ADVERTISEMENT

ತುಮಕೂರು: ಹೆಬ್ಬಾಕ ಕೆರೆ ಸೇರುತ್ತಿದೆ ತ್ಯಾಜ್ಯ

​ಪ್ರಜಾವಾಣಿ ವಾರ್ತೆ
Published 10 ಜೂನ್ 2025, 14:33 IST
Last Updated 10 ಜೂನ್ 2025, 14:33 IST
ತುಮಕೂರು ತಾಲ್ಲೂಕಿನ ಹೆಬ್ಬಾಕ ಕೆರೆ ಏರಿ ಬಳಿ ಕಸದ ರಾಶಿ
ತುಮಕೂರು ತಾಲ್ಲೂಕಿನ ಹೆಬ್ಬಾಕ ಕೆರೆ ಏರಿ ಬಳಿ ಕಸದ ರಾಶಿ   

ತುಮಕೂರು: ತಾಲ್ಲೂಕಿನ ಹೆಬ್ಬಾಕ ಕೆರೆ ಏರಿಯ ಬಳಿ ತ್ಯಾಜ್ಯ, ಕಸದ ರಾಶಿ ಬಿದ್ದಿದ್ದು, ತೆರವಿಗೆ ಕ್ರಮಕೈಗೊಂಡಿಲ್ಲ ಎಂಬ ಆಕ್ಷೇಪ ವ್ಯಕ್ತವಾಗಿದೆ. ಕಸ ಸುರಿಯುವುದನ್ನು ತಡೆಗಟ್ಟುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

‘ಮಳೆಗಾಲದಲ್ಲಿ ತ್ಯಾಜ್ಯ ನೀರು ಕೆರೆ ಹರಿಯುತ್ತದೆ. ನೀರಿನ ಜತೆಗೆ ಪ್ಲಾಸ್ಟಿಕ್‌ ಕೂಡ ಕೆರೆಯ ಒಡಲಿಗೆ ಸೇರುತ್ತದೆ. ಜನಪ್ರತಿನಿಧಿಗಳು, ಅಧಿಕಾರಿಗಳು ಮುಂದಿನ ದಿನಗಳಲ್ಲಿ ಹೆಬ್ಬಾಕ ಕೆರೆಗೆ ಹೇಮಾವತಿ ನೀರು ಹರಿಸಲಾಗುವುದು ಎಂದು ಹೇಳುತ್ತಿದ್ದಾರೆ. ಅದಕ್ಕೂ ಮುನ್ನ ಕೆರೆಗೆ ತ್ಯಾಜ್ಯ ನೀರು ಹರಿಯುವುದನ್ನು ತಡೆಯಬೇಕು. ಕಲುಷಿತ ನೀರು ತಡೆಯದಿದ್ದರೆ ಹೇಮಾವತಿ ನೀರು ಹರಿಸುವುದು ವ್ಯರ್ಥ’ ಎನ್ನುತ್ತಾರೆ ಈ ಭಾಗದ ಜನರು.

‘ಕೆರೆಯಿಂದ ಸ್ವಲ್ಪ ದೂರದಲ್ಲಿಯೇ ಅಜ್ಜಗೊಂಡನಹಳ್ಳಿ ಕಸ ವಿಲೇವಾರಿ ಘಟಕ ಇದೆ. ಸುಮಾರು 50 ಎಕರೆ ಪ್ರದೇಶದಲ್ಲಿ ಘಟಕದ ಕೆಲಸಗಳು ನಡೆಯುತ್ತಿವೆ. ಆದರೂ ರಸ್ತೆ ಪಕ್ಕದಲ್ಲಿಯೇ ಕಸ ಸುರಿಯುತ್ತಿದ್ದಾರೆ. ನಗರದಿಂದ ಕಟ್ಟಿಗೇನಹಳ್ಳಿ, ಕೋರ ಕಡೆಗೆ ಸಾಗುವವರು ಮೂಗು ಮುಚ್ಚಿಕೊಂಡು ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಮೆಳೇಹಳ್ಳಿ ಮಲ್ಲಿಕಾರ್ಜುನ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ADVERTISEMENT

ಸ್ಮಾರ್ಟ್‌ ಸಿಟಿಯ ಕಸದಿಂದ ಗ್ರಾಮೀಣ ಭಾಗದ ಜನರು ಕಿರಿಕಿರಿ ಅನುಭವಿಸುತ್ತಿದ್ದಾರೆ. ಜಿಲ್ಲಾಧಿಕಾರಿ, ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಮತ್ತೊಮ್ಮೆ ಇಲ್ಲಿ ಕಸ ಹಾಕದಂತೆ ಮುಂಜಾಗ್ರತಾ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.