ಪ್ರಜಾವಾಣಿ ವಾರ್ತೆ
ತುಮಕೂರು: ಹೆಣ್ಣು ಮಗು ಹುಟ್ಟಿದರೆ ಕುಟುಂಬಕ್ಕೆ ಶಾಪ, ಹೊರೆ ಎಂದು ಭಾವಿಸಬಾರದು. ಉತ್ತಮ ಶಿಕ್ಷಣ ನೀಡಿದರೆ ಮಹಿಳೆಯರೂ ಸಾಧಿಸಿ ತೋರಿಸುತ್ತಾರೆ ಎಂದು ಜಿಲ್ಲಾ ಖಜಾನೆ ಉಪನಿರ್ದೇಶಕಿ ಆರ್.ವಿ.ಉಮಾ ಪವನ್ ಸಲಹೆ ಮಾಡಿದರು.
ನಗರದಲ್ಲಿ ಮಂಗಳವಾರ ಕುಂಚಶ್ರೀ ಮಹಿಳಾ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ, ‘ಕುಂಚಶ್ರೀ’ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
‘ಮಹಿಳೆಗೆ ಶಿಕ್ಷಣ ಸಿಕ್ಕರೆ ಉತ್ತಮ ಸ್ಥಾನ ತಲುಪಿ, ಕುಟುಂಬವನ್ನು ಶೈಕ್ಷಣಿಕವಾಗಿ, ಆರ್ಥಿಕವಾಗಿ ಮುನ್ನಡೆಸುತ್ತಾಳೆ’ ಎಂದರು.
ಕೆಂಪೇಗೌಡ ಶಾಲೆ ಪ್ರಾಂಶುಪಾಲರಾದ ಕನಕಲಕ್ಷ್ಮಿ ದಾಸಪ್ಪ, ‘ಯಾವುದೇ ಸಂದರ್ಭದಲ್ಲೂ ಕಷ್ಟಕರ ಸನ್ನಿವೇಶವನ್ನು ಧೈರ್ಯವಾಗಿ ಎದುರಿಸಿ ಮುನ್ನಡೆಯಬೇಕು’ ಎಂದು ತಿಳಿಸಿಕೊಟ್ಟರು.
ಕುಂಚಶ್ರೀ ಮಹಿಳಾ ಬಳಗದ ಅಧ್ಯಕ್ಷೆ ಲಲಿತಾ ಮಲ್ಲಪ್ಪ, ‘ಹಿಂದಿನ ವೀರ ವನಿತೆಯರು ನಮಗೆಲ್ಲ ಸ್ಫೂರ್ತಿ. ಧೈರ್ಯವಾಗಿ ಸಮಾಜದ ಓರೆ ಕೋರೆಗಳನ್ನು ತಿದ್ದುವ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು’ ಎಂದು ಹೇಳಿದರು.
‘ಕುಂಚಶ್ರೀ’ ಪ್ರಶಸ್ತಿಯನ್ನು ಸೋಬಾನೆ ಪದಗಳ ಹಾಡುಗಾರ್ತಿ ವೀರಾಪುರ ಗ್ರಾಮದ ಕಾಮಕ್ಕ ಅವರಿಗೆ ಪ್ರದಾನ ಮಾಡಲಾಯಿತು.
ನಿವೃತ್ತ ಪ್ರಾಂಶುಪಾಲರಾದ ನರಸಮ್ಮ, ಬಳಗದ ಪ್ರಮುಖರಾದ ಎಂ.ಎನ್.ಸುನಿತಾ, ಮಂಜುಳಾ ನಾಗರಾಜು, ಶಿರಾ ತಾಲ್ಲೂಕು ಘಟಕದ ಅಧ್ಯಕ್ಷೆ ಮಂಜುಳಾ ರಾಮು, ಕೊರಟಗೆರೆ ಘಟಕದ ಅಧ್ಯಕ್ಷೆ ಕವಿತಾ ಮಂಜುನಾಥ್, ಪದಾಧಿಕಾರಿಗಳಾದ ರತ್ನ ನಾಗರಾಜ್, ಶೈಲಜಾ ಸುರೇಶ್, ಪ್ರೇಮಾ ರಮೇಶ್, ಸುವರ್ಣ ರಮೇಶ್, ಮಂಜುಳಾ ರಾಮಕೃಷ್ಣ, ಚಂದ್ರಕಲಾ ಪ್ರಕಾಶ್, ಚಂದ್ರಕಲಾ ಲೋಕನಾಥ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.