ಗುಬ್ಬಿ: ಗ್ರಾಮ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳು, ಪಿಡಿಒ ಹಾಗೂ ಸಿಬ್ಬಂದಿಗಳಿಗೆ ತರಬೇತಿ ನೀಡಿ ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಪಟ್ಟಣದಲ್ಲಿ ಬುಧವಾರ ಪಂಚಾಯತ್ ರಾಜ್ ಇಲಾಖೆಯಿಂದ ಒಂದು ದಿನದ ತರಬೇತಿ ಕಾರ್ಯಾಗಾರ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಶಾಸಕ ಎಸ್.ಆರ್. ಶ್ರೀನಿವಾಸ್ ಮಾತನಾಡುತ್ತಿರುವಾಗ ಹಲವು ಸದಸ್ಯರು ವೇದಿಕೆ ಮುಂಭಾಗ ಬಂದು ಜಿಲ್ಲಾ ಪಂಚಾಯಿತಿ ಸಿಇಒ ಕಾರ್ಯಕ್ರಮಕ್ಕೆ ಬರದಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಜನಪ್ರತಿನಿಧಿಗಳಿಗೆ ಹಾಗೂ ಸಿಬ್ಬಂದಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ತರಬೇತಿ ಉತ್ತಮವಾಗಿದ್ದರೂ, ಅಧಿಕಾರ ಅವಧಿ ಮುಗಿಯುವ ಈ ಸಂದರ್ಭದಲ್ಲಿ ತರಬೇತಿಯ ಅಗತ್ಯ ಏನಿತ್ತು ಎಂದು ಅನೇಕರು ಆಕ್ಷೇಪ ವ್ಯಕ್ತಪಡಿಸಿದರು.
ಸದಸ್ಯರನ್ನು ಸಮಾಧಾನ ಪಡಿಸಿ ಮಾತನಾಡಿದ ಶಾಸಕ ಶ್ರೀನಿವಾಸ್, ಅಧಿಕಾರ ಮುಗಿಯುತ್ತಿರುವ ಸಂದರ್ಭದಲ್ಲಿ ಯಾವುದೇ ತರಬೇತಿ ನೀಡಿದರೂ ಪ್ರಯೋಜನವಾಗುವುದಿಲ್ಲ. ಅಧಿಕಾರಿಗಳು ಯಾವ ಕಾರಣಕ್ಕೆ ಈ ಕಾರ್ಯಕ್ರಮ ಆಯೋಜಿಸಿದರು ಎಂದು ತಿಳಿಯುತ್ತಿಲ್ಲ. ಸಂಬಂಧಿಸಿದ ಅಧಿಕಾರಿಗಳನ್ನು ವಿಚಾರಿಸಿ ಪರಿಶೀಲಿಸೋಣ ಎಂದರು.
ತರಬೇತಿ ಕಾರ್ಯಗಾರಗಳನ್ನು ಪಂಚಾಯಿತಿ ಸದಸ್ಯರು ಆಯ್ಕೆಯಾದ ಪ್ರಾರಂಭದಲ್ಲಿ ಮಾಡಿದರೆ ಅನುಕೂಲವಾಗುವುದು. ಆದರೆ ಅಂತಿಮ ದಿನಗಳಲ್ಲಿ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಗ್ರಾಮೀಣ ಭಾಗದಲ್ಲಿ ವಸತಿ ರಹಿತರಿಗೆ ಅಗತ್ಯ ವಸತಿಯನ್ನು ಒದಗಿಸಲು ಸಾಧ್ಯವಾಗದಿರುವ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿರುವುದು ಸಹಜ. ಈಗಾಗಲೇ ಸಂಬಂಧಿಸಿದ ಸಚಿವರ ಜೊತೆ ಚರ್ಚಿಸಿ ತಾಲ್ಲೂಕಿಗೆ ಅಗತ್ಯವಿರುವಷ್ಟು ವಸತಿಗಳನ್ನು ಒದಗಿಸುವಂತೆ ಕೋರಿದ್ದೇನೆ ಎಂದು ತಿಳಿಸಿದರು.
ಕಾರ್ಯಕ್ರಮದ ಅರ್ಧ ಭಾಗ ಪುಸ್ತಕ ಬಿಡುಗಡೆ, ಅಭಿನಂದನೆಗೆ ಸೀಮಿತವಾಯಿತು. ಬೆರಳೆಣಿಕೆಯಷ್ಟಿದ್ದ ಸದಸ್ಯರಿಗೆ ಸಂಪನ್ಮೂಲ ವ್ಯಕ್ತಿಗಳು ತರಬೇತಿ ನೀಡಿದರು.
ತಾಲ್ಲೂಕು ಪಂಚಾಯಿತಿ ಇಒ ಶಿವಪ್ರಕಾಶ್, ಆಡಳಿತಾಧಿಕಾರಿ, ವಿವಿಧ ಇಲಾಖೆ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷ, ಸದಸ್ಯರು, ಅಭಿವೃದ್ಧಿ ಅಧಿಕಾರಿಗಳು, ತಾಲ್ಲೂಕು ಪಂಚಾಯಿತಿ ಸಿಬ್ಬಂದಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.