ADVERTISEMENT

ತುಮಕೂರಿನ ಮನೆಗಳಲ್ಲೇ ರಾಮನವಮಿ ಆಚರಣೆ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2020, 16:52 IST
Last Updated 2 ಏಪ್ರಿಲ್ 2020, 16:52 IST
ತುಮಕೂರಿನ ಬಾರ್‌ಲೈನ್ ರಸ್ತೆಯ ಶ್ರೀರಾಮ ದೇವಾಲಯದಲ್ಲಿ ಲಾಕ್‌ಡೌನ್ ಹಿನ್ನೆಲೆಯಲ್ಲಿ ರಾಮನವಮಿ ಹಬ್ಬದ ಅದ್ದೂರಿ ಆಚರಣೆಯನ್ನು ರದ್ದುಗೊಳಿಸಲಾಗಿತ್ತು. ದೇವರ ಮೂರ್ತಿಗೆ ವಿಶೇಷ ಅಲಂಕಾರದೊಂದಿಗೆ ಪೂಜೆ ಸಲ್ಲಿಸಲಾಯಿತು
ತುಮಕೂರಿನ ಬಾರ್‌ಲೈನ್ ರಸ್ತೆಯ ಶ್ರೀರಾಮ ದೇವಾಲಯದಲ್ಲಿ ಲಾಕ್‌ಡೌನ್ ಹಿನ್ನೆಲೆಯಲ್ಲಿ ರಾಮನವಮಿ ಹಬ್ಬದ ಅದ್ದೂರಿ ಆಚರಣೆಯನ್ನು ರದ್ದುಗೊಳಿಸಲಾಗಿತ್ತು. ದೇವರ ಮೂರ್ತಿಗೆ ವಿಶೇಷ ಅಲಂಕಾರದೊಂದಿಗೆ ಪೂಜೆ ಸಲ್ಲಿಸಲಾಯಿತು   

ತುಮಕೂರು: ಯುಗಾದಿ ಆಚರಣೆ ಮೇಲೆ ಕರಿನೆರಳು ಬೀರಿದ್ದ ‘ಲಾಕ್‌ಡೌನ್’, ರಾಮನವಮಿ ಸಂಭ್ರಮಕ್ಕೂ ಅವಕಾಶ ನೀಡಲಿಲ್ಲ. ಮಂಗಳವಾರ ಮನೆಗಳಲ್ಲೇ ಶ್ರೀರಾಮನ ನೆನ‍ಪು ಮಾಡಿಕೊಂಡರು.

ನಗರದ ಆರ್‌ಟಿಒ ಕಚೇರಿ ಬಳಿ ಇರುವ ವೀರಾಂಜನೇಯ ಸ್ವಾಮಿ ದೇವಾಲಯದಲ್ಲಿ ಬೆಳಿಗ್ಗೆ 5.30ಕ್ಕೆ ಅಭಿಷೇಕ, ನೈವೇದ್ಯ ಮಾಡಲಾಯಿತು. ಸಾರ್ವಜನಿಕರಿಗೆ ಅವಕಾಶ ಇರಲಿಲ್ಲ ಎಂದು ದೇವಾಲಯದ ಅರ್ಚಕ ಯದುನಂದನ್‌ ಮಾಹಿತಿ ನೀಡಿದರು. ದೇವಾಲಯದ ಹೊರಗಡೆ ಕೆಲವರು ಕೈ ಮುಗಿಯುತ್ತಿದ್ದುದು ಕಂಡುಬಂತು.

ಬಿ.ಎಚ್‌.ರಸ್ತೆ ಮಹಾಲಕ್ಷ್ಮಿ ದೇವಾಲಯದಲ್ಲಿ ವಿಶೇಷ ಪೂಜೆಗಳು ನಡೆಯಲಿಲ್ಲ. ದೇವಸ್ಥಾನದ ಹೊರಗಡೆ ರಾಮನ ಪೋಟೋ ಇಡಲಾಗಿತ್ತು. ದೇವಾಲಯಕ್ಕೆ ಬೀಗ ಹಾಕಲಾಗಿತ್ತು. ಶ್ರೀರಾಮನಗರದ ವೀರಾಂಜನೇಯ ಸ್ವಾಮಿ ದೇವಾಲಯದಲ್ಲೂ ಬೀಗ ಹಾಕಿದ್ದು ಕಂಡುಬಂತು.

ADVERTISEMENT

ಕೋಟೆ ಆಂಜನೇಯ ದೇವಾಲಯದಲ್ಲಿ ಬೆಳಿಗ್ಗೆ 6.30ಕ್ಕೆ ಅರ್ಚಕರು ಪೂಜೆ ಮಾಡಿದ ನಂತರ ಬೀಗ ಹಾಕಲಾಯಿತು ಎಂದು ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ತೇಜು ನರಸಿಂಹಮೂರ್ತಿ ಹೇಳಿದರು.

ನಗರದ ಪ್ರಮುಖ ರಸ್ತೆ, ವೃತ್ತಗಳಲ್ಲಿ ಶಾಮಿಯಾನ ಹಾಕಿ ವಿಶೇಷ ಪೂಜೆ ನಡೆಸಿ, ಪಾನಕ, ಮಜ್ಜಿಗೆ, ಹೆಸರು ಬೇಳೆ ಹಂಚಲಾಗುತ್ತಿತ್ತು. ಹಸಿರು ತಳಿರು ತೋರಣಗಳನ್ನು ಕಟ್ಟಲಾಗುತ್ತಿತ್ತು. ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯುತ್ತಿದ್ದವು. ಲಾಕ್‌ಡೌನ್‌ ಇರುವುದರಿಂದ ಸಾಧ್ಯವಾಗಿಲ್ಲ ಎಂದು ಮಹಾಲಕ್ಷ್ಮಿ ದೇವಾಲಯದ ಅರ್ಚಕ ಚಂದನ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.