ADVERTISEMENT

ಇಳಿಯುತ್ತಿದೆ ಸೋಂಕಿನ ಪ್ರಮಾಣ

​ಪ್ರಜಾವಾಣಿ ವಾರ್ತೆ
Published 10 ಜೂನ್ 2021, 6:36 IST
Last Updated 10 ಜೂನ್ 2021, 6:36 IST

ತುಮಕೂರು: ಕೋವಿಡ್–19 ಹಾಟ್‌ಸ್ಪಾಟ್‌ಗಳಲ್ಲಿ ಒಂದಾಗಿದ್ದ ತುಮಕೂರು ಜಿಲ್ಲೆಯಲ್ಲಿ ನಿಧಾನವಾಗಿ ಕೊರೊನಾ ಸೋಂಕು ಕಡಿಮೆಯಾಗುತ್ತಿದೆ. ಸೋಂಕು ದೃಢಪಡುವ ಪ್ರಮಾಣ ಪ್ರತಿ ದಿನವೂ ಇಳಿಕೆಯಾಗುತ್ತಿರುವುದು ಜಿಲ್ಲೆಯ ಜನರು ನಿಟ್ಟುಸಿರು ಬಿಡುವಂತೆ ಮಾಡಿದೆ.

ಮೇ ತಿಂಗಳ ಮೊದಲ ವಾರದ ವೇಳೆಗೆ ಸೋಂಕಿತರ ಸಂಖ್ಯೆ ಏರುಗತಿಯಲ್ಲಿ ಸಾಗಿತ್ತು. ಮೇ 1ರಂದು ಐವರು ಸಾವನ್ನಪ್ಪಿದ್ದು, 627 ಪ್ರಕರಣಗಳು ದಾಖಲಾಗಿದ್ದವು. ಒಟ್ಟು ಸೋಂಕಿತರ ಸಂಖ್ಯೆ 45 ಸಾವಿರ ಗಡಿ ದಾಟಿತ್ತು. ಮೇ 10ರಂದು 15 ಮಂದಿ ಸಾವನ್ನಪ್ಪಿದ್ದು, ಹೊಸ ಸೋಂಕಿತರ ಪ್ರಮಾಣ ಪ್ರತಿ ದನವೂ 2 ಸಾವಿರಕ್ಕೂ ಹೆಚ್ಚು ದಾಖಲಾಗುತ್ತಿದ್ದವು. ಈ ವೇಳೆಗೆ ಒಟ್ಟು ಸಂಖ್ಯೆ 65 ಸಾವಿರ ಸಮೀಪಿಸಿತ್ತು.

ಮೇ ತಿಂಗಳ ಮಧ್ಯದ ವೇಳೆಗೆ ಸೋಂಕಿತರ ಸಂಖ್ಯೆ ಮತ್ತಷ್ಟು ಏರಿಕೆಯಾ
ಗುತ್ತಲೇ ದಾಪುಗಾಲು ಹಾಕಿದ್ದು, ಸಾವಿನ ಸಂಖ್ಯೆಯೂ 20ರ ಗಡಿ ದಾಟಿತ್ತು. ಸೋಂಕು ಹರಡುವ ಪ್ರಮಾಣ, ಸಾವಿನ ಸಂಖ್ಯೆ ಏರುತ್ತಿರುವುದನ್ನು ಕಂಡು ಜಿಲ್ಲೆಯ ಜನರು ಆತಂಕಗೊಂಡಿದ್ದರು. ಏನೆಲ್ಲ ಪ್ರಯತ್ನ ನಡೆಸಿದರೂ ಸೋಂಕು ಹರಡುವ ಪ್ರಮಾಣ ಕಡಿಮೆಯಾಗಲೇ ಇಲ್ಲ. ಜತೆಗೆ ಸಾವಿನ ವೇಗವೂ ಜೋರಾಗಿತ್ತು.

ADVERTISEMENT

ಮೇ 20ರಂದು 1,438 ಹೊಸ ಪ್ರಕರಣಗಳು ದಾಖಲಾಗಿದ್ದು, 21 ಜನರು ಮೃತಪಟ್ಟಿದ್ದರು. ಒಟ್ಟು ಸಂಖ್ಯೆ 84 ಸಾವಿರಕ್ಕೆ ಏರಿಕೆ ಕಂಡಿತ್ತು. ನಂತರವೂ ಇದೇ ವೇಗ ಮುಂದುವರಿದಿದ್ದರೂ, ಮೇ ಕೊನೆಯ ವೇಳೆಗೆ ಸ್ವಲ್ಪ ಮಟ್ಟಿಗೆ ನಿಯಂತ್ರಣಕ್ಕೆ ಬಂತು. ನಿಧಾನವಾಗಿ ಇಳಿಕೆಯತ್ತ ಮುಖ ಮಾಡಿತು. ಸಾಕಷ್ಟು ಕಟ್ಟುನಿಟ್ಟಿನ ಕ್ರಮಗಳ ನಂತರ ಸ್ವಲ್ಪ ಮಟ್ಟಿಗೆ ಕೋವಿಡ್ ಹರಡುವ ವೇಗ ಇಳಿಮುಖ ಮಾಡಿತ್ತು. ಮೇ 30ಕ್ಕೆ 773 ಹೊಸ ಪ್ರಕರಣಗಳು ಕಂಡುಬಂದು, 8 ಜನರು ಸಾವನ್ನಪ್ಪಿದ್ದರು. ಸೋಂಕಿತರ ಒಟ್ಟು ಸಂಖ್ಯೆ 1 ಲಕ್ಷ ದಾಟಿತ್ತು.

ಕಳೆದ ತಿಂಗಳ ಅಂತ್ಯಕ್ಕೆ ಸೋಂಕಿತರ ಸಂಖ್ಯೆ ಒಂದು ಸಾವಿರದ ಒಳಕ್ಕೆ ಬಂದಿತ್ತು. ಸಾವನಪ್ಪುವವರ ಪ್ರಮಾಣ ಸಹ 10ಕ್ಕಿಂತ ಕಡಿಮೆಯಾಗಿತ್ತು. ಇದು ಶುಭ ಸೂಚನೆ ಎಂದೇ ಹೇಳಲಾಗುತ್ತಿದ್ದು, ಮತ್ತಷ್ಟು ಕುಗ್ಗಬೇಕು ಎಂದು ಹೇಳಲಾಗುತ್ತಿದೆ.

ಜೂನ್ ಮೊದಲ ವಾರದಲ್ಲಿ ನಿಯಂತ್ರಣಕ್ಕೆ ಬರುತ್ತಿದ್ದು, ನಿಧಾನವಾಗಿ ದಿನಗಳು ಕಳೆದಂತೆ ಸೋಂಕಿತರ ಪ್ರಮಾಣ ಕಡಿಮೆಯಾಗುತ್ತಿರುವುದು ಜನರಲ್ಲಿ ಬೆಳ್ಳಿಯ ಆಶಾಕಿರಣ ಮೂಡಿಸಿದೆ. ಕಳೆದ ಐದಾರು ದಿನಗಳಿಂದ ಸೋಂಕು ದೃಢಪಡುವ ಸಂಖ್ಯೆ ಗಣನೀಯವಾಗಿ ತಗ್ಗಿದ್ದು, ಈ ಸಂಖ್ಯೆ 500ರ ಗಡಿಗೆ ಬಂದು ನಿಂತಿದೆ. ಇದೇ ವಾತಾವರಣ ಮುಂದುವರಿದರೆ ಇನ್ನೂ ಕೆಲ ದಿನಗಳಲ್ಲಿ ಈ ಸಂಖ್ಯೆ 200ರ ಸಮೀಪ ಬರಬಹುದು ಎಂದು ನಿರೀಕ್ಷಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.