ADVERTISEMENT

ಕೆಂಪೇಗೌಡರ ಹಾದಿಯಲ್ಲಿ ಊರು ಕಟ್ಟಬೇಕಿದೆ: ಶಾಸಕ ಜಿ.ಬಿ.‌ಜ್ಯೋತಿಗಣೇಶ್ ಅಭಿಮತ

​ಪ್ರಜಾವಾಣಿ ವಾರ್ತೆ
Published 28 ಜೂನ್ 2021, 5:26 IST
Last Updated 28 ಜೂನ್ 2021, 5:26 IST
ತುಮಕೂರಿನಲ್ಲಿ ನಡೆದ ಕೆಂಪೇಗೌಡ ಜಯಂತಿಯಲ್ಲಿ ಭಾಗವಹಿಸಿದ್ದ ಗಣ್ಯರು
ತುಮಕೂರಿನಲ್ಲಿ ನಡೆದ ಕೆಂಪೇಗೌಡ ಜಯಂತಿಯಲ್ಲಿ ಭಾಗವಹಿಸಿದ್ದ ಗಣ್ಯರು   

ತುಮಕೂರು: ನಾಡಪ್ರಭು ಕೆಂಪೇಗೌಡರ ಹಾದಿಯಲ್ಲಿ ನಡೆಯುವ ಮೂಲಕ ಊರು ಕಟ್ಟಲು ಮುಂದಾಗಬೇಕು ಎಂದು ಶಾಸಕ ಜಿ.ಬಿ.‌ಜ್ಯೋತಿಗಣೇಶ್ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಭಾನುವಾರ ನಡೆದ ‘ನಾಡಪ್ರಭು ಕೆಂಪೇಗೌಡ ಜಯಂತಿ’ಯಲ್ಲಿ ಮಾತನಾಡಿದರು.

ಕೆಂಪೇಗೌಡರ ಆದರ್ಶಗಳನ್ನು ಮೈಗೂಡಿಸಿಕೊಂಡರೆ ಉತ್ತಮ ಊರು, ಸಮಾಜ ಕಟ್ಟಬಹುದು. ನಾಡು ಕಟ್ಟಿದ ಕೆಂಪೇಗೌಡರ ಶ್ರಮಕ್ಕೆ ಗೌರವ ಸೂಚಕವಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬೆಂಗಳೂರಿನ ಕೆಂಪೇಗೌಡ ಇಂಟರ್ ನ್ಯಾಷನಲ್‌ ವಿಮಾನ ನಿಲ್ದಾಣದ ಬಳಿ ಕೆಂಪೇಗೌಡರ ಪ್ರತಿಮೆ ನಿರ್ಮಾಣಕ್ಕೆ ಚಾಲನೆ ಕೊಟ್ಟಿದ್ದಾರೆ ಎಂದರು.

ADVERTISEMENT

ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಮಾಜಿ ಸಚಿವ ಟಿ.ಬಿ. ಜಯಚಂದ್ರ‌, ನಾಡಪ್ರಭು ಕೆಂಪೇಗೌಡ ಕಟ್ಟಿದ ಬೆಂಗಳೂರು ಇಂದು ಕೋಟ್ಯಂತರ ಜನರಿಗೆ ಆಶ್ರಯ ನೀಡಿದೆ. ಲಕ್ಷಾಂತರ ಮಂದಿಗೆ ಉದ್ಯೋಗ ಕಲ್ಪಿಸುತ್ತಿದೆ ಎಂದರು.

500 ವರ್ಷಗಳ ಹಿಂದೆ ಬೆಂಗಳೂರು ನಿರ್ಮಾಣ ಮಾಡಿ ಅದಕ್ಕೆ ರೂಪ-ರೇಷೆ ಕೊಟ್ಟು ವಿಶ್ವವೇ ತಿರುಗಿ ನೋಡುವಂತೆ ಆಕರ್ಷಣೀಯವಾಗಿಸಿದ್ದಾರೆ. ಇಂದಿನ ಬೆಂಗಳೂರು 500 ವರ್ಷಗಳ ಹಿಂದೆ ಸಾಮಾನ್ಯ ಹಳ್ಳಿಯಾಗಿತ್ತು. ಇಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ‌ ಪಡೆದಿದೆ. ಮಾಹಿತಿ, ಜೈವಿಕ ತಂತ್ರಜ್ಞಾನ ಅಳವಡಿಸಿಕೊಂಡಿರುವ ಬೆಂಗಳೂರು ಎಲ್ಲ ಕ್ಷೇತ್ರದಲ್ಲೂ ಇಡೀ ಪ್ರಪಂಚವನ್ನೇ ಮೀರಿಸುವ ಮಟ್ಟಕ್ಕೆ ಬೆಳೆದಿದೆ. ಇದೆಲ್ಲದರ ಕೀರ್ತಿ ಕೆಂಪೇಗೌಡರಿಗೆ ಸಲ್ಲುತ್ತದೆ‌ ಎಂದರು.

ಕೆಂಪೇಗೌಡ ಅವರು ಕಟ್ಟಿದ ಬೆಂಗಳೂರಿನ ಪರಿಸರ ಇಂದು ಹಾಳಾಗುತ್ತಿದೆ. ರಕ್ಷಣೆ ಮಾಡಬೇಕು. ಎಲ್ಲರಿಗೂ ಬದುಕುವ ವಾತಾವರಣ ಸೃಷ್ಟಿಸಿ ಉತ್ತಮ ವಾತಾವರಣವುಳ್ಳ ನಗರ
ವನ್ನಾಗಿ ಮಾರ್ಪಡಿಸುವ ಜಬಾವ್ದಾರಿ ಎಲ್ಲರ ಮೇಲಿದೆ‌ ಎಂದು ಹೇಳಿದರು.

ಮಾಜಿ ಶಾಸಕ‌ ಸುರೇಶ್ ಗೌಡ ಮಾತನಾಡಿ, ದೂರದೃಷ್ಟಿಯಿಂದ ಕೆಂಪೇಗೌಡರು ಕಟ್ಟಿದ ಬೆಂಗಳೂರು ನಾಡಿನ‌ ಹೆಮ್ಮೆ. ಇಂತಹ ನಾಡಿನಲ್ಲಿ ಜಾತಿಯನ್ನು ಮೆಟ್ಟಿ ಎಲ್ಲರನ್ನೂ ಸಮಾನತೆಯಿಂದ ನೋಡುವ ವ್ಯವಸ್ಥೆ ‌ಬರಬೇಕಿದೆ. ಜಾತಿ- ಜಾತಿ ನಡುವಿನ ವೈಷಮ್ಯ ತೊಡೆದುಹಾಕಿ‌ ಕೆಂಪೇಗೌಡರು ಹಾಕಿಕೊಟ್ಟ ಮಾದರಿಯಲ್ಲಿ ಮುನ್ನಡೆಯಬೇಕಿದೆ ಎಂದು ತಿಳಿಸಿದರು.

ಪಾಲಿಕೆ‌ ಮೇಯರ್ ಬಿ.ಜಿ.‌ಕೃಷ್ಣಪ್ಪ, ಮುಖಂಡ ಮುರುಳಿಧರ್‌ ಹಾಲಪ್ಪ, ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ, ಜಿಲ್ಲಾ‌ ಪಂಚಾಯತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ.ವಿದ್ಯಾಕುಮಾರಿ, ಉಪವಿಭಾಗಾಧಿಕಾರಿ ಅಜಯ್, ತಹಶೀಲ್ದಾರ್ ಮೋಹನ್ ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೆ. ಶ್ರೀನಿವಾಸ್, ಸುರೇಶ್ ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.