ತುಮಕೂರು: ಶಿರಾ ಉಪಚುನಾವಣೆ ರಾಜ್ಯ ಮಟ್ಟದಲ್ಲಿ ಕಾಡುಗೊಲ್ಲ– ಊರುಗೊಲ್ಲರ (ಯಾದವ) ನಡುವಿನ ಆಂತರಿಕ ತಿಕ್ಕಾಟವನ್ನು ಮತ್ತಷ್ಟು ಹೆಚ್ಚಿಸಲು ವೇದಿಕೆ ಆಗಿದೆ.
ಎರಡೂ ಪಂಗಡಗಳು ರಾಜಕೀಯ ಶಕ್ತಿ ಮತ್ತು ಅಭಿವೃದ್ಧಿಗಾಗಿ ಒಂದಾಗಿ ನಡೆಯಬೇಕು ಎಂದು ಕೆಲವರು ಪ್ರತಿಪಾದಿಸಿದರೆ, ಇಲ್ಲಿಯವರೆಗೂ ಕಾಡುಗೊಲ್ಲರ ಸವಲತ್ತುಗಳು ಊರುಗೊಲ್ಲರ ಪಾಲಾಗಿವೆ. ಪ್ರತ್ಯೇಕ ಅಸ್ಮಿತೆ ಕಂಡುಕೊಂಡರೆ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ಕಾಡುಗೊಲ್ಲರ ಪ್ರಮುಖರು ಒಕ್ಕೊರಲಿನಿಂದ ನುಡಿಯುತ್ತಿದ್ದಾರೆ. ಈ ಅಭಿಪ್ರಾಯ ಬೇಧ ಸರ್ಕಾರ ಮಟ್ಟದಲ್ಲಿಯೂ ಪ್ರಭಾವ ಬೀರಿ ‘ಗೊಲ್ಲ ಅಭಿವೃದ್ಧಿ ನಿಗಮ’ದ ಹೆಸರನ್ನು ‘ಕಾಡುಗೊಲ್ಲ ಅಭಿವೃದ್ಧಿ ನಿಗಮ’ ಎಂದಾಗಿಸಿದೆ.
ಜಾಲತಾಣದಲ್ಲಿ ಜಟಾಪಟಿ: ಶಿರಾ ಚುನಾವಣೆಯನ್ನು ವೇದಿಕೆಯಾಗಿಸಿಕೊಂಡು ಕಾಡುಗೊಲ್ಲ– ಊರುಗೊಲ್ಲ ಸಮುದಾಯದ ಮುಖಂಡರು ಬಹಿರಂಗ ವಾಕ್ಸಮರ ನಡೆಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಪರ– ವಿರೋಧದ ಅಭಿಪ್ರಾಯಗಳು ಬಿಡುಬೀಸಾಗಿವೆ.
ಹಿರಿಯೂರು ಶಾಸಕಿ ಪೂರ್ಣಿಮಾ ಅವರ ಪತಿ ಹಾಗೂ ರಾಜ್ಯ ಗೊಲ್ಲರ ಸಂಘದ ಅಧ್ಯಕ್ಷ ಡಿ.ಟಿ.ಶ್ರೀನಿವಾಸ್, ‘ನಮ್ಮೆಲ್ಲರ ಶಾಲೆಯ ವರ್ಗಾವಣೆ ಪ್ರಮಾಣ ಪತ್ರದಲ್ಲಿ ಗೊಲ್ಲ/ ಯಾದವ ಎಂದೇ ಇದೆ. ಕಾಡುಗೊಲ್ಲ ಎಂದು ಪ್ರಮಾಣಪತ್ರ ನೀಡುತ್ತಿಲ್ಲ. ರಾಜಕೀಯಕ್ಕಾಗಿ ಕೆಲವರು ತುಮಕೂರು, ಚಿತ್ರದುರ್ಗಕ್ಕೆ ಬಂದರೆ ಕಾಡುಗೊಲ್ಲರು ಎನ್ನುತ್ತಾರೆ. ಇತರೆಡೆ ಗೊಲ್ಲರು ಎಂದೇ ಕರೆಯುತ್ತಾರೆ. ಇಡೀ ಸಮುದಾಯ ಒಂದಾಗಿ ಮುನ್ನಡೆದರೆ ಮಾತ್ರ ಉಳಿಯುತ್ತದೆ. ಇಲ್ಲದಿದ್ದರೆ ಕಷ್ಟ’ ಎಂದು ಕಾಡುಗೊಲ್ಲರ ಸಭೆಯಲ್ಲಿಯೇ ಮಾತನಾಡಿರುವ ವಿಡಿಯೊ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಈ ವಿಡಿಯೊಕ್ಕೆ ಪರ–ವಿರೋಧದ ಅಭಿಪ್ರಾಯಗಳು ದಾಖಲಾಗುತ್ತಿವೆ. ಶ್ರೀನಿವಾಸ್, ಶಿರಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಟಿಕೆಟ್ ಬಯಸಿದ್ದಾರೆ.
ಕರ್ನಾಟಕ ರಾಜ್ಯ ಕಾಡುಗೊಲ್ಲರ ಯುವಸೇನೆ ಫೇಸ್‌ಬುಕ್ ಖಾತೆಯಲ್ಲಿ ಮಂಜು, ಕೆಂಪರಾಯನಹಟ್ಟಿ, ಚಕ್ರವರ್ತಿ ಎಂಬುವವರು ‘ಕಾಡುಗೊಲ್ಲ’ ಎಂದಿರುವ ಶಾಲಾ ವರ್ಗಾವಣೆ ಪ್ರಮಾಣ ಪತ್ರ ಪ್ರಕಟಿಸಿದ್ದಾರೆ. ‘ನಾಳೆ ಎಲ್ಲರೂ ಇದೆ ತರಹ ಹಾಕಿ’ ಎಂದಿದ್ದಾರೆ.
ಪರಿಶಿಷ್ಟ ಪಂಗಡಕ್ಕೆ (ಎಸ್‌ಟಿ) ಸೇರಿಸುವಂತೆ ಆಗ್ರಹಿಸುತ್ತಿರುವ ಕಾಡುಗೊಲ್ಲರು ತುಮಕೂರು, ಚಿತ್ರದುರ್ಗ, ಹಾಸನ, ದಾವಣಗೆರೆ, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ಬಳ್ಳಾರಿ ಜಿಲ್ಲೆಗಳಲ್ಲಿ ಚದುರಿದಂತೆ ಇದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.