ADVERTISEMENT

ಸಾಮಾಜಿಕ ನ್ಯಾಯಕ್ಕಾಗಿ ಶ್ರಮ

ಗ್ರಾ.ಪಂ ಚುನಾಯಿತರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಜೆಡಿಎಸ್‌ ವರಿಷ್ಠ ದೇವೇಗೌಡ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2021, 4:02 IST
Last Updated 5 ಮಾರ್ಚ್ 2021, 4:02 IST
ಕಾರ್ಯಕ್ರಮ ಉದ್ಘಾಟಿಸಿದ ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ
ಕಾರ್ಯಕ್ರಮ ಉದ್ಘಾಟಿಸಿದ ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ   

ಪಾವಗಡ: ಸಾಮಾಜಿಕ ನ್ಯಾಯಕ್ಕಾಗಿ ಹಲವು ದಶಕಗಳಿಂದಲೂ ಪಕ್ಷ ಶ್ರಮಿಸುತ್ತಿದೆ ಎಂದು ಜೆಡಿಎಸ್‌ ವರಿಷ್ಠ ಎಚ್.ಡಿ.ದೇವೇಗೌಡ ತಿಳಿಸಿದರು.

ಪಟ್ಟಣದಲ್ಲಿ ಗುರುವಾರ ಜೆಡಿಎಸ್ ತಾಲ್ಲೂಕು ಘಟಕ ಆಯೋಜಿಸಿದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಮಹಿಳೆ, ಹಿಂದುಳಿದ ವರ್ಗ, ಅಲ್ಪ ಸಂಖ್ಯಾತರಿಗೆ ಮೀಸಲಾತಿ ಕಲ್ಪಿಸಲು ಶ್ರಮಿಸಿದ್ದೇನೆ. ನಾಯಕ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಲ್ಲಿ ಶ್ರಮ ಇದೆ. ತಳ ಸಮುದಾಯ, ಬಡ ಜನತೆಗೆ ಸಮಾಜಿಕ ನ್ಯಾಯ ಕಲ್ಪಿಸಲು ಆರಂಭದಿಂದಲೂ ಪಕ್ಷ ಮುಂಚೂಣಿಯಲ್ಲಿದೆ ಎಂದರು.

ADVERTISEMENT

ಚುನಾವಣೆ ವೇಳೆ ಕಾಂಗ್ರೆಸ್ ಮುಖಂಡರು ದೇವೇಗೌಡ ‘ಬಿಜೆಪಿ ಬಿ ಟೀಮ್’ ಎಂದು ಹೇಳಿ ನನ್ನ ವಿರುದ್ಧ ಮಸಲತ್ತು ಮಾಡಿದರು. ಆದರೆ ಕಾಂಗ್ರೆಸ್ ಹೆಚ್ಚಿನ ಸ್ಥಾನ ಕಳೆದುಕೊಂಡಿತು. ಜೆಡಿಎಸ್ ಅಪ್ಪ ಮಕ್ಕಳ ಪಕ್ಷ ಎಂದು ಬಿಂಬಿಸುತ್ತಾರೆ. ಆದರೆ ಇದು ಕಾರ್ಯಕರ್ತರ ಪಕ್ಷ ಎಂದರು.

ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ, ಜೆಡಿಎಸ್ ಸರ್ಕಾರ ಅಧಿಕಾರದಲ್ಲಿದ್ದಾಗ ತಾಲ್ಲೂಕಿಗೆ ಮೊರಾರ್ಜಿ ವಸತಿ ಶಾಲೆಗಳು, ಪ್ರೌಢ ಶಾಲೆಗಳು, ಕಾಲೇಜುಗಳನ್ನು ಪ್ರಾರಂಭಿಸಲಾಗಿದೆ. ಸುವರ್ಣ ಗ್ರಾಮ ಯೋಜನೆಯಡಿ ಗ್ರಾಮಗಳಿಗೆ ರಸ್ತೆ, ಚರಂಡಿ, ಅಗತ್ಯ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಸಾಲ ಮನ್ನಾ ಮುಖಾಂತರ ಲಕ್ಷಾಂತರ ರೈತರ ಸಾಲಮನ್ನಾ ಆಗಿದೆ ಎಂದರು.

ರಾಜ್ಯ ಘಟಕದ ಉಪಾಧ್ಯಕ್ಷ ತಿಮ್ಮಾರೆಡ್ಡಿ, ಪಂಚಾಯತ್ ರಾಜ್‌ಗೆ ಜೀವ ತಂದು ಕೊಟ್ಟಿದ್ದು ಜನತಾ ಪಕ್ಷ. ಮೀಸಲಾತಿ ಜೊತೆಗೆ ಸ್ಥಳೀಯ ಸಂಸ್ಥೆಗಳಿಗೆ ಶಕ್ತಿ ತುಂಬಲಾಯಿತು ಎಂದರು.

ಜಿಲ್ಲಾ ಘಟಕದ ಅಧ್ಯಕ್ಷ ಆರ್ ಸಿ ಅಂಜಿನಪ್ಪ, ತಾಲ್ಲೂಕಿನ 526 ಗ್ರಾಮ ಪಂಚಾಯಿತಿ ಕ್ಷೇತ್ರಗಳಲ್ಲಿ 300 ಕ್ಷೇತ್ರಗಳಲ್ಲಿ ಜೆಡಿಎಸ್ ಬೆಂಬಲಿತರು ಜಯಗಳಿಸಿದ್ದಾರೆ. 17 ಗ್ರಾಮ ಪಂಚಾಯಿತಿಗಳಲ್ಲಿ ಅಧ್ಯಕ್ಷ, ಉಪಾಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ ಎಂದರು.

ಶಾಸಕ ಪುಟ್ಟೇಗೌಡ, ವಿಧಾನ ಪರಿಷತ್ ಮಾಜಿ ಸದಸ್ಯ ಶರವಣ, ಬೆಳ್ಳಿ ಲೋಕೇಶ್ ಮಾತನಾಡಿದರು.

ತಾಲ್ಲೂಕು ಘಟಕದ ಅಧ್ಯಕ್ಷ ಬಲರಾಮರೆಡ್ಡಿ, ಕಾರ್ಯದರ್ಶಿ ಈರಣ್ಣ, ಗೌರವಾಧ್ಯಕ್ಷ ರಾಜಶೇಖರ್, ಗೋವಿಂದಬಾಬು, ಚಂದ್ರಶೇಖರ್, ಮಾನಂ ವೆಂಕಟಸ್ವಾಮಿ, ಅಂಜಪ್ಪ, ಪುರಸಭೆ ಸದಸ್ಯ ಗೊರ್ತಿ ನಾಗರಾಜು, ವಸಂತ್, ಗೋಪಾಲ್, ಮನು, ಅಲ್ಪ ಸಂಖ್ಯಾತ ಮುಖಂಡ ಯೂನುಸ್, ಲತೀಫ್, ಕಾಲಿದ್, ಸುಹೇಲ್, ಚಿತ್ತಗಾನಹಳ್ಳಿ ಚಂದ್ರು, ವಕ್ತಾರ ಅಕ್ಕಲಪ್ಪ, ಅಂಬಿಕಾ ರಮೇಶ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.