ADVERTISEMENT

ತಿರಂಗಾ ಯಾತ್ರೆ: ವೀರ ಯೋಧರಿಗೆ ನಮನ

‘ಆಪರೇಷನ್‌ ಸಿಂಧೂರ’ ಕಾರ್ಯಾಚರಣೆಗೆ ಬೆಂಬಲ

​ಪ್ರಜಾವಾಣಿ ವಾರ್ತೆ
Published 18 ಮೇ 2025, 15:28 IST
Last Updated 18 ಮೇ 2025, 15:28 IST
ತುಮಕೂರಿನಲ್ಲಿ ಭಾನುವಾರ ‘ಆಪರೇಷನ್‌ ಸಿಂಧೂರ’ ಕಾರ್ಯಾಚರಣೆ ಯಶಸ್ವಿಯಾಗಿದ್ದಕ್ಕೆ ಏರ್ಪಡಿಸಿದ್ದ ತಿರಂಗಾ ಯಾತ್ರೆಯಲ್ಲಿ ಹೆಜ್ಜೆ ಹಾಕಿದ ಜನ
ತುಮಕೂರಿನಲ್ಲಿ ಭಾನುವಾರ ‘ಆಪರೇಷನ್‌ ಸಿಂಧೂರ’ ಕಾರ್ಯಾಚರಣೆ ಯಶಸ್ವಿಯಾಗಿದ್ದಕ್ಕೆ ಏರ್ಪಡಿಸಿದ್ದ ತಿರಂಗಾ ಯಾತ್ರೆಯಲ್ಲಿ ಹೆಜ್ಜೆ ಹಾಕಿದ ಜನ   

ತುಮಕೂರು: ‘ಆಪರೇಷನ್‌ ಸಿಂಧೂರ’ ಕಾರ್ಯಾಚರಣೆ ಯಶಸ್ವಿಯಾಗಿದ್ದಕ್ಕೆ ‘ರಾಷ್ಟ್ರ ರಕ್ಷಣೆಗಾಗಿ ನಾಗರಿಕರು’ ಸಮಿತಿಯ ನೇತೃತ್ವದಲ್ಲಿ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ತಿರಂಗಾ ಯಾತ್ರೆಯಲ್ಲಿ ಸಾವಿರಾರು ಜನ ಹೆಜ್ಜೆ ಹಾಕಿದರು.

ಭಾರತದ ಧ್ವಜಗಳು ರಾರಾಜಿಸಿದವು. ನೂರಾರು ವಿದ್ಯಾರ್ಥಿಗಳು 150 ಮೀಟರ್‌ ಉದ್ದದ ತ್ರಿವರ್ಣ ಧ್ವಜ ಪ್ರದರ್ಶಿಸಿ ದೇಶ ಪ್ರೇಮ ಮೆರೆದರು. ಎಸ್‌ಐಟಿ ಕಾಲೇಜು ಮುಂಭಾಗದಲ್ಲಿ ಯಾತ್ರೆಗೆ ಚಾಲನೆ ನೀಡಲಾಯಿತು.

ಸ್ವಾಮೀಜಿಗಳು, ಸಂಘ–ಸಂಸ್ಥೆಗಳ ಪದಾಧಿಕಾರಿಗಳು, ಮಾಜಿ ಸೈನಿಕರು, ವಿವಿಧ ಶಾಲಾ–ಕಾಲೇಜಿನ ವಿದ್ಯಾರ್ಥಿಗಳು, ಮುಖಂಡರು ಯಾತ್ರೆಯಲ್ಲಿ ಭಾಗವಹಿಸಿದ್ದರು. ಗಂಗೋತ್ರಿ ರಸ್ತೆ, ಎಸ್‌ಐಟಿ ಮುಖ್ಯರಸ್ತೆ, ಎಸ್.ಎಸ್.ಪುರಂ ಮುಖ್ಯ ರಸ್ತೆ ಮೂಲಕ ಸಾಗಿ ಜೂನಿಯರ್ ಕಾಲೇಜು ಮೈದಾನದಲ್ಲಿ ಕೊನೆಯಾಯಿತು.

ADVERTISEMENT

ಕೇಂದ್ರ ಜಲ ಶಕ್ತಿ, ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಯಾತ್ರೆಗೆ ಚಾಲನೆ ನೀಡಿ ಮಾತನಾಡಿ, ‘ಇದು ದೇಶದ ಅಖಂಡತೆ ಮತ್ತು ಸಾರ್ವಭೌಮತೆಗೆ ಹಿಡಿದ ಕೈಗನ್ನಡಿ. ಪಹಲ್ಗಾಮ್‍ನಲ್ಲಿ 26 ಜನರನ್ನು ಹತ್ಯೆ ಮಾಡಿದ ಉಗ್ರರಿಗೆ ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ದೇಶದ ಯೋಧರು ತಕ್ಕ ಪಾಠ ಕಲಿಸಿದ್ದಾರೆ. ಯಥಾ ರಾಜ ತಥಾ ಪ್ರಜಾ ಎಂಬಂತೆ ರಾಜ ಸರಿಯಾಗಿದ್ದರೆ ಎಲ್ಲವೂ ಸರಿ ಹೋಗುತ್ತದೆ’ ಎಂದು ಹೇಳಿದರು.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ‘ಪಾಕಿಸ್ತಾನ ಭಯೋತ್ಪಾದನೆಗೆ ಕುಮ್ಮಕ್ಕು ನೀಡುವ ದುಷ್ಕೃತ್ಯ ನಿಲ್ಲಿಸಬೇಕು. ಸಿಂಧೂ ನದಿಯ ನೀರು ಕೊಡಬೇಕಾದರೆ ಕಾಶ್ಮೀರದಲ್ಲಿ ನಡೆಸುತ್ತಿರುವ ಉಗ್ರಗಾಮಿ ಸಂಘಟನೆಗಳನ್ನು ತಕ್ಷಣ ನಿಲ್ಲಿಸಬೇಕು. ಮುಂದೆ ಒಂದು ಸಣ್ಣ ಘಟನೆ ನಡೆದರೂ ಭಾರತ ಯುದ್ಧ ಮಾಡಲು ಹಿಂದೆ ಮುಂದೆ ನೋಡುವುದಿಲ್ಲ’ ಎಂದು ಎಚ್ಚರಿಸಿದರು.

ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ವೀರೇಶಾನಂದ ಸರಸ್ವತಿ, ‘ಭಯೋತ್ಪಾದನೆ ವಿರುದ್ಧ ಯಾವ ರೀತಿ ನಡೆದುಕೊಳ್ಳಬೇಕು ಎಂಬುದನ್ನು ಭಾರತ ತೋರಿಸಿದೆ. ನಮ್ಮ ಸೈನ್ಯದ ಶಕ್ತಿ ಕಂಡು ಇಡೀ ವಿಶ್ವವೇ ನಿಬ್ಬೆರಗಾಗಿದೆ’ ಎಂದು ತಿಳಿಸಿದರು.

ರಾಜ್ಯಸಭಾ ಸದಸ್ಯ ಜಗ್ಗೇಶ್‌, ‘ಜಾತಿ, ಮತ, ಪಂಥ ಪಕ್ಕಕ್ಕಿಟ್ಟು ಭಾರತ ನಮ್ಮ ರಾಷ್ಟ್ರ, ತಾಯಿ ಎಂಬ ನಿರ್ಣಯ ತೆಗೆದುಕೊಳ್ಳಬೇಕು. ನಮ್ಮ ಮಧ್ಯೆ ದೇಶದ್ರೋಹಿಗಳಿರುತ್ತಾರೆ. ರಾಮನಿದ್ದ ಜಾಗದಲ್ಲಿ ರಾವಣ ಇರಲೇಬೇಕು. ಅಂತಹವರ ಬಗ್ಗೆ ಎಚ್ಚರಿಕೆ ವಹಿಸಿ ಎದೆಕೊಟ್ಟು ನಿಂತು ಬುದ್ಧಿ ಕಲಿಸಬೇಕು’ ಎಂದರು.

ಹಿರೇಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಸಿದ್ಧರಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಶಿವಗಂಗೆಯ ಮಹಾಲಕ್ಷ್ಮಿ ತಿಗಳರ ಮಹಾಸಂಸ್ಥಾನ ಪೀಠದ ಜ್ಞಾನಾನಂದಪುರಿ ಸ್ವಾಮೀಜಿ, ಶಾಸಕರಾದ ಬಿ.ಸುರೇಶ್‌ಗೌಡ, ಜಿ.ಬಿ.ಜ್ಯೋತಿಗಣೇಶ್‌, ಮಾಜಿ ಸಚಿವರಾದ ಸೊಗಡು ಶಿವಣ್ಣ, ಬಿ.ಸಿ.ನಾಗೇಶ್, ಮಾಜಿ ಶಾಸಕ ಮಸಾಲ ಜಯರಾಮ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಚ್‌.ಎಸ್‌.ರವಿಶಂಕರ್‌, ಮುಖಂಡರಾದ ಡಾ.ಎಸ್‌.ಪರಮೇಶ್‌, ಪ್ರದೀಪ್‍ಕುಮಾರ್, ಎಂ.ಅಂಬಿಕಾ, ದಿಲೀಪ್‍ಕುಮಾರ್, ರಾಮಲಿಂಗರೆಡ್ಡಿ, ಮಾಜಿ ಯೋಧ ನಾಗರಾಜು, ಜಿ.ಆರ್.ಸುರೇಶ್‌, ಚಂದ್ರಮೌಳಿ, ಪಿ.ರಾಮಯ್ಯ, ಸುರೇಶ್‍ಬಾಬು, ಶಂಕರ್, ಶಿವನಂಜಪ್ಪ, ರಾಮಕೃಷ್ಣಪ್ಪ ಮೊದಲಾದವರು ಭಾಗವಹಿಸಿದ್ದರು.

ತುಮಕೂರಿನಲ್ಲಿ ಭಾನುವಾರ ನಡೆದ ತಿರಂಗಾ ಯಾತ್ರೆಯಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿದರು. ಜ್ಞಾನಾನಂದಪುರಿ ಸ್ವಾಮೀಜಿ ಶಾಸಕರಾದ ಬಿ.ಸುರೇಶ್‌ಗೌಡ ಜಿ.ಬಿ.ಜ್ಯೋತಿಗಣೇಶ್‌ ಮಾಜಿ ಸಚಿವ ಬಿ.ಸಿ.ನಾಗೇಶ್ ಮಾಜಿ ಶಾಸಕ ಮಸಾಲ ಜಯರಾಮ್ ಇತರರು ಹಾಜರಿದ್ದರು
ತಿರಂಗಾ ಯಾತ್ರೆಯಲ್ಲಿ 150 ಮೀಟರ್‌ ಉದ್ದದ ತ್ರಿವರ್ಣ ಧ್ವಜ ಪ್ರದರ್ಶಿಸಲಾಯಿತು

ಕೊತ್ತೂರು ಮಂಜುನಾಥ್‌ ವಿರುದ್ಧ ಕಿಡಿ

‘ಪಾಕಿಸ್ತಾನ ಜಿಂದಾಬಾದ್‌’ ಎನ್ನುವರು ನಮ್ಮ ರಾಜ್ಯ ಹಾಗೂ ದೇಶದಲ್ಲಿ ದೊಡ್ಡ ಸಂಖ್ಯೆಯಲ್ಲಿದ್ದಾರೆ. ವಿಧಾನಸೌಧದಲ್ಲಿ ಪಾಕಿಸ್ತಾನದ ಪರ ಘೋಷಣೆ ಕೂಗಿದವರೂ ಇದ್ದಾರೆ. ಅಂತಹವರನ್ನು ಹುಡುಕುವ ಕೆಲಸ ಪ್ರಧಾನಿ ಮೋದಿ ಮಾಡುತ್ತಾರೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು. ನಗರದಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿದರು. ಶಾಸಕ ಕೊತ್ತೂರು ಮಂಜುನಾಥ್‌ ಹೇಳಿಕೆಗೆ ಪ್ರತಿಕ್ರಿಯಿಸಿ ‘ಮಂಜುನಾಥ್‌ ಅಥವಾ ಯಾರೇ ಇರಬಹುದು ದೇಶದ ಪರ ನಿಲ್ಲಬೇಕು. ದೇಶದ್ರೋಹ ಕೆಲಸ ಮಾಡಬಾರದು. ದೇಶದ ವಿರುದ್ಧ ಪಾಕಿಸ್ತಾನ ಪರವಾಗಿ ಹೇಳಿಕೆ ನೀಡಬಾರದು. ಅಯೋಗ್ಯರು ಮಾತ್ರ ಇಂತಹ ಹೇಳಿಕೆ ಕೊಡುತ್ತಾರೆ. ದೇಶ ದ್ರೋಹಿಗಳಿಗೆ ಬೆಂಬಲ‌ ನೀಡುವುದು ಮಹಾ ಅಪರಾಧ’ ಎಂದು ಕಿಡಿಕಾರಿದರು. ಕೇಂದ್ರ ಸಚಿವ ವಿ.ಸೋಮಣ್ಣ ‘ಕೊತ್ತೂರು ಮಂಜುನಾಥ್‌ಗೆ ದೇಶದ ಬಗ್ಗೆ ಅರಿವಿದ್ದಿದ್ದರೆ ಈ ರೀತಿ ಮಾತನಾಡುತ್ತಿರಲಿಲ್ಲ. ಇಂತಹ ನೀಚರು ದೇಶದಲ್ಲಿ ಜಾಸ್ತಿ ದಿನ ಇರಬಾರದು. ಮುಂದಿನ ದಿನಗಳಲ್ಲಿ ಜನರೇ ತಕ್ಕ ಪಾಠ ಕಲಿಸುತ್ತಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.