ADVERTISEMENT

ತುಮಕೂರು: ನಿಲ್ಲುತ್ತಿಲ್ಲ ನರಹಂತಕ ಚಿರತೆಗಳ ದಾಳಿ

ತಿಂಗಳಾನುಗಟ್ಟಲೆ ಕಾರ್ಯಾಚರಣೆ ನಡೆಸಿದರೂ ಪ್ರಯೋಜನವಿಲ್ಲ

ಡಿ.ಎಂ.ಕುರ್ಕೆ ಪ್ರಶಾಂತ
Published 6 ನವೆಂಬರ್ 2020, 4:14 IST
Last Updated 6 ನವೆಂಬರ್ 2020, 4:14 IST
   

ತುಮಕೂರು: ಐದಾರು ಕಿ.ಮೀ ವ್ಯಾಪ್ತಿಯಲ್ಲಿ 25ಕ್ಕೂ ಹೆಚ್ಚು ಬೋನ್‌ಗಳು, 36 ಕಡೆಗಳಲ್ಲಿ ಕ್ಯಾಮೆರಾ ಟ್ರ್ಯಾಪ್ ಅಳವಡಿಕೆ, ತಿಂಗಳಾನುಗಟ್ಟಲೇ ಕಾರ್ಯಾಚರಣೆ... ಹೀಗೆ ತುಮಕೂರು, ಗುಬ್ಬಿ ಮತ್ತು ಕುಣಿಗಲ್ ತಾಲ್ಲೂಕು ಸಂದಿಸುವ ಗಡಿಭಾಗದಲ್ಲಿ ನರಹಂತಕ ಚಿರತೆಗಳ ಸೆರೆಗೆ ಕಾರ್ಯಾಚರಣೆ ನಡೆಸಿದರೂ ದಾಳಿಗಳು ಮಾತ್ರ ಇನ್ನೂ ನಿಂತಿಲ್ಲ.

ಚಿರತೆಗಳ ಹುಟ್ಟಡಗಿಸಲುದೊಡ್ಡ ಪ್ರಮಾಣದಲ್ಲಿ ಕಾರ್ಯಾಚರಣೆಗಳು ನಡೆದರೂ ಚಿರತೆ ಹಾವಳಿ ಮಾತ್ರ ವ್ಯಾಪಕವಾಗುತ್ತಿದೆ. 93 ಹಳ್ಳಿಗಳಲ್ಲಿ ಚಿರತೆ-ಮಾನವ ಸಂಘರ್ಷ ಇದೆ ಎಂದು ವನ್ಯಜೀವಿ ತಜ್ಞ ಸಂಜಯ್ ಗುಬ್ಬಿ ದಾಖಲಿಸಿದ್ದಾರೆ.

ಈ ಮೂರು ತಾಲ್ಲೂಕುಗಳು ಸಂದಿಸುವ ಹೆಬ್ಬೂರು ಸರಹದ್ದಿನಲ್ಲಿ ಪ್ರಸಕ್ತ ವರ್ಷ ಐದು ಮಂದಿ ಚಿರತೆ ದಾಳಿಗೆ ಬಲಿ ಆ‌ಗಿದ್ದಾರೆ. ಇಲ್ಲಿ ಅರಣ್ಯ ಇಲಾಖೆ ‘ಅಪರೇಷನ್ ಸಮರ್ಥ್’ ಹೆಸರಿನಲ್ಲಿ ಆನೆಗಳ ಮೂಲಕ ಕಾರ್ಯಾಚರಣೆ ಸಹ ನಡೆಸಿತ್ತು. ಹುಲಿಗಳ ಜಾಡು ಹಿಡಿಯುವಲ್ಲಿ ಪರಿಣತರಾಗಿರುವ ಚಾಮರಾಜನಗರ ತಾಲ್ಲೂಕಿನ ಸೋಲಿಗರ ತಂಡ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಸಹ ಸೆರೆ ಕಾರ್ಯಾಚರಣೆ ನಡೆಸಿದ್ದರು. ಅರಣ್ಯ ಸಚಿವ ಆನಂದ್ ಸಿಂಗ್‌ ನರಭಕ್ಷಕ ಚಿರತೆ ಗುರುತಿಸಿ ಕಂಡಲ್ಲಿ ಗುಂಡಿಕ್ಕಿ ಎಂದಿದ್ದರು. ಇಷ್ಟೆಲ್ಲಾ ಕಾರ್ಯಾಚರಣೆ ನಡೆದರೂ ಚಿರತೆಗಳ ದಾಳಿ ನಿಂತಿಲ್ಲ.

ADVERTISEMENT

ಕುರಿ, ಮೇಕೆ, ಜಾನುವಾರು, ಮನುಷ್ಯರ ಮೇಲೆ ಪದೇ ಪದೇ ದಾಳಿಗಳು ನಡೆಯುತ್ತಲೇ ಇವೆ. ಕೆಲ ತಿಂಗಳ ಹಿಂದೆ ಗುಬ್ಬಿ ತಾಲ್ಲೂಕು ಜುಂಜಪ್ಪನಪಾಳ್ಯ ಮತ್ತು ಕುಣಿಗಲ್ ತಾಲ್ಲೂಕಿನ ತರೆದಕುಪ್ಪೆ ಗ್ರಾಮದಲ್ಲಿ ಜನರ ಮೇಲೆ ಚಿರತೆ ದಾಳಿ ನಡೆಸಿದ್ದವು.

ಹೆಬ್ಬೂರು ಸುತ್ತಮುತ್ತಲಿನ ಜನರಿಗೆ ಚಿರತೆ ಸಪ್ಪಳ ಸಂಜೆಯಾಗುತ್ತಿದ್ದಂತೆ ಮನೆ ಸೇರಬೇಕು ಎನ್ನುವ ಧಾವಂತ ಮೂಡಿಸಿದೆ. ರಾತ್ರಿ ತಡವಾಗಿ ಮನೆ ಸೇರುತ್ತಿದ್ದ ಗಂಡಂದಿರಿಗೆ ‘ಸಂಜೆಯೊಳಗೆ ಮನೆ ಸೇರಬೇಕು’ ಎನ್ನುವ ಲಕ್ಷ್ಮಣರೇಖೆಯನ್ನು ಪತ್ನಿಯರು ಹಾಕುತ್ತಿದ್ದಾರೆ.

ಹೆಬ್ಬೂರು ಹೋಬಳಿ ವ್ಯಾಪ್ತಿಯಲ್ಲಿಯೇ 2019ರ ನವೆಂಬರ್‌ನಿಂದ ಇಲ್ಲಿಯವರೆಗೆ 15 ಚಿರತೆಗಳು ಸೆರೆಯಾಗಿವೆ. ಜಿಲ್ಲೆಯಲ್ಲಿ ಪ್ರಸಕ್ತ ವರ್ಷ 35 ಚಿರತೆಗಳು ಸೆರೆಯಾಗಿವೆ.

ಚಿರತೆ ದಾಳಿ: ಮಹಿಳೆ ಸಾವು

ಗುಬ್ಬಿ: ತಾಲ್ಲೂಕಿನ ಗಡಿಭಾಗ ಮಣೆಕುಪ್ಪೆ ಗ್ರಾಮದಲ್ಲಿ ಚಿರತೆ ದಾಳಿಗೆಭಾಗ್ಯಮ್ಮ(35) ಮೃತಪಟ್ಟಿದ್ದಾರೆ.

ಭಾಗ್ಯಮ್ಮ ದನ ಮೇಯಿಸಲು ಹೊಲಕ್ಕೆ ತೆರಳಿದ್ದರು. ಪೊದೆಯಿಂದ ಜಿಗಿದ ಚಿರತೆ ಭಾಗ್ಯಮ್ಮನ ಮೇಲೆರಗಿ ಕತ್ತು ಹಿಡಿದು ಎಳೆದೊಯ್ದಿದೆ. ಸ್ವಲ್ಪ ದೂರು ಎಳೆದೊಯ್ದು ಕತ್ತು ಸೀಳಿ ಕೊಂದಿದೆ. ಕೆಲ ತಿಂಗಳ ಹಿಂದೆ ತಾಲ್ಲೂಕಿನಲ್ಲಿ ಸಮರ್ಥಗೌಡ ಎಂಬ ಬಾಲಕ ಮೇಲೆ ಚಿರತೆ ದಾಳಿ ನಡೆಸಿ ಕೊಂದಿತ್ತು. ತಾಲ್ಲೂಕಿನಲ್ಲಿ ಚಿರತೆ ದಾಳಿಗೆ ಕಡಿವಾಣ ಹಾಕಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.