ADVERTISEMENT

ಕಡಲ್ಕೊರೆತ: ಪರಿಹಾರ ಮರೀಚಿಕೆ?

​ಪ್ರಜಾವಾಣಿ ವಾರ್ತೆ
Published 20 ಜೂನ್ 2013, 13:38 IST
Last Updated 20 ಜೂನ್ 2013, 13:38 IST

ಶಿರ್ವ: ವರ್ಷಂಪ್ರತಿ ಮಳೆಗಾಲ ಆರಂಭವಾದಾಗ ಕರಾವಳಿಯಲ್ಲಿ ಭೀತಿಯ ವಾತಾವರಣ ಸೃಷ್ಟಿಸುವ ಸಮುದ್ರ ಕೊರೆತ ಜನಸಾಮಾನ್ಯರನ್ನು ಮತ್ತು ಜನಪ್ರತಿನಿಧಿಗಳನ್ನು ಸಂಕಷ್ಟಕ್ಕೆ ಸಿಲುಕಿಸಿದರೂ ಸಮುದ್ರ ಕೊರೆತಕ್ಕೆ ಶಾಶ್ವತ ಪರಿಹಾರ ಕಲ್ಪಿಸುವ ಕನಸು ಮಾತ್ರ ನನಸಾಗಲೇ ಇಲ್ಲ.

ಕಡಲ್ಕೊರೆತ ತಡೆಗೆ ಶಾಶ್ವತ ಯೋಜನೆಯನ್ನು ಕೈಗೊಳ್ಳುವ ನಿಟ್ಟಿನಲ್ಲಿ ಸರ್ಕಾರ ಗಂಭೀರ ಚಿಂತನೆ ನಡೆಸಿಲ್ಲ. ಇದರಿಂದ ಕರಾವಳಿ ತೀರದ ಎಕರೆಗಟ್ಟಲೆ ಭೂ ಪ್ರದೇಶ ಪ್ರತಿ ಮಳೆಗಾಲದಲ್ಲೂ ನೀರುಪಾಲಾಗುತ್ತಿದೆ. ಸಮುದ್ರ ಕೊರೆತದಿಂದ ಸಮುದ್ರ ತೀರದ ಕರಾವಳಿ ರಸ್ತೆಗಳಂತೂ ತಮ್ಮ ಸ್ವರೂಪವನ್ನೇ ಕಳೆದುಕೊಳ್ಳುತ್ತಿವೆ. 

ಸಮುದ್ರ ಕೊರೆತದಿಂದ ಮನೆ, ಆಸ್ತಿಪಾಸ್ತಿ ನಷ್ಟವಾದಲ್ಲಿ ಸರ್ಕಾರದಿಂದ ಸಿಗುವ ಪರಿಹಾರ ಕೂಡಾ ಕಡಿಮೆಯಾಗಿದೆ. ಕರಾವಳಿ ತೀರದ ನಿವಾಸಿಗಳು ಜೀವ ಕೈಯಲ್ಲಿ ಹಿಡಿದುಕೊಂಡು ದೇವರ ಮೇಲೆ ಭಾರ ಹಾಕಿ ಆತಂಕದಿಂದಲೇ ಜೀವಿಸುತ್ತಿದ್ದಾರೆ. ಪ್ರತಿವರ್ಷ ಮಳೆಗಾಲದಲ್ಲಿ ಕರಾವಳಿಗರು ಸಮುದ್ರ ಕೊರೆತದ ಸಮಸ್ಯೆಯನ್ನು ಎದುರಿಸುತ್ತಿದ್ದರೂ ಜನಪ್ರತಿನಿಧಿಗಳು ಕಡಲತೀರಕ್ಕೆ ಭೇಟಿ ನೀಡಿ ಸಮುದ್ರ ಕೊರೆತಕ್ಕೆ ಶಾಶ್ವತ ಪರಿಹಾರ ಕಲ್ಪಿಸುವ ಭರವಸೆ ನೀಡಿ ಹೇಗೋ ಮಳೆಗಾಲವನ್ನು ಸಾಗ ಹಾಕುತ್ತಾರೆ. ಮತ್ತೆ ಬೇಸಿಗೆಯಲ್ಲಿ ತಾವು ಕೊಟ್ಟಿರುವ ಭರವಸೆಗಳನ್ನು ಮರೆತುಬಿಡುತ್ತಾರೆ. ಕರಾವಳಿಗರಿಗೆ ಈಗ ಬೇಕಾಗಿರುವುದು  ಜನಪ್ರತಿನಿಧಿಗಳ ಸಾಂತ್ವನವಲ್ಲ, ಅವರು ಬಯಸುವುದು ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರ ಸೂತ್ರ.

ಫ್ರಾನ್ಸ್, ಕೇರಳ ತಂತ್ರಜ್ಞಾನವೂ ನೆನೆಗುದಿಗೆ!
ಐದಾರು ವರ್ಷಗಳ ಹಿಂದೆ ಕರಾವಳಿಯಲ್ಲಿ ಕಡಲ್ಕೊರೆತವನ್ನು ತಡೆಯಲು ಫ್ರಾನ್ಸ್ ತಂತ್ರಜ್ಞಾನ ಅಳವಡಿಸುತ್ತೇವೆ ಎಂದು ಫ್ರಾನ್ಸ್‌ಗೆ ತೆರಳಿ ವಾಪಸ್ ಆದ ಕೆಲ ರಾಜ್ಯ ಸಚಿವರ ಮಹದಾಸೆ ಕೂಡಾ ಈವರೆಗೆ ಈಡೇರಲಿಲ್ಲ. ಕೇರಳ ಮಾದರಿಯ ತಡೆಗೋಡೆ ನಿರ್ಮಾಣವೂ ಕನಸಾಗಿ ಉಳಿದಿದೆ. ರಾಜ್ಯದ ಕರಾವಳಿ ಭಾಗದಲ್ಲಿ ಸಮುದ್ರ ಕೊರೆತಕ್ಕೆ ಶಾಶ್ವತ ತಡೆಗೋಡೆ ನಿರ್ಮಾಣ ಕಾಮಗಾರಿ 2014ರಿಂದ 2018ರೊಳಗೆ ಪೂರ್ಣಗೊಳ್ಳಲಿದೆ ಎಂದು ಕಳೆದ ವರ್ಷ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಡಾ.ವಿ.ಎಸ್.ಆಚಾರ್ಯ ಘೋಷಿಸಿದ್ದರು.

ಕಡಲ್ಕೊರೆತ ಸಮಸ್ಯೆ ಬಗೆಹರಿಸಲು ಎಡಿಬಿ, ವಿಶ್ವಬ್ಯಾಂಕ್ ಅನುದಾನದಡಿ ರೂ 980 ಕೋಟಿ ವೆಚ್ಚದಲ್ಲಿ ಶಾಶ್ವತ ತಡೆಗೋಡೆ ನಿರ್ಮಾಣ ಯೋಜನೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಜಂಟಿಯಾಗಿ ಕೈಗೆತ್ತಿಕೊಳ್ಳಲಿದೆ. ಈ ಯೋಜನೆಯಡಿ ಮಂಜೂರಾದ ಅನುದಾನದಲ್ಲಿ 300ಕೋಟಿ ಅನುದಾನವನ್ನು ದಕ್ಷಿಣ ಕನ್ನಡ ಜಿಲ್ಲೆಯ ಕರಾವಳಿ ಭಾಗದ ಕಡಲ್ಕೊರೆತ ಸಮಸ್ಯೆಗೆ ಪರಿಹಾರ ಕಲ್ಪಿಸಲು ವಿನಿಯೋಗಿಸಲಾಗುವುದು ಎಂದು ಆಶ್ವಾಸನೆ ನೀಡಿದ್ದರು.

ಆದರೆ ಕಡಲ್ಕೊರೆತ ಸಮಸ್ಯೆ ಮಾತ್ರ ಕರಾವಳಿಯುದ್ದಕ್ಕೂ ಅಪಾಯದ ಗಂಟೆ ಬಾರಿಸುತ್ತಲೇ ಇದೆ. ಸಮುದ್ರ ತೀರದ ನಿವಾಸಿಗಳ ಪಾಡು ಮಾತ್ರ ಹೇಳತೀರದು. ಕರಾವಳಿ ತೀರದಲ್ಲಿ ವಾಸಿಸುತ್ತಿರುವ ಹೆಚ್ಚಿನ ಜನರು ಮೀನುಗಾರಿಕೆ ನಂಬಿಕೊಂಡು ಜೀವನ ನಡೆಸುವುದರಿಂದ ಸಮುದ್ರ ಅಥವಾ ಹೊಳೆಗಳಿಗೆ ಹತ್ತಿರದಲ್ಲೇ ವಾಸಮಾಡಬೇಕಾದ ಅನಿವಾರ್ಯತೆ ಇದೆ. ಸಮಸ್ಯೆಯೂ ವರ್ಷ ಕಳೆದಂತೆ ಹೆಚ್ಚುತ್ತಲೇ ಇದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.