ADVERTISEMENT

ಉಡುಪಿ ಜಿ.ಪಂ: ಬಿಜೆಪಿ ಭಿನ್ನಮತ ಸ್ಫೋಟ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2011, 9:15 IST
Last Updated 10 ಫೆಬ್ರುವರಿ 2011, 9:15 IST

ಉಡುಪಿ: ಉಡುಪಿ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಮೊದಲ ಬಾರಿ ಬಿಜೆಪಿ ಸ್ಪಷ್ಟ ಬಹುಮತದಿಂದ ಅಧಿಕಾರ ಚುಕ್ಕಾಣಿ ಹಿಡಿಯುವ ಸಂದರ್ಭದಲ್ಲೇ ಪಕ್ಷದಲ್ಲಿ ಭಿನ್ನಮತ ಭುಗಿಲೆದ್ದಿದೆ.  ಹಿರಿಯಡ್ಕ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಸದಸ್ಯ ಉಪೇಂದ್ರ ನಾಯಕ್ ಅವರಿಗೆ ಕೊನೆ ಕ್ಷಣದಲ್ಲಿ ಜಿ.ಪಂ. ಅಧ್ಯಕ್ಷ ಸ್ಥಾನ ನಿರಾಕರಿಸಿದ್ದನ್ನು ವಿರೋಧಿಸಿ ಅವರ ನೂರಕ್ಕೂ ಅಧಿಕ ಬೆಂಬಲಿಗರು ಪಕ್ಷದ ಜಿಲ್ಲಾ ಕಚೇರಿಗೆ ಬುಧವಾರ ಮುತ್ತಿಗೆ ಹಾಕಿದರು.

ಶಾಸಕರು ಹಾಗೂ ಪಕ್ಷದ ಜಿಲ್ಲಾ ಅಧ್ಯಕ್ಷರು ಸ್ಥಳಕ್ಕೆ ಆಗಮಿಸಿ ವಿವಾದ ಬಗೆಹರಿಸಬೇಕು ಎಂದು ರಾಜಾಪುರಿ ಸಾರಸ್ವತ ಸಮುದಾಯದ ಬೆಂಬಲಿಗರು ಪಟ್ಟು ಹಿಡಿದರು. ಪ್ರತಿಭಟನಾಕಾರ ಬೇಡಿಕೆಗೆ ಮಣಿದು ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಉದಯ್ ಕುಮಾರ್ ಶೆಟ್ಟಿ, ಶಾಸಕರಾದ ಲಾಲಾಜಿ ಆರ್.ಮೆಂಡನ್, ರಘುಪತಿ ಭಟ್ ಹಾಗೂ ಪಕ್ಷದ ಪ್ರಮುಖ ಸೋಮಶೇಖರ ಭಟ್ ಕಚೇರಿಗೆ ದೌಡಾಯಿಸಿದರು. 

ಎರಡನೇ ಬಾರಿ ಜಿ.ಪಂ. ಸದಸ್ಯರಾಗಿರುವ ಉಪೇಂದ್ರ ನಾಯಕ್, ಮೂರು ಬಾರಿ 80ನೇ ಬಡಗುಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಪಕ್ಷ ಕಟ್ಟಿಬೆಳೆಸಿದ್ದಾರೆ. ಅರ್ಹತೆ ಕಡೆಗಣಿಸಿ ಜಾತಿ ಲಾಬಿಗೆ ಮಣಿದು ಜಿ.ಪಂ. ಅಧ್ಯಕ್ಷ ಸ್ಥಾನ ನಿರಾಕರಿಸಲಾಗಿದೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು. ಪ್ರತಿಭಟನಾಕಾರರನ್ನು ಸಮಾಧಾನ ಮಾಡಲು ಯತ್ನಿಸಿದ ಉದಯ್ ಕುಮಾರ್ ಶೆಟ್ಟಿ, ‘ಯಾವುದೇ ಲಾಬಿಗೆ ಪಕ್ಷ ಮಣಿದಿಲ್ಲ. ಪಕ್ಷದ ಕೇಂದ್ರೀಯ ಸಮಿತಿಯ 12 ಸದಸ್ಯರು ಸಾಕಷ್ಟು ಚರ್ಚಿಸಿ ಕೆ.ಕಟಪಾಡಿ ಶಂಕರ ಪೂಜಾರಿ ಅವರ ಹೆಸರನ್ನು ಜಿ.ಪಂ. ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿದ್ದಾರೆ. ಹಿರಿತನದ ಆಧಾರದಲ್ಲಿ ಶಂಕರ ಪೂಜಾರಿ ಅವರಿಗೆ ಅವಕಾಶ ಕಲ್ಪಿಸಲಾಗಿದೆ. ಇದರ ಹಿಂದೆ ರಾಜಕೀಯವಿಲ್ಲ’ ಎಂದರು.

ಭಾಷಣ ಕೇಳಲು ಬಂದಿಲ್ಲ: ಸ್ವಲ್ಪ ಹೊತ್ತು ಅಧ್ಯಕ್ಷರ ಮಾತನ್ನು ಆಲಿಸಿದ ಪ್ರತಿಭಟನಾಕಾರರು ಬಳಿಕ ತಿರುಗಿಬಿದ್ದರು. ‘ನಾವು ಭಾಷಣ ಕೇಳಲು ಬಂದಿಲ್ಲ. ಉಪೇಂದ್ರ ನಾಯಕ್‌ಗೆ ಅಧ್ಯಕ್ಷ ಸ್ಥಾನ ಕಲ್ಪಿಸುತ್ತೀರೋ ಇಲ್ಲವೋ ಸ್ಪಷ್ಟಪಡಿಸಿ. ಪಕ್ಷವನ್ನು ಈ ಹಂತಕ್ಕೆ ಕಟ್ಟಿಬೆಳೆಸಿದ ನಿಷ್ಠಾವಂತ ಕಾರ್ಯಕರ್ತರು ನಾವು. ಚುನಾವಣೆಯ ನೆಪ ಹೇಳಿ ನಿಷ್ಠಾವಂತರನ್ನು ಹಾದಿತಪ್ಪಿಸುವ ಮೂಲಕ ಬಿಜೆಪಿ ಬೇರೆ ಪಕ್ಷಕ್ಕಿಂತ ಭಿನ್ನ ಅಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದೀರಿ. ಸಾಮರ್ಥ್ಯ ಏನೆಂಬುದನ್ನು ಚುನಾವಣೆಯ ಸಂದರ್ಭದಲ್ಲೇ ನಾವೂ ತೋರಿಸುತ್ತೇವೆ’ ಎಂದು ಕೆಲವು ಪ್ರತಿಭಟನಾಕಾರರು ಸಭಾಂಗಣದಿಂದ ಹೊರನಡೆದರು.

ಉದಯ್ ಕುಮಾರ್ ಶೆಟ್ಟಿ ಮತ್ತೆ ಭಾಷಣ ಮುಂದುವರಿಸಿದಾಗ ಸಭೆಯಲ್ಲಿದ್ದವರೆಲ್ಲ ಎದ್ದು ವರಿಷ್ಠರತ್ತ ಧಾವಿಸಿದರು. ಅರ್ಧ ಗಂಟೆಗೂ ಅಧಿಕ ಕಾಲ ಮುತ್ತಿಗೆ ಹಾಕಿ ವರಿಷ್ಠರನ್ನು ತರಾಟೆಗೆ ತೆಗೆದುಕೊಂಡರು.

ರಾಜೀನಾಮೆಗೆ ಒತ್ತಾಯ: ಪಕ್ಷದ ಜಿಲ್ಲಾ ಘಟಕ ಅಧ್ಯಕ್ಷ ಉದಯ್ ಕುಮಾರ್ ಶೆಟ್ಟಿ ರಾಜೀನಾಮೆ ನೀಡಬೇಕು ಎಂದು ಕೆಲವರು ಒತ್ತಾಯಿಸಿದರು. ‘ಚುನಾವಣೆ ವೇಳೆ ಮಾತ್ರ ನಿಮಗೆ ನಮ್ಮ ನೆನಪಾಗುತ್ತದೆ. ಮುಂದಿನ ಚುನಾವಣೆಯಲ್ಲಿ ಪಾಠ ಕಲಿಸುತ್ತೇವೆ’ ಎಂದು ಕೆಲವರು ಶಾಸಕ ಲಾಲಾಜಿ ಮೆಂಡನ್ ಅವರನ್ನು ತರಾಟೆಗೆ ತೆಗೆದುಕೊಂಡರು.

ಸಾಮೂಹಿಕ ರಾಜೀನಾಮೆ ಬೆದರಿಕೆ: ಕೆಲವು ಕಾರ್ಯಕರ್ತರು ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ, ಆರ್‌ಎಸ್‌ಬಿ ಸಮುದಾಯದ ಚುನಾಯಿತ ಪ್ರತಿನಿಧಿಗಳಿಂದ ಸಾಮೂಹಿಕ ರಾಜೀನಾಮೆ ಕೊಡಿಸುತ್ತೇವೆ, ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು ಬೆಂಬಲಿಸುತ್ತೇವೆ’ ಎಂದೂ ಬೆದರಿಕೆ ಒಡ್ಡಿದರು.

‘ಈ ರೀತಿಯ ಬೆದರಿಕೆಗೆ ಪಕ್ಷ ಬಗ್ಗುವುದಿಲ್ಲ. ಕೇಂದ್ರೀಯ ಸಮಿತಿ ತಳೆದ ತೀರ್ಮಾನವೇ ಅಂತಿಮ’ ಎಂದು ಉದಯ್ ಕುಮಾರ್ ಶೆಟ್ಟಿ ಸ್ಪಷ್ಟಪಡಿಸಿದರು.
ಕೇಂದ್ರೀಯ ಸಮಿತಿ ಸಭೆಯಲ್ಲಿ ಈ ವಿವಾದ ಬಗೆಹರಿಸುವುದಾಗಿ ಸಂಘಪರಿವಾರದ ವರಿಷ್ಠ ಸೋಮಶೇಖರ ಭಟ್ ಭರವಸೆ ನೀಡಿದರು. ಬಳಿಕ ಪ್ರತಿಭಟನಾಕಾರರು ಕಚೇರಿಯಿಂದ ನಿರ್ಗಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.