ADVERTISEMENT

ತಾ.ಪಂ ಕೆಡಿಪಿ ಸಭೆ: ಶಿಷ್ಟಾಚಾರ ಉಲ್ಲಂಘನೆ ಆರೋಪ

ಚಿಕ್ಕನಾಯಕನಹಳ್ಳಿ ಜಿಲ್ಲಾ ಪಂಚಾಯಿತಿ ಸದಸ್ಯರ ಆರೋಪ

​ಪ್ರಜಾವಾಣಿ ವಾರ್ತೆ
Published 4 ಜುಲೈ 2020, 15:03 IST
Last Updated 4 ಜುಲೈ 2020, 15:03 IST
ತುಮಕೂರು ಜಿಲ್ಲಾ ಪಂಚಾಯಿತಿ
ತುಮಕೂರು ಜಿಲ್ಲಾ ಪಂಚಾಯಿತಿ   

ತುಮಕೂರು: ಚಿಕ್ಕನಾಯಕನಹಳ್ಳಿ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ 2020-21ನೇ ಸಾಲಿನ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ನಮಗೆ ಅಗೌರವ ತೋರಿ ಶಿಷ್ಟಾಚಾರ ಉಲ್ಲಂಘಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಆರ್.ರಾಮಚಂದ್ರಯ್ಯ, ಜಿ.ಪಂ ಸದಸ್ಯರಾದ ಕಲ್ಲೇಶ್, ಸಿದ್ಧರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಶನಿವಾರ ಕೆಡಿಪಿ ಸಭೆ ಇದೆ ಎಂದು ಶುಕ್ರವಾರ ಸಂಜೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮಾಹಿತಿ ನೀಡಿದ್ದಾರೆ. ಒಂದು ದಿನದಲ್ಲಿ ನಾವು ಕ್ಷೇತ್ರದ ಸಮಸ್ಯೆಗಳ ಬಗ್ಗೆ ಅವಲೋಕನ ಮಾಡುವುದಾದರೂ ಹೇಗೆ? ವರದಿಯಲ್ಲಿರುವ ಮಾಹಿತಿ ತಿಳಿದುಕೊಳ್ಳಲು ನಮಗೆ ಸಮಯ ಬೇಡವೇ’ ಎಂದು ಪ್ರಶ್ನಿಸಿದರು.

‘ಸಭೆಯಲ್ಲಿ ಈ ಬಗ್ಗೆ ಮಧುಸ್ವಾಮಿ ಅವರನ್ನು ಪ್ರಶ್ನಿಸಿದರೆ ಮೌನವಹಿಸುತ್ತಾರೆ. ನಮಗೆ ಅಗೌರವ ತೋರಿರುವ ಸಭೆಯಲ್ಲಿ ಭಾಗವಹಿಸುವುದಿಲ್ಲ ಎಂದು ಸಭೆಯಿಂದ ಹೊರ ನಡೆಯುತ್ತೇವೆ ಎಂದರೆ ಸಚಿವರು ಹೋಗಿ ಹೋಗಿ ಎನ್ನುತ್ತಾರೆ. ಆದ್ದರಿಂದ ನಾವು ಸಭೆಬಹಿಷ್ಕರಿಸಿ ಹೊರಬಂದೆವು. ಇದು ಸಚಿವರ ಸರ್ವಾಧಿಕಾರಿ ಧೋರಣೆ’ ಎಂದು ದೂರಿದರು.

ADVERTISEMENT

‘ತಾಲ್ಲೂಕಿನಲ್ಲಿ ಯಾವುದೇ ಸರ್ಕಾರಿ ಕಾರ್ಯಕ್ರಮ, ಸಭೆ ನಡೆದರೂ ಜಿಲ್ಲಾ ಪಂಚಾಯಿತಿ ಸದಸ್ಯರಾದ ನಮಗೆ ತಾಲ್ಲೂಕು ಪಂಚಾಯಿತಿ ಇಒ, ತಹಶೀಲ್ದಾರ್ ಮಾಹಿತಿ ನೀಡುವುದಿಲ್ಲ. ಚಿ.ನಾ.ಹಳ್ಳಿ ಕ್ಷೇತ್ರದಲ್ಲಿ ಜಿ.ಪಂ ಸದಸ್ಯರು ಇದ್ದಾರೆ ಎಂಬುದನ್ನೇ ತಾಲ್ಲೂಕು ಅಧಿಕಾರಿಗಳು ಮರೆತಿದ್ದಾರೆ’ ಎಂದು ಆರೋಪಿಸಿದರು.

ಇದೇ ರೀತಿ ಅಧಿಕಾರಿಗಳು ನಮ್ಮನ್ನು ನಿರ್ಲಕ್ಷಿಸಿದರೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮನವಿ ಸಲ್ಲಿಸಿ ಅಧಿಕಾರಿಗಳ ಸರ್ವಾಧಿಕಾರಿ ಧೋರಣೆ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.