್ಲೂಕಿಗೆ ಹಂಚಿಕೆಗೆ ಮನವಿ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2021, 9:33 IST
Last Updated 26 ಆಗಸ್ಟ್ 2021, 9:33 IST
ಎತ್ತಿನಹೊಳೆ ಸಂತ್ರಸ್ತರಿಗೆ ಪರಿಹಾರ ಹಾಗೂ ಕುಂದುಕೊರತೆ ಬಗೆಹರಿಸುವ ಸಲುವಾಗಿ ಕರೆದಿದ್ದ ಸಭೆಯಲ್ಲಿ ಎತ್ತಿನಹೊಳೆ ಹೋರಾಟ ಸಮಿತಿಯಿಂದ ಮನವಿ ಸಲ್ಲಿಸಲಾಯಿತು
ಎತ್ತಿನಹೊಳೆ ಸಂತ್ರಸ್ತರಿಗೆ ಪರಿಹಾರ ಹಾಗೂ ಕುಂದುಕೊರತೆ ಬಗೆಹರಿಸುವ ಸಲುವಾಗಿ ಕರೆದಿದ್ದ ಸಭೆಯಲ್ಲಿ ಎತ್ತಿನಹೊಳೆ ಹೋರಾಟ ಸಮಿತಿಯಿಂದ ಮನವಿ ಸಲ್ಲಿಸಲಾಯಿತು   

ತಿಪಟೂರು: ಎತ್ತಿನಹೊಳೆ ಯೋಜನೆಯಲ್ಲಿ ತಾಲ್ಲೂಕಿನ ಎಲ್ಲ ಸಂತ್ರಸ್ತರಿಗೆ ಪರಿಹಾರ ನೀಡಬೇಕು ಹಾಗೂ ತಾಲ್ಲೂಕಿಗೆ ನೀರು ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿ ಎತ್ತಿನಹೊಳೆ ಹೋರಾಟ ಸಮಿತಿ ಪದಾಧಿಕಾರಿಗಳು ಹೆಚ್ಚುವರಿ ಜಿಲ್ಲಾಧಿಕಾರಿ ಚನ್ನಬಸಪ್ಪ ಅವರಿಗೆ ಮನವಿ ಸಲ್ಲಿಸಿದರು.

ತಾಲ್ಲೂಕಿನ ಗುಡಿಗೊಂಡನಹಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಬುಧವಾರ ಗ್ರಾ.ಪಂ. ವ್ಯಾಪ್ತಿಯಲ್ಲಿ ಬರುವ ಎತ್ತಿನಹೊಳೆ ಸಂತ್ರಸ್ತರಿಗೆ ಎರಡನೇ ಶೆಡ್ಯೂಲ್‍ನಲ್ಲಿ ಬರುವ ಪರಿಹಾರ ಹಾಗೂ ಕುಂದುಕೊರತೆ ಬಗೆಹರಿಸುವ ಸಲುವಾಗಿ ಕರೆದಿದ್ದ ಸಭೆಯಲ್ಲಿ ಮನವಿ ಸಲ್ಲಿಸಲಾಯಿತು.

ಎತ್ತಿನಹೊಳೆ ಹೋರಾಟ ಸಮಿತಿ ಕಾರ್ಯದರ್ಶಿ ಎಸ್‌ಎನ್ ಸ್ವಾಮಿ ಮಾತನಾಡಿ, ಎತ್ತಿನಹೊಳೆ ಯೋಜನೆ ಹಾದುಹೋಗುವ ಹಳ್ಳಿಗಳಲ್ಲಿ ಬಗರ್‌ಹುಕುಂ ಜಮೀನುಗಳಿದ್ದು, ಖಾತೆಗೆ ಸಂಬಂಧಪಟ್ಟ ಸಮಸ್ಯೆಗಳಿವೆ. ಇದನ್ನು ಪರಿಹರಿಸಬೇಕು ಎಂದರು.

ADVERTISEMENT

ಎತ್ತಿನಹೊಳೆ ಯೋಜನೆಗೆ ಭೂಸ್ವಾಧೀನ ಮಾಡಿಕೊಳ್ಳಲು ಹೊರಡಿಸಿರುವ ಅಧಿಸೂಚಗೆ ಹಲವು ವರ್ಷಗಳಷ್ಟು ಹಳೆಯದ್ದಾಗಿದೆ. ಇದರಿಂದ ರೈತರಿಗೆ ಸುಮಾರು ಆರು ವರ್ಷಗಳ ಹಿಂದಿನ ನೋಂದಣಾಧಿಕಾರಿ ಕಚೇರಿ ಬೆಲೆಯೇ ಭೂಮಿಗೆ ಸಿಗುವುದರಿಂದ ಅನ್ಯಾಯವಾಗುತ್ತದೆ. ಆದ್ದರಿಂದ ಹೊಸ ಅಧಿಸೂಚನೆ ಹೊರಡಿಸಬೇಕು ಎಂದು ಒತ್ತಾಯಿಸಿದರು.

ಎತ್ತಿನಹೊಳೆ ಯೋಜನೆಯ ಕಾಲುವೆ ತಿಪಟೂರಿನ ಮೇಲೆ ಹಾದು ಹೋಗುತ್ತಿದ್ದು, 1,200 ಎಕರೆ ಭೂಮಿ ಸ್ವಾಧೀನವಾಗುತ್ತಿದೆ. ಈ ಕಾಲುವೆ ಹಾಯುವ ಉದ್ದಕ್ಕೂ ಬರ ಪ್ರದೇಶ. ಆದರೆ ತಾಲ್ಲೂಕಿಗೆ ನೀರು ಹಂಚಿಕೆಯಾಗಿರಲಿಲ್ಲ. ಎತ್ತಿನಹೊಳೆ ಹೋರಾಟ ಸಮಿತಿಯಿಂದ ನೀರಿಗಾಗಿ ಚಳವಳಿ ನಡೆದ ಮೇಲೆ ನೀರಿನ ಹಂಚಿಕೆಯಾಗಿದೆ ಎಂದು ಪತ್ರಗಳಲ್ಲಿ ಹರಿದಾಡುತ್ತಿದ್ದೆಯೇ ಹೊರತು, ಇದುವರೆಗೂ ಸಂಬಂಧಪಟ್ಟ ಇಲಾಖೆಯಿಂದ ಅಧಿಕೃತ ಮಾಹಿತಿಯಿಲ್ಲ ಎಂದರು.

ಹುಚ್ಚಗೊಂಡನಹಳ್ಳಿ ಗ್ರಾ.ಪಂ.ಸದಸ್ಯ ನರಸಿಂಹಯ್ಯ ಮಾತನಾಡಿ, ಹುಚ್ಚಗೊಂಡನಹಳ್ಳಿ ನಗರ ಪ್ರದೇಶಕ್ಕೆ ಹತ್ತಿರವಾಗಿರುವುದರಿಂದ ಬಫರ್ ಜೋನ್ ಒಳಗೆ ಬರುತ್ತದೆ. ಇದರಿಂದಾಗಿ ರೈತರಿಗೆ ನಗರ ಪ್ರದೇಶಕ್ಕೆ ನೀಡುವ ರೀತಿಯಲ್ಲಿ ಪರಿಹಾರ ನೀಡಬೇಕು. ಕೆಲ ಸಂತ್ರಸ್ತರ ಪಹಣಿಗಳು ಜಂಟಿಯಲ್ಲಿವೆ. ಇದನ್ನು ಅಧಿಕಾರಿಗಳು ಸರಿಪಡಿಸಿಕೊಡಬೇಕು ಎಂದು ಒತ್ತಾಯಿಸಿದರು.

ಗುಡಿಗೊಂಡಹನಹಳ್ಳಿ, ಕರಡಿಯಲ್ಲಿ ಸಭೆ ಶಾಂತವಾಗಿ ನಡೆಯಿತು. ಹುಚ್ಚಗೊಂಡನಹಳ್ಳಿಯಲ್ಲಿ ಗ್ರಾ.ಪಂ.ಸದಸ್ಯರು, ಕೆಲ ಸಂತ್ರಸ್ತರು ಎತ್ತಿನಹೊಳೆ ನೀರನ್ನು ತಾಲ್ಲೂಕಿಗೆ ನೀಡಿದ ನಂತರ ಸಭೆ ನಡೆಸಿ ಎಂದು ಆಗ್ರಹಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಕೆ. ಚನ್ನಬಸಪ್ಪ, ‘ನಮಗೂ ನೀರಿನ ಹಂಚಿಕೆಗೂ ಸಂಬಂಧವಿಲ್ಲ’ ಎಂದು ಹೇಳಿ ಸಭೆ ಮುಂದುವರೆಸಿದರು.

ಎಸ್ಎಲ್‌ಎಒ ಮಂಜುನಾಥ್, ತಹಶೀಲ್ದಾರ್ ಆರ್.ಜಿ.ಚಂದ್ರಶೇಖರ್, ಡಿವೈಎಸ್‍ಪಿ ಎನ್. ಚಂದನ್ ಕುಮಾರ್, ಗ್ರೇಡ್ 2 ತಹಶೀಲ್ದಾರ್ ಜಗನ್ನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.