ADVERTISEMENT

ದಸರಾ ಐಕ್ಯತೆಯ ಪ್ರತೀಕ

ತುಮಕೂರು ದಸರಾದಲ್ಲಿ ಸಿದ್ದಲಿಂಗ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2019, 15:24 IST
Last Updated 8 ಅಕ್ಟೋಬರ್ 2019, 15:24 IST
ವಿಜಯದಶಮಿ ಉತ್ಸವದಲ್ಲಿ ಶಮೀ ಪೂಜೆ ನೆರವೇರಿಸಲಾಯಿತು
ವಿಜಯದಶಮಿ ಉತ್ಸವದಲ್ಲಿ ಶಮೀ ಪೂಜೆ ನೆರವೇರಿಸಲಾಯಿತು   

ತುಮಕೂರು: ದಸರಾ ಹಬ್ಬ ಐಕ್ಯತೆ ಮತ್ತು ಸಾಂಘಿಕ ಜೀವನದ ಪ್ರತೀಕ ಎಂದು ಸಿದ್ಧಗಂಗಾ ಮಠಾಧೀಶ ಸಿದ್ದಲಿಂಗ ಸ್ವಾಮೀಜಿ ಹೇಳಿದರು.

ತುಮಕೂರು ದಸರಾದಲ್ಲಿ ಶಮೀ ಪೂಜೆ ಬಳಿಕ ಅವರು ಮಾತನಾಡಿದರು.

ಹಬ್ಬಗಳು ದೈಹಿಕ ಶಕ್ತಿಗೆ ಸೀಮಿತವಾಗದೆ ದೈವಿಕ ಶಕ್ತಿಯಿಂದಲೂ ಆಚರಿಸಬೇಕು. ಅಂತರಂಗ ಶುದ್ಧಿಗೆ ಹಬ್ಬಗಳು ಸಹಾಯಕ. ಎಲ್ಲರಿಗೂ ಒಳಿತನ್ನು ಬಯಸುವ ಮನೋಭಾವ ಬೆಳೆಸಿಕೊಂಡರೆ ಹಬ್ಬಾಚರಣೆಗಳಿಗೆ ಅರ್ಥ ಬರುತ್ತದೆ ಎಂದರು.

ADVERTISEMENT

ಉಪನ್ಯಾಸಕಿ ಅಕ್ಷಯಾ ಗೋಖಲೆ, ದೇಶವನ್ನು ಬದಲಿಸಬೇಕಾದರೆ ನಮ್ಮ ಮನೆಯಿಂದಲೇ ಸಂಸ್ಕೃತಿ ಬೆಳೆಸಬೇಕು. ಹಿಂದಿನ ಕಾಲದಲ್ಲಿ ಹೆಣ್ಣಿಗೆ ಕೈಮುಗಿಯುತ್ತಿದ್ದರು. ಆದರೆ, ಇಂದು ಫ್ಯಾಷನ್‌ ಹೆಸರಿನಲ್ಲಿ ನಮ್ಮ ಮನೆಯ ಲಕ್ಷ್ಮಿಯರು ರಜಿಯಾ ಆಗಿ ಬದಲಾಗುತ್ತಿದ್ದಾರೆ. ಹರಿದ ಬಟ್ಟೆಗಳನ್ನು ಹಾಕಿಕೊಂಡು ಸಂಸ್ಕೃತಿಯನ್ನು ನಾಶ ಮಾಡುತ್ತಿದ್ದಾರೆ ಎಂದು ಬೇಸರಿಸಿದರು.

ನಾವು ಮಕ್ಕಳಿಗೆ ಶ್ರೀಕೃಷ್ಣ, ರಾಮನನ್ನು ಹೇಳಿಕೊಡಬೇಕು. ಧಾರಾವಾಹಿಗಳಲ್ಲಿನ ಕಷ್ಟದ ಸನ್ನಿವೇಶಕ್ಕೆ ಮರುಗುವ ನಾವು ಅಪ್ಪ–ಅಮ್ಮರನ್ನು ವೃದ್ಧಾಶ್ರಮಕ್ಕೆ ಬಿಡುತ್ತೇವೆ ಎಂದು ಕಳವಳ ವ್ಯಕ್ತಪಡಿಸಿದರು.

ಸ್ವಾಮಿ ವಿವೇಕಾನಂದರ ತತ್ವಗಳನ್ನು ವಿದೇಶಿಯರು ಸಹ ಪಾಲಿಸುತ್ತಾರೆ. ನಾವೇ ನಮ್ಮವರನ್ನು ಮರೆಯುತ್ತಿದ್ದೇವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಲೆಗೆ ಆದ್ಯತೆಯಿಂದ ಸಂಸ್ಕಾರ: ಕಲೆಗಳಿಗೆ ನಾವು ಆದ್ಯತೆ ನೀಡಿದರೆ ಸಂಸ್ಕಾರವು ಬೆಳೆಯುತ್ತದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.

ತುಮಕೂರು ದಸರಾಕ್ಕೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.

ನಮ್ಮ ಭಾಷೆ, ಸಾಹಿತ್ಯ ಮತ್ತು ಕಲೆಗಳ ಕುರಿತು ಅಭಿಮಾನ ಬೆಳೆಸಿಕೊಳ್ಳಬೇಕು. ಶಕ್ತಿ ಮತ್ತು ಪ್ರತಿಭೆಗಳನ್ನು ಸಮಾಜದ ಅಭ್ಯುದಯಕ್ಕೆ ಬಳಸಬೇಕು ಎಂದು ಸಲಹೆ ನೀಡಿದರು.

ಸಂಸದ ಜಿ.ಎಸ್.ಬಸವರಾಜು, ಸಂಪ್ರದಾಯಗಳನ್ನು ಮುಂದಿನ ಪೀಳಿಗೆಗೆ ದಾಟಿಸಬೇಕಾದರೆ ಹಬ್ಬಗಳ ಆಚರಣೆ ಅವಶ್ಯಕ ಎಂದು ಹೇಳಿದರು.

ಶಾಸಕ ಜಿ.ಬಿ.ಜ್ಯೋತಿಗಣೇಶ, ದಸರಾ ಸಮಿತಿ ಕಾರ್ಯಾಧ್ಯಕ್ಷ ಬಿ.ಎಸ್.ಮಂಜುನಾಥ್, ಆಳ್ವಾಸ್ ಸಂಸ್ಥೆ ಮುಖ್ಯಸ್ಥ ಮೋಹನ್ ಆಳ್ವ, ದಸರಾ ಉತ್ಸವ ಸಮಿತಿ ಅಧ್ಯಕ್ಷ ಮಂಜಣ್ಣ, ಆರ್.ಎಲ್.ರಮೇಶ್ ಬಾಬು, ಸಮಿತಿ ಸಂಯೋಜಕ ಗೋವಿಂದರಾಜು, ಟಿ.ಬಿ.ಶೇಖರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.