ಶಿರಾ: ‘ಈ ಬಾರಿಯ ಎಸ್ಎಸ್ಎಲ್‌ಸಿ ಪರೀಕ್ಷೆ ಫಲಿತಾಂಶವೇ ಶಿಕ್ಷಣ ಇಲಾಖೆ ಯಾವ ಕಡೆ ಸಾಗುತ್ತಿದೆ ಎನ್ನುವುದನ್ನು ತೋರಿಸುತ್ತದೆ. ಫಲಿತಾಂಶ ಕಡಿಮೆಯಾಗಲು ರಾಜ್ಯ ಸರ್ಕಾರ ಹಾಗೂ ಶಿಕ್ಷಣ ಸಚಿವರ ನಿರ್ಲಕ್ಷವೇ ಕಾರಣ’ ಎಂದು ವಿಧಾನ ಪರಿಷತ್ ಸದಸ್ಯ ಚಿದಾನಂದ ಎಂ.ಗೌಡ ಆರೋಪಿಸಿದರು.
ಫಲಿತಾಂಶ ಕುಸಿತಕ್ಕೆ ಮಕ್ಕಳು ಮತ್ತು ಶಿಕ್ಷಕರ ಕಾರಣವಲ್ಲ. ಅದರ ಜವಾಬ್ದಾರಿಯನ್ನು ಸರ್ಕಾರವೇ ಹೊರಬೇಕು. ಕಲಿಕೆಯ ವಾತಾವರಣ ರೂಪಿಸುವುದನ್ನು ಸರ್ಕಾರ ಮರೆತಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ರಾಜ್ಯದಲ್ಲಿ ಈ ಬಾರಿ 8.59 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅದರಲ್ಲಿ 6.31 ಲಕ್ಷ ಮಂದಿ ತೇರ್ಗಡೆಯಾಗಿದ್ದಾರೆ. ಫಲಿತಾಂಶ ಹೆಚ್ಚಿಸಲು ಶೇ 20 ರಷ್ಟು ಕೃಪಾಂಕ ನೀಡಿದ್ದಾರೆ. ಪ್ರಶ್ನೆ ಪತ್ರಿಕೆಯಲ್ಲಿ ಲೋಪವಾದರೆ ಕೃಪಾಂಕ ನೀಡಬೇಕು. ಅದನ್ನು ಬಿಟ್ಟು ಫಲಿತಾಂಶ ಹೆಚ್ಚಿಸಲು ನೀಡಿರುವುದು ನಾಚಿಕೆಗೇಡು. ಕೃಪಾಂಕ ನೀಡಿರುವುದರಿಂದ 1.69 ಲಕ್ಷ ಮಂದಿ ಉತ್ತೀರ್ಣರಾಗಿದ್ದಾರೆ. ಇಲ್ಲದಿದ್ದರೆ ಫಲಿತಾಂಶ ಶೇ 53ಕ್ಕೆ ಕುಸಿಯುತ್ತಿತ್ತು ಎಂದರು.
ಕಾಂಗ್ರೆಸ್ ಸರ್ಕಾರ 60 ವರ್ಷಗಳ ತನ್ನ ಆಡಳಿತ ಅವಧಿಯಲ್ಲಿ ಶಿಕ್ಷಣ ಇಲಾಖೆಗೆ ನೀಡಿದ ಕೊಡುಗೆಗೆ ಇದು ಕನ್ನಡಿ. ಶಿಕ್ಷಣದ ಬಗ್ಗೆ ಯಾವುದೇ ಕಾಳಜಿ ಇಲ್ಲದ ಶಿಕ್ಷಣ ಸಚಿವರು ಅವರಿಗೆ ತೋಚಿದಂತೆ ತೆಗೆದುಕೊಂಡ ತೀರ್ಮಾನಗಳಿಂದ ಮಕ್ಕಳು ಸಂಕಷ್ಟ ಪಡುವಂತಾಗಿದೆ. ಸರ್ಕಾರ ಎಸ್ಎಸ್ಎಲ್‌ಸಿ ವಿದ್ಯಾರ್ಥಿಗಳಿಗೆ ಮೂರು ಪರೀಕ್ಷೆಗಳನ್ನು ಮಾಡಲು ಹೊರಟಿದೆ. ಇದರಿಂದ ಯಾವುದೇ ಪ್ರಯೋಜನವಿಲ್ಲ. ಹತ್ತು ವರ್ಷ ಕಲಿತು ಪರೀಕ್ಷೆ ಬರೆಯಲು ಸಾಧ್ಯವಾಗದರು ಕೇವಲ 15 ದಿನದಲ್ಲಿ ಕಲಿತು ಏನು ಬರೆಯಲು ಸಾಧ್ಯ. ಪರೀಕ್ಷೆ ಮಾಡುವುದು ಮುಖ್ಯವಲ್ಲ, ಪರೀಕ್ಷೆ ಎದುರಿಸುವ ಅತ್ಮಸ್ಥೈರ್ಯ ಮೂಡಿಸಬೇಕು ಎಂದರು.
ಉಚಿತ ಶಿಕ್ಷಣ: ಎಸ್ಎಸ್ಎಲ್‌ಸಿಯಲ್ಲಿ 610ಕ್ಕಿಂತ ಹೆಚ್ಚು ಅಂಕ ಪಡೆದವರು, ಸಿಬಿಎಸ್‌ಸಿ ಮತ್ತು ಐಸಿಎಸ್‌ಸಿಯಲ್ಲಿ ಶೇ 95ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸಿಎಂಜಿ ಪ್ರತಿಷ್ಠಾನದಿಂದ ಪಿಯುಸಿಯಲ್ಲಿ ಎರಡು ವರ್ಷ ಉಚಿತ ಶಿಕ್ಷಣ ನೀಡಲಾಗುತ್ತರಿದೆ. ಅರ್ಹರು ಇದರ ಸದುಪಯೋಗ ಪಡೆಯಬೇಕು. ಮೊದಲು ಬಂದ 100 ವಿದ್ಯಾರ್ಥಿಗಳಿಗೆ ಅದ್ಯತೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.