ADVERTISEMENT

ತುಮಕೂರು: ಎಲ್ಲೂ ಸಿಗುತ್ತಿಲ್ಲ ಕೋವಿಡ್‌ ಲಸಿಕೆ

ಕೆ.ಜೆ.ಮರಿಯಪ್ಪ
Published 5 ಮೇ 2021, 4:45 IST
Last Updated 5 ಮೇ 2021, 4:45 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ತುಮಕೂರು: ಕೋವಿಡ್–19ಗೆ ನೀಡುತ್ತಿದ್ದ ಲಸಿಕೆ ಜಿಲ್ಲೆಯಲ್ಲಿ ಬಹುತೇಕ ಖಾಲಿಯಾಗಿದೆ. ಜಿಲ್ಲೆಯ ಕೆಲವು ತಾಲ್ಲೂಕುಗಳಲ್ಲಿ ಕಳೆದ ಮೂರು–ನಾಲ್ಕು ದಿನಗಳಿಂದ ಲಸಿಕೆ ಕೊಡುವುದನ್ನು ನಿಲ್ಲಿಸಲಾಗಿದೆ.

ಕೊರೊನಾ ಸೋಂಕು ಬರದಂತೆ ತಡೆಗಟ್ಟುವುದು, ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಸಲುವಾಗಿ ಮುಂಜಾಗ್ರತೆಯಾಗಿ ಕೋವ್ಯಾಕ್ಸಿನ್, ಕೋವಿಸೀಲ್ಡ್ ಲಸಿಕೆ ನೀಡಲಾಗುತ್ತಿದೆ. ಕೋವಿಡ್ ಎರಡನೇ ಅಲೆ ಜೋರಾಗಿದ್ದು, ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಪ್ರತಿ ದಿನವೂ ಸರಾಸರಿ 2 ಸಾವಿರಕ್ಕೂ ಹೆಚ್ಚು ಜನರಿಗೆ ಸೋಂಕು ಕಾಣಿಸಿಕೊಳ್ಳುತ್ತಿದೆ. ಸಾವಿನ ಪ್ರಮಾಣವೂ ಏರಿಕೆಯತ್ತಲೇ ಸಾಗಿದೆ.

ಸೋಂಕು ಹಾಗೂ ಸಾವಿನ ಸಂಖ್ಯೆ ಹೆಚ್ಚುತ್ತಿರುವುದನ್ನು ಗಮನಿಸಿದ ಜನರಿಗೆ ಆತಂಕ ಎದುರಾಗಿದೆ. ಆರಂಭದಲ್ಲಿ ಲಸಿಕೆ ಪಡೆಯಲು ಜನರು ಹಿಂಜರಿದಿದ್ದರು. ಯಾವುದೇ ಅಡ್ಡ ಪರಿಣಾಮಗಳಿಲ್ಲ. ಧೈರ್ಯವಾಗಿ ಮುಂದೆ ಬಂದು ಲಸಿಕೆ ಹಾಕಿಸಿಕೊಳ್ಳಿ ಎಂದು ಮನವಿ ಮಾಡಬೇಕಾಗಿತ್ತು. ಈಗ ಸೋಂಕು ಹೆಚ್ಚಾಗುತ್ತಿರುವುದನ್ನು ಗಮನಿಸಿದವರು ಲಸಿಕೆಗಾಗಿ ಆಸ್ಪತ್ರೆಗಳ ಮುಂದೆ ಸರದಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಬೆಳಿಗ್ಗೆಯಿಂದ ಸಂಜೆವರೆಗೂ ಬಿಸಿಲಿನಲ್ಲಿ ನಿಂತು ಲಸಿಕೆ ಸಿಗದೆ ವಾಪಸಾಗುತ್ತಿದ್ದಾರೆ. ತಾಲ್ಲೂಕು ಆಸ್ಪತ್ರೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಬರುವ ಜನರಿಗೆ ಯಾವಾಗ ಲಸಿಕೆ ಬರುತ್ತದೆ, ಯಾವಾಗ ಲಸಿಕೆ ಹಾಕಲಾಗುತ್ತದೆ ಎಂಬ ಮಾಹಿತಿಯೂ ಸಿಗದಾಗಿದೆ. ಲಸಿಕೆ ಬಂದಾಗ ಹಾಕುತ್ತೇವೆ. ಕಾಯಬೇಕು ಎಂಬ ಉತ್ತರ ಆಸ್ಪತ್ರೆಗಳ ಸಿಬ್ಬಂದಿಗಳಿಂದ ಸಿಗುತ್ತಿದೆ.

ADVERTISEMENT

ದಿನಬಿಟ್ಟು ದಿನ 15ರಿಂದ 20 ಸಾವಿರ ಡೋಸೇಜ್ ಜಿಲ್ಲೆಗೆ ಸರಬರಾಜು ಆಗುತ್ತಿತ್ತು. ಆದರೆ ಕಳೆದ ಕೆಲ ದಿನಗಳಿಂದ ಸರಬರಾಜು ಸ್ಥಗಿತಗೊಂಡಿದೆ. ಎಲ್ಲೆಡೆ ಬೇಡಿಕೆ ಸೃಷ್ಟಿಯಾಗಿದ್ದು, ಸರಬರಾಜಿನಲ್ಲಿ ವ್ಯತ್ಯಯವಾಗಿದೆ. ಬಂದ ತಕ್ಷಣ ವಿತರಣೆಗೆ ವ್ಯವಸ್ಥೆ ಮಾಡಲಾಗುತ್ತದೆ. ಆದರೂ ಸಾಲದಾಗಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

ಜಿಲ್ಲಾ ಆಸ್ಪತ್ರೆಯಲ್ಲೂ ಇದ್ದ ಲಸಿಕೆಯನ್ನು ಮಂಗಳವಾರ ಕೆಲ ಸಮಯ ನೀಡಲಾಯಿತು. ನಗರದಲ್ಲೇ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿ ಲಸಿಕೆ ಖಾಲಿಯಾಗಿದೆ.

ಎಲ್ಲೆಡೆಯೂ ಹಾಹಾಕಾರ: ತುಮಕೂರು ಬಿಟ್ಟರೆ ಶಿರಾ, ತಿಪಟೂರು, ಕುಣಿಗಲ್ ತಾಲ್ಲೂಕಿನಲ್ಲಿ ಹೆಚ್ಚು ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಈ ಭಾಗದ ಪ್ರತಿ ತಾಲ್ಲೂಕಿನಲ್ಲಿ ಐದು ಸಾವಿರದ ಹತ್ತಿರ ಸೋಂಕಿತರು ಇದ್ದು, 3,500ಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳಿವೆ. ಶಿರಾದಲ್ಲಿ ಕಳೆದ ನಾಲ್ಕು ದಿನದಿಂದ ಲಸಿಕೆ ಸಿಗುತ್ತಿಲ್ಲ. ತಿಪಟೂರಿನಲ್ಲಿ ಮೂರು ದಿನಗಳಿಂದ ಸ್ಥಗಿತಗೊಂಡಿದೆ. ಗುಬ್ಬಿಯಲ್ಲಿ ಯಾವಾಗ ಸಿಗುತ್ತದೆ ಎಂದು ಹೇಳುವುದೇ ಕಷ್ಟಕರವಾಗಿದೆ.

ಮಧುಗಿರಿ, ತುರುವೇಕೆರೆ ತಾಲ್ಲೂಕಿನಲ್ಲಿ ಎರಡು–ಮೂರು ದಿನಗಳ ಹಿಂದೆ ಖಾಲಿಯಾಗಿದೆ. ಪಾವಗಡ ತಾಲ್ಲೂಕಿನಲ್ಲಿ ಲಸಿಕೆ ಲಭ್ಯವಿಲ್ಲದೆ ಎರಡನೇ ಡೋಸ್ ಮಾತ್ರ ಹಾಕಲಾಗುತ್ತಿದೆ. ಮೊದಲ ಡೋಸ್ ಸಿಗದೆ ಆಸ್ಪತ್ರೆಯಿಂದ ಜನರು ಹಿಂದಿರುಗುತ್ತಿದ್ದಾರೆ. ಚಿಕ್ಕನಾಯಕನಹಳ್ಳಿ, ಕೊರಟಗೆರೆ ಭಾಗದಲ್ಲೂ ಇದೇ ಸ್ಥಿತಿ ಮುಂದುವರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.