ADVERTISEMENT

ಶಿಕ್ಷಕರ ಕೊರತೆ: ಪೋಷಕರ ಆಕ್ರೋಶ

ಕರ್ನಾಟಕ ಪಬ್ಲಿಕ್‍ ಶಾಲೆಯ ಮಕ್ಕಳ ಕಲಿಕೆಗೆ ಹಿನ್ನಡೆ ಆರೋಪ

​ಪ್ರಜಾವಾಣಿ ವಾರ್ತೆ
Published 31 ಜನವರಿ 2023, 5:08 IST
Last Updated 31 ಜನವರಿ 2023, 5:08 IST
ತುರುವೇಕೆರೆ ತಾಲ್ಲೂಕಿನ ದಂಡಿನಶಿವರ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಶಿಕ್ಷಕರ ಕೊರತೆ ಹಿನ್ನೆಲೆಯಲ್ಲಿ ಮುಖ್ಯಶಿಕ್ಷಕರೊಂದಿಗೆ ಸೋಮವಾರ ಪೋಷಕರು ವಾಗ್ವಾದ ನಡೆಸಿದರು
ತುರುವೇಕೆರೆ ತಾಲ್ಲೂಕಿನ ದಂಡಿನಶಿವರ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಶಿಕ್ಷಕರ ಕೊರತೆ ಹಿನ್ನೆಲೆಯಲ್ಲಿ ಮುಖ್ಯಶಿಕ್ಷಕರೊಂದಿಗೆ ಸೋಮವಾರ ಪೋಷಕರು ವಾಗ್ವಾದ ನಡೆಸಿದರು   

ತುರುವೇಕೆರೆ: ತಾಲ್ಲೂಕಿನ ದಂಡಿನಶಿವರ ಗ್ರಾಮದ ಕರ್ನಾಟಕ ಪಬ್ಲಿಕ್‍ ಶಾಲೆಯಲ್ಲಿ ಮಕ್ಕಳಿಗೆ ಪಾಠ ಮಾಡಲು ಶಿಕ್ಷಕರಿಲ್ಲ. ಮಕ್ಕಳು ಕುಳಿತುಕೊಳ್ಳಲು ಸ್ಥಳವಿಲ್ಲವೆಂದು ಆರೋಪಿಸಿ ಪೋಷಕರು ಸೋಮವಾರ ಮುಖ್ಯಶಿಕ್ಷಕರೊಂದಿಗೆ ವಾಗ್ವಾದ ನಡೆಸಿದರು.

ತಾಲ್ಲೂಕಿನಲ್ಲೇ ಏಕೈಕ ಕರ್ನಾಟಕ ಪಬ್ಲಿಕ್‍ ಶಾಲೆ ದಂಡಿನಶಿವರ ಹೋಬಳಿ ಕೇಂದ್ರದಲ್ಲಿದೆ. ಈ ಶಾಲೆ ಪ್ರಾರಂಭವಾಗಿ ಮೂರು ವರ್ಷ ಕಳೆದರೂ ಸರ್ಕಾರ ಇನ್ನೂ ಸರಿಯಾಗಿ ಮೂಲ ಸೌಕರ್ಯ ಒದಗಿಸಿಲ್ಲ ಎಂದು ದೂರಿದರು.

ಯುಕೆಜಿ ಮತ್ತು ಎಲ್‌ಕೆಜಿ ಮಕ್ಕಳಿಗೆ ಪಾಠ ಮಾಡಲು ಶಿಕ್ಷಕರೇ ಇಲ್ಲ. ರಂಗಮಂದಿರದಲ್ಲಿ ಎಲ್ಲಾ ಮಕ್ಕಳನ್ನು ಒಂದೆಡೆ ಕುರಿ, ಮೇಕೆ, ಕೋಳಿಯಂತೆ ಕೂಡಿ ಹಾಕುವ ರೀತಿಯಲ್ಲಿ ಕೂರಿಸಿದ್ದಾರೆ. ಇದು ಅವೈಜ್ಞಾನಿಕವಾಗಿದ್ದು ಮಕ್ಕಳು ಕಲಿಕೆಯಲ್ಲಿ ಹಿಂದುಳಿಯಲು ಕಾರಣವಾಗುತ್ತಿದೆ ಎಂದು ಪೋಷಕರು ಆರೋಪಿಸಿದರು.

ADVERTISEMENT

ಕಳೆದ ಒಂಬತ್ತು ತಿಂಗಳುಗಳಿಂದ ಸರ್ಕಾರ ಅತಿಥಿ ಶಿಕ್ಷಕರಿಗೆ ಸಕಾಲಕ್ಕೆ ಸಂಬಳ ಕೊಡದೆ ಸತಾಯಿಸಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಕರು ಶಾಲೆಗೆ ಬರುತ್ತಿಲ್ಲ ಎಂದು ದೂರಿದರು.

ಶಾಲೆ ಸಮಸ್ಯೆ ಬಗ್ಗೆ ಪ್ರಶ‍್ನೆ ಮಾಡಿದರೆ ಮುಖ್ಯ ಶಿಕ್ಷಕರು ಪ್ರಾಂಶುಪಾಲರ ಮೇಲೆ, ಪ್ರಾಂಶುಪಾಲರು ಮುಖ್ಯ ಶಿಕ್ಷಕರ ಮೇಲೆ ತಮ್ಮ ಜವಾಬ್ದಾರಿ ಹೇರಿ ನುಣುಚಿಕೊಳ್ಳುತ್ತಿದ್ದಾರೆ. ಹೀಗೆಯೇ ಮುಂದುವರಿದರೆ ಶಾಲೆ ಮುಂಭಾಗ ಧರಣಿ ನಡೆಸಲಾಗುವುದು ಎಂದು ಪೋಷಕರಾದ ಸುರೇಶ್‍, ಮೋಹನ್‍ ಕುಮಾರ್‌, ಮಹೇಶ್‍ ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.