ADVERTISEMENT

ವರ್ಗಾವಣೆ: ಸ್ಥಳ ಆಯ್ಕೆಗೆ ಶಿಕ್ಷಕರು ಮನವಿ

​ಪ್ರಜಾವಾಣಿ ವಾರ್ತೆ
Published 25 ಜೂನ್ 2025, 16:25 IST
Last Updated 25 ಜೂನ್ 2025, 16:25 IST

ತುಮಕೂರು: ‘ಪ್ರಸಕ್ತ ಸಾಲಿನಲ್ಲಿ ಹೆಚ್ಚುವರಿ ಗುರುತಿಸುವಿಕೆ ಮತ್ತು ವರ್ಗಾವಣೆ ಸ್ಥಳ ಆಯ್ಕೆಯಲ್ಲಿ ಶಿಕ್ಷಕರು, ಬಿಆರ್‌ಪಿ, ಸಿಆರ್‌ಪಿಗಳಿಗೆ ಆಯಾ ತಾಲ್ಲೂಕಿನಲ್ಲಿಯೇ ಅವಕಾಶ ಕಲ್ಪಿಸಬೇಕು’ ಎಂದು ಶಿಕ್ಷಕರು ಮನವಿ ಮಾಡಿದರು.

ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ವಿವಿಧ ಹಕ್ಕೊತ್ತಾಯ ಮಂಡಿಸಲಾಯಿತು.

‘ಶಿಕ್ಷಕರಿಗೆ ಬೋಧನಾ ಸಮಯದಲ್ಲಿ ಬೋಧನೇತರ ಚಟುವಟಿಕೆಗಳಿಂದ ಒತ್ತಡ ಹೆಚ್ಚುತ್ತಿದೆ. ಮೊಟ್ಟೆಯ ದರದಲ್ಲಿ ಆಗುವ ವ್ಯತ್ಯಾಸ, ಅಕ್ಷರ ದಾಸೋಹ, ಪ್ರತಿ ದಿನ ಆನ್‌ಲೈನ್‌ನಲ್ಲಿ ಮಾಹಿತಿ ಸಲ್ಲಿಸುವುದು ಹೊರೆಯಾಗುತ್ತಿದೆ. ನಿರ್ವಹಣೆ ಕಷ್ಟವಾಗುತ್ತಿದೆ’ ಎಂದು ಶಿಕ್ಷಕರು ಸಭೆಯ ಗಮನಕ್ಕೆ ತಂದರು.

ADVERTISEMENT

ಕೆಲ ತಾಲ್ಲೂಕುಗಳಲ್ಲಿ ವೈದ್ಯಕೀಯ ವೆಚ್ಚ ಮರು ಪಾವತಿ ಬಾಕಿ ಇದೆ. ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಸೇವಾ ಹಿರಿತನದಲ್ಲಿ ನೀಡುತ್ತಿರುವ ಬಡ್ತಿಯಲ್ಲಿ ವಿಳಂಬವಾಗುತ್ತಿದೆ. ಶಿಕ್ಷಕರನ್ನು ಶೈಕ್ಷಣಿಕ ಚಟುವಟಿಕೆ, ತರಗತಿಗಳಲ್ಲಿ ಮಕ್ಕಳ ಕಲಿಕೆಯಲ್ಲಿ ತೊಡಗಿಸಿಕೊಳ್ಳಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಆರ್‌.ಪರಶಿವಮೂರ್ತಿ, ‘ಸಭೆಯಲ್ಲಿ ಚರ್ಚೆಯಾದ ಎಲ್ಲ ವಿಚಾರಗಳನ್ನು ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರು, ಸಂಘದ ರಾಜ್ಯ ಘಟಕದ ಅಧ್ಯಕ್ಷರ ಗಮನಕ್ಕೆ ತರಲಾಗುವುದು. ಸಮಸ್ಯೆ ಬಗೆಹರಿಸಲು ತುರ್ತು ಕ್ರಮಕೈಗೊಳ್ಳಲಾಗುವುದು’ ಎಂದರು.

ವಿವಿಧ ಬೇಡಿಕೆ ಈಡೇರಿಕೆಗೆ ಪ್ರಾಮಾಣಿಕವಾಗಿ ಶ್ರಮಿಸಲಾಗುವುದು. ಈ ಬಗ್ಗೆ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಾಗುವುದು ಎಂದು ಸಭೆಗೆ ತಿಳಿಸಿದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಆರ್.ಜಯರಾಂ, ಉಪಾಧ್ಯಕ್ಷ ಕೆ.ಜಿ.ಕಾಳೇಗೌಡ, ಪದಾಧಿಕಾರಿಗಳಾದ ಷಣ್ಮುಖಪ್ಪ, ಎನ್‌.ದಿನೇಶ್, ಆರ್‌.ಮಂಜಣ್ಣ, ಡಿ.ಜಯಲಕ್ಷ್ಮಮ್ಮ, ಎನ್‌.ಟಿ.ಪ್ರಕಾಶ್‌, ಪಿ.ಜಿ.ತಿಮ್ಮೇಗೌಡ, ಬೋರೇಗೌಡ, ವೆಂಕಟರಮಣ, ಟಿ.ಕೆ.ಪಟ್ಟಾಭಿರಾಮು, ಗಿರೀಶ್‌, ನಂದಿನಿ, ಮಹದೇವಯ್ಯ ಮೊದಲಾದವರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.