ADVERTISEMENT

`ಇತಿಹಾಸ ಮಾರುಕಟ್ಟೆ ಸರಕಲ್ಲ'

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2013, 9:34 IST
Last Updated 14 ಏಪ್ರಿಲ್ 2013, 9:34 IST

ಉಡುಪಿ: `ಇತಿಹಾಸ ಎಂಬುದು ಮಾರುಕಟ್ಟೆ ಸರಕಾಗಿಲ್ಲ, ಆದ ಕಾರಣ ಸರ್ಕಾರ ಕೂಡ ಅದರ ಬಗ್ಗೆ ಗಮನ ಹರಿಸುತ್ತಿಲ್ಲ' ಎಂದು ಅರ್ಥಶಾಸ್ತ್ರಜ್ಞ ಡಾ.ಎಂ.ಗೋವಿಂದ ರಾವ್ ಹೇಳಿದರು.

ಡಾ.ಪಾದೂರು ಗುರುರಾಜ ಭಟ್ ಮೆಮೋರಿಯಲ್ ಟ್ರಸ್ಟ್ ಎಂಜಿಎಂ ಕಾಲೇಜಿನ ರವೀಂದ್ರ ಮಂಟಪದಲ್ಲಿ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಇತಿಹಾಸಕಾರ ಡಾ.ಅ.ಸುಂದರ ಅವರಿಗೆ ಡಾ. ಪಾದೂರು ಗುರುರಾಜ ಭಟ್ ಸ್ಮಾರಕ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

ಇತಿಹಾಸದ ಮಾರುಕಟ್ಟೆ ಮೌಲ್ಯ ಕುಸಿದಲ್ಲಿ ಸರ್ಕಾರದ ಬೆಂಬಲವೂ ಕುಸಿಯುತ್ತದೆ. ಚರಿತ್ರೆಯನ್ನು ಯಾರು ರಕ್ಷಿಸುವವರು ಎಂಬ ಪ್ರಶ್ನೆಗೆ ಉತ್ತರ ಸಿಗುತ್ತಿಲ್ಲ ಎಂದರು.

ಇತಿಹಾಸಕಾರ ಯಾವುದೇ ಫಲಾಪೇಕ್ಷೆ ಇಲ್ಲದೆ ಕೆಲಸ ಮಾಡಬೇಕು, ಅದಕ್ಕೆ ಪಾದೂರು ಗುರುರಾಜ ಭಟ್ಟರು ಮಾರ್ಗದರ್ಶಕರು. ಅವರು ನಡೆದಾಡುವ ವಿಶ್ವಕೋಶವಾಗಿದ್ದರು. ಗುರುರಾಜ ಭಟ್ಟರ ಶೋಧನೆ ಪರಿಣಾಮ ತುಳುನಾಡಿನ ಪ್ರತಿ ಹಳ್ಳಿಗೂ ಸ್ವತಂತ್ರ ಅಸ್ತಿತ್ವ ಬಂದಿದೆ ಎಂದು ಅವರು ಹೇಳಿದರು.

ತುಳುನಾಡಿನ ದೇವಸ್ಥಾನಗಳನ್ನು ನೋಡಿ ಸಮಗ್ರ ವಿಶ್ಲೇಷಣೆ ನೀಡಿದವರು ಪಾದೂರು ಗುರುರಾಜ ಭಟ್ಟರು. ಅವರಿಂದಾಗಿ ಇತಿಹಾಸ ಪ್ರತಿ ಮನೆ ಮನೆಗೆ ತಲುಪಿದೆ ಎಂದು ಮಂಗಳೂರು ವಿವಿಯ ಇತಿಹಾಸ ವಿಭಾಗದ ನಿವೃತ್ತ ಉಪನ್ಯಾಸಕ ಡಾ. ಸುರೇಂದ್ರ ರಾವ್ ಹೇಳಿದರು.

ಜನರಿಗೆ ಇತಿಹಾಸದ ಪಾಠ ಹೇಳುವುದು ಇತಿಹಾಸಕಾರರ ಕೆಲಸವಲ್ಲ. ಇಂದಿನ ಮಾದ್ಯಮಗಳಲ್ಲಿ ಬರೆಯುವವರಿಗೆ ಹಾಗೂ ಪ್ರತಿಕ್ರಿಯೆ ನೀಡುವವರಿಗೆ ಇತಿಹಾಸ ತಿಳಿದಿಲ್ಲ. ಗುರುರಾಜ ಭಟ್ಟರು ಸಂಶೋಧನೆ ನಡೆಸಿ ಅದನ್ನು ಪತ್ರಿಕೆಗಳಲ್ಲಿ ಪ್ರಕಟಿಸುತ್ತಿದ್ದರು ಎಂದು ಅವರು ತಿಳಿಸಿದರು.

ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಸಂಸ್ಥೆಯ ನಿರ್ದೇಶಕ ಡಾ. ಆರ್.ಎಸ್. ದೇಶಪಾಂಡೆ, ಕರ್ನಾಟಕ ಬ್ಯಾಂಕ್‌ನ ವ್ಯವಸ್ಥಾಪಕ ಎ. ಅನಂತಕೃಷ್ಣ, ಡಾ.ಪಾದೂರು ಗುರುರಾಜ ಭಟ್ಟರ ಪತ್ನಿ ಪಾರ್ವತಿ ಭಟ್ ಇದ್ದರು.

ಡಾ.ಪಾದೂರು ಗುರುರಾಜ ಭಟ್ ಮೆಮೋರಿಯಲ್ ಟ್ರಸ್ಟ್‌ನ ಮುಖ್ಯಸ್ಥ ಪ್ರೊ. ಶ್ರೀಪತಿ ತಂತ್ರಿ ಸ್ವಾಗತಿಸಿದರು. ಅಧ್ಯಕ್ಷ ಪರಶುರಾಮ್ ಭಟ್‌ವಂದಿಸಿದರು. ಡಾ.ಶಾರ್ವರಿ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.