ತಿಪಟೂರು: ನಗರದ ಕಲ್ಪತರು ಕಾಲೇಜು ಸಭಾಂಗಣದಲ್ಲಿ ಮಂಗಳವಾರ ಸಣ್ಣ ಏಲಕ್ಕಿ ಹಾಗೂ ಕಾಳು ಮೆಣಸು ಬೆಳೆ ಕುರಿತು ಪ್ರಾದೇಶಿಕ ಕಾರ್ಯಾಗಾರ ನಡೆಯಿತು.
ಸಕಲೇಶಪುರ ಭಾರತೀಯ ಸಂಬಾರ ಮಂಡಳಿ ಹಾಗೂ ತಿಪಟೂರು ರೈತ ಉತ್ಪಾದಕರ ಕಂಪನಿ ಸಹಯೋಗದಲ್ಲಿ ಕಾರ್ಯಾಗಾರ ಆಯೋಜಿಸಲಾಗಿತ್ತು.
ದೋಣಿಗಾಲ್ ಭಾರತೀಯ ಏಲಕ್ಕಿ ಸಂಶೋಧನಾ ಸಂಸ್ಥೆಯ ವಿಜ್ಞಾನಿ ಹರ್ಷ ಕೆ.ಎನ್. ಮಾತನಾಡಿ, ಕಲ್ಪತರು ನಾಡಿನಲ್ಲಿ ಸಮಶೀತೋಷ್ಣ ಹವಾಗುಣ ಇರುವ ಕಾರಣ ತೆಂಗು ಮತ್ತು ಅಡಿಕೆ ಜೊತೆಗೆ ಏಲಕ್ಕಿ ಮತ್ತು ಮೆಣಸನ್ನು ವಾಣಿಜ್ಯ ಬೆಳೆಯಾಗಿ ಬೆಳೆದು ರೈತರು ಆರ್ಥಿಕತೆ ಹೆಚ್ಚಿಸಕೊಳ್ಳಬಹುದು ಎಂದರು.
ಈ ಭಾಗದ ರೈತರು ಕೇವಲ ತೆಂಗು ಕೃಷಿಯನ್ನೇ ಅವಲಂಬಿಸಿದ್ದು, ಇತ್ತೀಚೆಗೆ ಅಡಿಕೆ ಬೆಳೆಯಲು ಮುಂದಾಗಿದ್ದಾರೆ. ಹೈನುಗಾರಿಕೆ ಉಪ ಕಸುಬು ಸಮಾಧಾನ ನೀಡಿದ್ದರೂ ಆರ್ಥಿಕ ನಷ್ಟದಿಂದ ಹೊರ ಬಂದಿಲ್ಲ. ಹಾಗಾಗಿ ಬಹ ಬೇಡಿಕೆಯಿರುವ ಏಲಕ್ಕಿ ಮತ್ತು ಕಾಳು ಮೆಣಸು ಪರ್ಯಾಯ ವಾಣಿಜ್ಯ ಕೃಷಿ ಕಡೆ ಒಲವು ತೋರಿದಲ್ಲಿ ಆರ್ಥಿಕ ಸಮಸ್ಯೆಯಿಂದ ಹೊರ ಬರಬಹುದು. ಕಾಳು ಮೆಣಸನ್ನು ತೆಂಗು ಮತ್ತು ಅಡಿಕೆ ನಡುವೆ ಸಮಗ್ರ ಕೃಷಿ ಪದ್ಧತಿಯಲ್ಲಿ ಬೇಸಾಯ ಮಾಡಿದರೆ ವಾರ್ಷಿಕ ಕನಿಷ್ಠ ₹4ರಿಂದ ₹5 ಲಕ್ಷ ಆದಾಯ ಪಡೆಯಬುದು ಎಂದರು.
ಏಲಕ್ಕಿ ಮತ್ತು ಕಾಳುಮೆಣಸು ಸಸಿಗಳ ಕೊರತೆಯಿರುವ ಕಾರಣ ಸ್ವಸಹಾಯ ಸಂಘಗಳು ಅಲ್ಲಲ್ಲಿ ನರ್ಸರಿ ಮಾಡಿ ರೈತರಿಗೆ ಬೇಕಾದ ಉತ್ತಮ ಸಸಿಗಳನ್ನು ಬೆಳೆಸಿ ಮಾರಾಟ ಮಾಡುವ ಮೂಲಕ ಬದುಕು ಕಟ್ಟಿಕೊಳ್ಳಬಹುದು. ಮದುವೆ ಇತರೆ ಶುಭ ಕಾರ್ಯಗಳಲ್ಲಿ ಬೆಲೆ ಬಾಳುವ ಉಡುಗೊರೆ ಕೊಡುವ ಬದಲಿಗೆ ವರ್ಷವಿಡಿ ಫಲ ನೀಡುವ ಪೊದೆ ಮೆಣಸು ಗಿಡಗಳನ್ನು ಅಲಂಕಾರಿಕ ಕುಂಡಗಳಲ್ಲಿ ನೀಡಿದರೆ ಅತ್ಯಂತ ಉಪಯುಕ್ತ ಎಂದು ಸಲಹೆ ನೀಡಿದರು.
ಹಾಸನ ಕೆವಿಕೆ ಕೃಷಿ ವಿಜ್ಞಾನಿ ಟಿ.ನಾಗರಾಜು ಮಾತನಾಡಿ, ತೆಂಗು ಇಳುವರಿ ತೀವ್ರ ಕ್ಷೀಣಿಸಿದೆ. ಈ ಬಗ್ಗೆ ತೆಂಗು ಬೆಳೆಗಾರರು ಗಂಭೀರವಾಗಿ ಆಲೋಚಿಸಬೇಕಿದೆ. ತೆಂಗಿನ ಆರೈಕೆ ಮತ್ತು ನಿರ್ವಹಣೆ ಲೋಪದಿಂದ ಸಮಸ್ಯೆ ಉಲ್ಪಣಿಸಿದೆ. ರೈತ ವೈಜ್ಞಾನಿಕವಾಗಿ ಚಿಂತಿಸಬೇಕು. ಮಣ್ಣಿನ ಫಲವತ್ತತೆ ಬಗ್ಗೆ ನಿರ್ಲಕ್ಷ್ಯ ತೋರುವುದು ಸಹ ರೈತರ ವೈಫಲ್ಯ. ತೋಟಗಾರಿಕೆ ಇಲಾಖೆ ಅಥವಾ ಸಂಶೋಧನಾ ಕೇಂದ್ರಗಳಿಂದ ಮಾಹಿತಿ ಪಡೆದು ತೆಂಗು ಕೃಷಿ ಮಾಡಬೇಕು. ತೆಂಗಿನ ಜೊತೆಗೆ ಜಾಯಿಕಾಯಿ, ಲವಂಗ, ಚಕ್ಕೆ, ಏಲಕ್ಕಿ, ಕಾಳುಮೆಣಸು ಮಿಶ್ರಬೆಳೆ ರೈತರ ಆದಾಯ ಹೆಚ್ಚಿಸುತ್ತದೆ ಎಂದು ಹೇಳಿದರು.
ಕಾರ್ಯಾಗಾರದಲ್ಲಿ 400ಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು.
ತಿಪಟೂರು ರೈತ ಉತ್ಪಾದಕ ಕಂಪನಿ ಅಧ್ಯಕ್ಷ ಎಂ.ದಯಾನಂದಸ್ವಾಮಿ, ಸಾಂಬಾರ ಮಂಡಳಿ ಉಪನಿರ್ದೇಶಕ ಎಂ.ವೈ. ಹೊನ್ನೂರು, ಪ್ರಗತಿಪರ ರೈತ ರಾಜಶೇಖರ್ ಕೆರಗೋಡಿ, ಸಕಲೇಶಪುರ ಸಾಂಬಾರ ಮಂಡಳಿ ಹಿರಿಯ ಕ್ಷೇತ್ರಾಧಿಕಾರಿ ಎಸ್.ಕುಮಾರ್, ಸಿಇಒ ಅರವಿಂದ ಎಂ.ಆರ್., ನವೀನ್ ಸಾಸಲಹಳ್ಳಿ ಹಾಜರಿದ್ದರು.
ಅಂಗಾಂಶ ಕಸಿ ಸೂಕ್ತ
ಕಲ್ಪತರು ನಾಡಿನ ವಾತಾವರಣಕ್ಕೆ ಶ್ರೀಕರ ಶುಭಕರ ಪಂಚಮಿ ಮತ್ತು ಪೌರ್ಣಿಮಿ ತಳಿ ಸೂಕ್ತ. ಉತ್ತಮ ತಳಿಯ ಸಸಿಗಳ ಕೊರತೆ ಕಾರಣ ರೈತರೇ ಅಂಗಾಂಶ ಕಸಿ ಕಟ್ಟಿ ಗಿಡಗಳನ್ನು ಮಾಡಿಕೊಳ್ಳಬೇಕು. 10ರಿಂದ 12 ವರ್ಷದ ವಯಸ್ಸಿನ ಪ್ರೌಢಗಿಡಗಳಲ್ಲಿ ಕಸಿ ಮಾಡಿಕೊಳ್ಳುವುದು ಸೂಕ್ತ ಎಂದು ಕೃಷಿ ವಿಜ್ಞಾನಿ ಹರ್ಷ ಕೆ.ಎನ್. ಸಲಹೆ ನೀಡಿದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.