ADVERTISEMENT

ಶಾಲಾ ಕಾಂಪೌಂಡ್ ನಿರ್ಮಾಣಕ್ಕೆ ಒತ್ತಾಯ: ಶಾಲೆಗೆ ಹೋಗದ ಬಾಲಕಿ, ನ್ಯಾಯಾಧೀಶರು ಭೇಟಿ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2025, 5:32 IST
Last Updated 13 ಆಗಸ್ಟ್ 2025, 5:32 IST
ತುಮಕೂರು ತಾಲ್ಲೂಕಿನ ಬೆಳಧರ ಶಾಲೆ ವಿದ್ಯಾರ್ಥಿನಿ ಸಿಮ್ರಾ ಸನೋಬರ್‌ ಮನೆಗೆ ಮಂಗಳವಾರ ನ್ಯಾಯಾಧೀಶರಾದ ನೂರುನ್ನೀಸಾ ಭೇಟಿ ನೀಡಿ ಸಮಸ್ಯೆ ಆಲಿಸಿದರು
ತುಮಕೂರು ತಾಲ್ಲೂಕಿನ ಬೆಳಧರ ಶಾಲೆ ವಿದ್ಯಾರ್ಥಿನಿ ಸಿಮ್ರಾ ಸನೋಬರ್‌ ಮನೆಗೆ ಮಂಗಳವಾರ ನ್ಯಾಯಾಧೀಶರಾದ ನೂರುನ್ನೀಸಾ ಭೇಟಿ ನೀಡಿ ಸಮಸ್ಯೆ ಆಲಿಸಿದರು   

ತುಮಕೂರು: ತಾಲ್ಲೂಕಿನ ಬೆಳಧರ ಸರ್ಕಾರಿ ಶಾಲೆಗೆ ಕಾಂಪೌಂಡ್‌ ನಿರ್ಮಿಸುವಂತೆ ಒತ್ತಾಯಿಸಿ 11 ದಿನಗಳಿಂದ ಶಾಲೆಗೆ ತೆರಳದೆ ಪ್ರತಿಭಟಿಸುತ್ತಿದ್ದ ವಿದ್ಯಾರ್ಥಿನಿ ಸಿಮ್ರಾ ಸನೋಬರ್‌ ಮನೆಗೆ ಮಂಗಳವಾರ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾಯಾಧೀಶರಾದ ನೂರುನ್ನೀಸಾ ಭೇಟಿ ನೀಡಿ ಸಮಸ್ಯೆ ಆಲಿಸಿದರು.

ಸಿಮ್ರಾ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದಾರೆ. ‘ಶಾಲೆಗೆ ಕಾಂಪೌಂಡ್‌ ನಿರ್ಮಿಸುವ ತನಕ ಶಾಲೆಗೆ ಹೋಗುವುದಿಲ್ಲ, ಕಾಂಪೌಂಡ್‌ಗೆ ವ್ಯವಸ್ಥೆ ಮಾಡುವಂತೆ’ ಕೋರಿ ಪ್ರಧಾನಿ, ಮುಖ್ಯಮಂತ್ರಿಗೆ ಕಳೆದ 10 ದಿನಗಳ ಹಿಂದೆ ಪತ್ರ ಬರೆದಿದ್ದರು. ವಿಚಾರ ತಿಳಿದ ನೂರುನ್ನೀಸಾ ಮನೆಗೆ ಭೇಟಿ ನೀಡಿ ವಿಚಾರಿಸಿದರು.

‘ನಮ್ಮ ಶಾಲೆಗೆ ಕಾಂಪೌಂಡ್‌ ಇಲ್ಲ. ಹೀಗಾಗಿ ಕಾಂಪೌಂಡ್‌ ನಿರ್ಮಿಸುವ ತನಕ ನಾನು ಶಾಲೆಗೆ ಬರುವುದಿಲ್ಲ’ ಎಂದು 2024ರಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗೆ ಪತ್ರ ಬರೆದಿದ್ದರು. ಬಿಇಒ ಕಾಂಪೌಂಡ್‌ ನಿರ್ಮಾಣದ ಆಶ್ವಾಸನೆ ನೀಡಿದ್ದರು. ಒಂದು ವರ್ಷ ಕಳೆದರೂ ಯಾವುದೇ ಬೆಳವಣಿಗೆಯಾಗಿಲ್ಲ. ಇದೀಗ ಪ್ರಧಾನಮಂತ್ರಿ, ಮುಖ್ಯಮಂತ್ರಿಗೆ ಪತ್ರ ಬರೆದು ಶಾಲೆಗೆ ಗೈರಾಗಿದ್ದಾರೆ.

ADVERTISEMENT

‘ವಿದ್ಯಾರ್ಥಿನಿ ಶಾಲೆಗೆ ಹೋಗದೆ 11 ದಿನಗಳಾದರೂ ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸ್ಪಂದಿಸಿಲ್ಲ. ಕಾಂಪೌಂಡ್‌ ನಿರ್ಮಾಣಕ್ಕೆ ಪರ್ಯಾಯ ವ್ಯವಸ್ಥೆ ಮಾಡಬಹುದಿತ್ತು. ಶಾಲೆಯ ಆವರಣದಲ್ಲಿ ವಾಹನಗಳನ್ನು ನಿಲ್ಲಿಸದಂತೆ ಕ್ರಮವಹಿಸಬಹುದಿತ್ತು. ಅಧಿಕಾರಿ ವರ್ಗ ಸಂಪೂರ್ಣವಾಗಿ ನಿರ್ಲಕ್ಷ್ಯ ವಹಿಸಿದೆ’ ಎಂದು ನೂರುನ್ನೀಸಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.