ADVERTISEMENT

ಬದುಕಿದ್ದಾಗಲೇ ಕಲಾವಿದರಿಗೆ ಗೌರವಿಸಿ: ಶ್ರೀನಿವಾಸ ಜಿ. ಕಪ್ಪಣ್ಣ

ನರ್ತನಪುರಿ ನಾಟಕೋತ್ಸವಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2021, 4:30 IST
Last Updated 15 ಡಿಸೆಂಬರ್ 2021, 4:30 IST
ಕುಣಿಗಲ್ ಬಯಲು ರಂಗಮಂದಿರದಲ್ಲಿ ನರ್ತನಪುರಿ ನಾಟಕೋತ್ಸವವನ್ನು ತಹಶೀಲ್ದಾರ್ ಮಹಬಲೇಶ್ವರ ನಗಾರಿ ಬಾರಿಸುವ ಮೂಲಕ ಉದ್ಘಾಟಿಸಿದರು. ಶ್ರೀನಿವಾಸ ಜಿ. ಕಪ್ಪಣ್ಣ, ಲೋಕೇಶ್, ಜಗದೀಶ್ ನಾಯಕ್, ಮೋಹನ್ ಕುಮಾರ ಜೈನ್, ಮಡಕೆಹಳ್ಳಿ ಶಿವಣ್ಣ, ದಿನೇಶ್ ಕುಮಾರ್ ಹಾಜರಿದ್ದರು
ಕುಣಿಗಲ್ ಬಯಲು ರಂಗಮಂದಿರದಲ್ಲಿ ನರ್ತನಪುರಿ ನಾಟಕೋತ್ಸವವನ್ನು ತಹಶೀಲ್ದಾರ್ ಮಹಬಲೇಶ್ವರ ನಗಾರಿ ಬಾರಿಸುವ ಮೂಲಕ ಉದ್ಘಾಟಿಸಿದರು. ಶ್ರೀನಿವಾಸ ಜಿ. ಕಪ್ಪಣ್ಣ, ಲೋಕೇಶ್, ಜಗದೀಶ್ ನಾಯಕ್, ಮೋಹನ್ ಕುಮಾರ ಜೈನ್, ಮಡಕೆಹಳ್ಳಿ ಶಿವಣ್ಣ, ದಿನೇಶ್ ಕುಮಾರ್ ಹಾಜರಿದ್ದರು   

ಕುಣಿಗಲ್: ‘ಕಲಾವಿದರು ಬದುಕಿದ್ದಾಗಲೇ ಅವರ ಸಾಧನೆ ಸ್ಮರಿಸಿ ಗೌರವಿಸಬೇಕು’ ಎಂದು ಕರ್ನಾಟಕ ನಾಟಕ ಅಕಾಡೆಮಿಯ ಮಾಜಿ ಅಧ್ಯಕ್ಷ ಶ್ರೀನಿವಾಸ ಜಿ. ಕಪ್ಪಣ್ಣ ಮನವಿ ಮಾಡಿದರು.

ಪಟ್ಟಣದ ಸ್ನೇಹ ಕಲಾ ಪ್ರತಿಷ್ಠಾನ ಮತ್ತು ರಂಗಧಾತ್ರಿ ಸಿರಿಗೇರಿ (ಬಳ್ಳಾರಿ)ಯಿಂದ ರಂಗಕರ್ಮಿ ಹುಲಿವಾನ ಗಂಗಾಧರಯ್ಯ ಸ್ಮರಣಾರ್ಥ ಸೋಮವಾರ ಸಂಜೆ ಹಮ್ಮಿಕೊಂಡಿದ್ದ ನರ್ತನಪುರಿ ನಾಟಕೋತ್ಸವದಲ್ಲಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಸಾಹಿತ್ಯ ಮತ್ತು ಕಲಾ ಸೇವೆ ಮಾಡಿದವರನ್ನು ಸ್ಮರಿಸುವ ಕಾರ್ಯ ನಿರೀಕ್ಷಿತ ಮಟ್ಟದಲ್ಲಿ ನಡೆಯುತ್ತಿಲ್ಲ. ಹುಲಿವಾನ ಗಂಗಾಧರಯ್ಯ ರಂಗಭೂಮಿ, ಕಿರುತೆರೆ, ಹಿರಿತೆರೆ ಮತ್ತು ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿ ಜನಮನದಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರೆ. ಅವರ ಸ್ಮರಣಾರ್ಥ ಸುಸಜ್ಜಿತ ರಂಗಮಂದಿರ ನಿರ್ಮಾಣ ಮಾಡುವ ಕಾರ್ಯಕ್ಕೆ ಚಾಲನೆ ನೀಡಬೇಕು ಎಂದು ಹೇಳಿದರು.

ADVERTISEMENT

ಪ್ರತಿಷ್ಠಾನದ ಅಧ್ಯಕ್ಷ ದಿನೇಶ್ ಕುಮಾರ್ ಮಾತನಾಡಿ, ರಂಗಭೂಮಿ ಕಲಾವಿದರಾಗಿ ಸಾಧನೆ ಮಾಡಿದ ಹುಲಿವಾನ ಗಂಗಾಧರಯ್ಯ ತಾಲ್ಲೂಕಿನ ತೆಂಗು ಬೆಳೆಗಾರರ ಹಿತದೃಷ್ಟಿಯಿಂದ ಕಂಪನಿ ಪ್ರಾರಂಭಿಸಿ ಕೃಷಿ ರಂಗದಲ್ಲೂ ಸಾಧನೆ ಮಾಡಿದ್ದಾರೆ. ಅವರ ಸ್ಮರಣಾರ್ಥ ಪ್ರತಿವರ್ಷ ನಾಟಕೋತ್ಸವ ಹಮ್ಮಿಕೊಳ್ಳಲಾಗುವುದು ಎಂದರು.

ನಾಟಕೋತ್ಸವದ ಅಂಗವಾಗಿ ‘ಮುದ್ದಣ್ಣನ ಪ್ರಮೋಷನ್ ಪ್ರಸಂಗ’ ಮತ್ತು ‘ಬಾಹುಬಲಿ ವಿಜಯ’ ನಾಟಕ ಪ್ರದರ್ಶನ ನಡೆಯಿತು.

ನಾಟಕ ಅಕಾಡೆಮಿಯ ಮಾಜಿ ಅಧ್ಯಕ್ಷ ಲೋಕೇಶ್, ಹುಲಿವಾನ ಗಂಗಾಧರಯ್ಯ ಅವರ ಪುತ್ರ ಮಹೇಶ್, ತಹಶೀಲ್ದಾರ್ ಮಹಬಲೇಶ್ವರ್, ಇಂಡೀ ಸ್ಪಾನಿಷ್ ವ್ಯವಸ್ಥಾಪಕ ಜಗದೀಶ್ ನಾಯಕ್, ಮಡಕೆಹಳ್ಳಿ ಶಿವಣ್ಣ, ಮೋಹನ್ ಕುಮಾರ್ ಜೈನ್, ಪ್ರತಿಷ್ಠಾನದ ಮಹಾಂತೇಶ್, ಮಂಜುನಾಥ್, ಶ್ರೀಧರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.